ಶಿವಮೊಗ್ಗ : ಅಕ್ಟೋಬರ್ 24 : ಜಿಲ್ಲೆಯಲ್ಲಿ ಕಳೆದ ನಾಲ್ಕಾರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಮನೆಹಾನಿ, ಜೀವಹಾನಿ, ಬೆಳೆಹಾನಿ ಮುಂತಾದವುಗಳಿಗೆ ಪರಿಹಾರ ಶಾಲಾ ಕಟ್ಟಡ, ರಸ್ತೆ, ಸೇತುವೆಗಳ ದುರಸ್ತಿಗೊಳಿಸಲು ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಮತ್ತು ಯುವಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಮಳೆಹಾನಿ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಹಿಂದೆ ಮಳೆಹಾನಿಯಿಂದ ಸಂತ್ರಸ್ಥರಾದವರೆಲ್ಲರಿಗೂ ಪರಿಹಾರ ಧನ ನೀಡಲಾಗಿದೆ. ಪ್ರಸ್ತುತ ಹಾನಿಗೊಳಗಾಗಿರುವ ಫಲಾನುಭವಿಗಳಿಗೂ ತ್ವರಿತಗತಿಯಲ್ಲಿ ಪರಿಹಾರ ಧನ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು, ಭದ್ರಾವತಿಯಲ್ಲಿ ನಿನ್ನೆ ಮಳೆಯಿಂದಾಗಿ ಜೀವಹಾನಿಯಾಗಿರುವ ಕುಟುಂಬದ ಅವಲಂಬಿತರಿಗೆ ಕೂಡಲೇ 5ಲಕ್ಷ ರೂ.ಗಳ ಪರಿಹಾರಧನವನ್ನು ನೀಡುವಂತೆಯೂ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಈ ಹಿಂದೆ ಮಳೆಯಿಂದ ಮನೆಹಾನಿಯಾಗಿರುವ ಮಂಡ್ಲಿ, ಚಿಕ್ಕಲ್ ಮತ್ತು ಶಾಂತಮ್ಮ ಲೇಔಟ್‍ನ ಇನ್ನೂ ಕೆಲವು ಫಲಾನುಭವಿಗಳಿಗೆ ತಕ್ಷಣದ ಪರಿಹಾರಧನ ಮಂಜೂರಾಗದಿರುವ ಬಗ್ಗೆ ಅಹವಾಲುಗಳಿದ್ದು, ಅವುಗಳನ್ನು ಕೂಡಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಮಳೆಹಾನಿಗೊಳಗಾದ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ, ಅಂಗನವಾಡಿ ಕೆಂದ್ರಗಳ ದುರಸ್ತಿಗೆ ಅಗತ್ಯ ಅನುದಾನ ಮಂಜೂರಾಗಿದ್ದು, ನವೆಂಬರ್ 05ರೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸಲಾಗುವುದು. ಆ ಕಾಮಗಾರಿಗಳ ಉದ್ಘಾಟನೆಯನ್ನು 05ರಂದೆ ನೆರವೇರಿಸಲಾಗುವುದು. ಒಟ್ಟು 9ಕೋಟಿ ಹಾಗೂ ಶೌಚಾಲಯಗಳ ದುರಸ್ತಿಗೆ 4.50ಕೋಟಿ ರೂ.ಗಳ ವೆಚ್ಚದಲ್ಲಿ ನಡೆಯಲಿರುವ ಈ ಕಾಮಗಾರಿಯು ಆರಂಭಗೊಂಡ 2-3ತಿಂಗಳೊಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೊಳಪಡುವ ಜಿಲ್ಲೆಯ 182ಕೆರೆಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 441ಕೆರೆಗಳನ್ನು 24ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೂಡಲೆ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿವಮೊಗ್ಗ ಜಿಲ್ಲೆಯ ಎಲ್ಲಾ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರದಿಂದ ಸೂಚನೆ ಹಾಗೂ ಅಗತ್ಯ ಅನುದಾನ ಬಂದಿದೆ. ಅಲ್ಲದೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರ ಅಪೇಕ್ಷೆಯಂತೆ ಕಾಮಗಾರಿಗಳನ್ನು ನಿರ್ವಹಿಸಲು ಸೂಚಿಸಲಾಗಿದೆ. ಒಟ್ಟಾರೆ ರಾಜ್ಯದ ಎಲ್ಲಾ ರಸ್ತೆಗಳ ಕಾಮಗಾರಿಗಳು ಆರಂಭವಾಗಲಿವೆ ಎಂದರು.
ಜಾನುವಾರು ಸಾವು ಪ್ರಕರಣಗಳಲ್ಲಿ ಅಗತ್ಯ ಪರಿಹಾರ ಧನ ವಿತರಿಸಲಾಗಿದೆ. ಪ್ರಸ್ತುತ ಮನೆಗೆ ನೀರು ನುಗ್ಗಿ ಹಾನಿಯಾಗಿರುವ 6705ಮನೆಗಳಿಗೆ ತಕ್ಷಣದ ಪರಿಹಾರವಾಗಿ 10,000/-ರೂ.ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮನೆ ಕಟ್ಟಿಕೊಳ್ಳಲು ತಲಾ 1ಲಕ್ಷ ರೂ.ಗಳನ್ನು ನೀಡಲಾಗಿದೆ. ಇತ್ತೀಚಿನ 4-6ದಿನಗಳಲ್ಲಿ ಬಿದ್ದ ಮಳೆಯಿಂದಾಗಿ ಜಿಲ್ಲೆಯಲ್ಲಿ 360ಮನೆಗಳು ಹಾನಿಗೊಳಗಾಗಿವೆ. ಅವುಗಳ ದುರಸ್ತಿಗೂ ಅನುದಾನ ನೀಡಲಾಗುವುದು ಎಂದರು.
ಬೆಳೆ ಹಾನಿ : 644ಹೆಕ್ಟೇರ್ ಭೂಮಿ ಜಲಾವೃತವಾಗಿದ್ದು, ಪರಿಹಾರ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಹಿಂದೆ ಬೆಳೆಹಾನಿ ಬಗ್ಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವೇ ಫಲಾನುಭವಿಗಳಿಗೆ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಮಂಡ್ಲಿಯಲ್ಲಿನ ಸಂತ್ರಸ್ಥ ನಿವಾಸಿಗಳಿಗೆ ಪರ್ಯಾಯವಾಗಿ ಸುರಕ್ಷಿತ ಸ್ಥಳದಲ್ಲಿ ಹೊಸದಾಗಿ ಮನೆಗಳನ್ನು ನಿರ್ಮಿಸಿ, ಅವರನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಅಲ್ಲಿ ಮಳೆ ನೀರು ಸುಲಭವಾಗಿ ಹರಿಯುವಂತಾಗಲು ಮಹಾನಗರಪಾಲಿಕೆ ಹಾಗೂ ಸೂಡಾ ಇಂಜಿನಿಯರರ ಸಲಹೆಯಂತೆ ಅಲ್ಲಿ ಬಾಕ್ಸ್‍ಡ್ರೈನೇಜ್‍ಗಳ ನಿರ್ಮಾಣಕ್ಕೂ ಕ್ರಮ ವಹಿಸಲಾಗುವುದು. ಅಲ್ಲದೇ ನಗರದ ಎಲ್ಲಾ ರಾಜಾಕಾಲುವೆಗಳ ದುರಸ್ತಿಗೂ ಕ್ರಮವಹಿಸಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾಹಿತಿ ನೀಡಿ, ಈ ಹಿಂದೆ ಆಗಿದ್ದ ಮಳೆಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 7515ಬಾದಿತ ಕುಟುಂಬಗಳಿಗೆ ಅರ್ಜಿಗಳನ್ನು ಪಡೆದುಕೊಳ್ಳಲಾಗಿದ್ದು, 6701ಕುಟುಂಬಕ್ಕೆ 670.10ಲಕ್ಷ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಚಿವರಿಗೆ ತಿಳಿಸಿದರು.
ಅಲ್ಲದೇ 18ಜೀವಹಾನಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈಗಾಗಲೇ 15ಕುಟುಂಬಗಳ ಅವಲಂಬಿತರಿಗೆ ತಲಾ ರೂ.5ಲಕ್ಷದಂತೆ 75ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಮೊನ್ನೆ ಜೀವಹಾನಿಯಾಗಿರುವ ಭದ್ರಾವತಿಯ ಒಂದು ಕುಟುಂಬದ ಅವಲಂಬಿತರಿಗೂ ಪರಿಹಾರಧನ ವಿತರಿಸಲಾಗುವುದು. ಮಳೆಯಿಂದ ಜಮೀನುಗಳಲ್ಲಿ ಮರಳು ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸಲು 4913ರೈತರ 2068.65ಹೆಕ್ಟೇರ್ ಜಮೀನಿಗೆ 232.097ಲಕ್ಷ ರೂ.ಗಳನ್ನು ವಿತರಿಸಲಾಗಿದೆ ಎಂದವರು ನುಡಿದರು.
ಸಭೆಯಲ್ಲಿ ಶಾಸಕರಾದ ಕೆ.ಬಿ.ಅಶೋಕನಾಯ್ಕ್, ಕುಮಾರ ಬಂಗಾರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಮಹಾನಗರಪಾಲಿಕೆ ಮಹಾಪೌರರಾದ ಶ್ರೀಮತಿ ಲತಾಗಣೇಶ್, ಉಪವiಹಾಪೌರ ಚನ್ನಬಸಪ್ಪ, ಮಹಾನಗರಪಾಲಿಕೆ ಆಯುಕ್ತ ಚಿದಾನಂದ್ ವಟಾರೆ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ., ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಸೂಡಾ ಆಯುಕ್ತ ಎಂ.ಕರಭೀಮಣ್ಣನವರ್, ಕೃಷಿ, ತೋಟಗಾರಿಕೆ, ಶಿಕ್ಷಣ, ಮಹಿಳೆ-ಮಕ್ಕಳ ಅಭಿವೃದ್ಧಿ ಇಲಾಖೆಗಳ ಉಪನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.