ಶಿವಮೊಗ್ಗ, ನವೆಂಬರ್ 08 : ಜಿಲ್ಲೆಯಲ್ಲಿ ಕಳೆದ 2-3ತಿಂಗಳ ಅವಧಿಯಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಸಂಭವಿಸಿದ ಮನೆಹಾನಿ, ಬೆಳೆಹಾನಿ, ಜೀವಹಾನಿ ಹಾಗೂ ಮುಂತಾದ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಳೆಹಾನಿಯ ಕುರಿತು ಜಿಲ್ಲಾಡಳಿತದ ವತಿಯಿಂದ ಕೈಗೊಳ್ಳಲಾದ ಪರಿಹಾರ ಕಾರ್ಯಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿಸ್ತøತ ಮಾಹಿತಿ ನೀಡಿದರು. ಈ ಅಕಾಲಿಕ ಮಳೆಯಿಂದಾಗಿ 18ಜೀವಹಾನಿ ಪ್ರಕರಣಗಳನ್ನು ಗುರುತಿಸಲಾಗಿದ್ದು, ಮೃತರ ಕುಟುಂಬಕ್ಕೆ ತಲಾ ರೂ.5.00ಲಕ್ಷಗಳಂತೆ 90ಲಕ್ಷ ರೂ.ಗಳ ಪರಿಹಾರ ಧನವನ್ನು ಈಗಾಗಲೇ ವಿತರಿಸಲಾಗಿದೆ ಎಂದವರು ನುಡಿದರು.
ಜಿಲ್ಲೆಯ ನೆರೆ ಸಂತ್ರಸ್ಥ ಕುಟುಂಬಗಳಿಂದ ಈವರೆಗೆ 7415ಅರ್ಜಿಗಳನ್ನು ಸ್ವೀಕರಿಸಿದ್ದು, ಸ್ವೀಕರಿಸಿದ ಎಲ್ಲಾ ಅರ್ಜಿಗಳಿಗೆ ತಲಾ ರೂ.10,000/-ನಂತೆ 741.50ಲಕ್ಷ ರೂಪಾಯಿಗಳ ತಕ್ಷಣದ ಪರಿಹಾರಧನವನ್ನು ವಿತರಿಸಲಾಗಿದೆ. ಇದರೊಂದಿಗೆ ಇತ್ತೀಚೆಗೆ ಬಂದ ಮಳೆಯಿಂದಾಗಿ ಹಾನಿಯಾಗಿರುವ ಬಗ್ಗೆಯೂ ಸಮೀಕ್ಷೆ ನಡೆಸಲಾಗುತ್ತಿದೆ. ಅಲ್ಲದೆ ಈಗಾಗಲೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದವರು ನುಡಿದರು.
ಈವರೆಗೆ 51ಜಾನುವಾರುಗಳು ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ 34ಜಾನುವಾರುಗಳಿಗೆ 8.87ಲಕ್ಷ ರೂ.ಗಳ ಪರಿಹಾರಧನ ವಿತರಿಸಲಾಗಿದೆ. ಉಳಿದಂತೆ 17ಜಾನುವಾರುಗಳಿಗೆ ರೂ.5.38ಲಕ್ಷ ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಬೆಳೆ ಹಾನಿ ಕುರಿತು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 43,000ಅರ್ಜಿಗಳು ಬಂದಿದ್ದು, ಪರಿಹಾರಕ್ಕಾಗಿ ಈಗಾಗಲೇ 33,000ಅರ್ಜಿಗಳನ್ನು ಆನ್‍ಲೈನ್ ಮೂಲಕ ನೋಂದಾಯಿಸಲಾಗಿದೆ. ಇಂದು ಸಂಜೆಯೊಳಗಾಗಿ ಉಳಿದ ಅರ್ಜಿಗಳ ನೋಂದಣಿ ಕಾರ್ಯವೂ ಪೂರ್ಣಗೊಳ್ಳಲಿದೆ ಎಂದ ಅವರು, ಬೆಳೆಹಾನಿ ಪರಿಹಾರಕ್ಕಾಗಿ 6284ರೈತರಿಗೆ ಮೊದಲ ಹಂತದಲ್ಲಿ 628.30ಲಕ್ಷ ರೂ.ಗಳ ಪರಿಹಾರಧನವನ್ನು ವಿತರಿಸಲಾಗಿದೆ ಎಂದರು.
ಮಳೆಯಿಂದ ಹಾನಿಯಾದ ಜಿಲ್ಲೆಯ 482ಕೆರೆಗಳ ದುರಸ್ತಿಗೆ ಜಿಲ್ಲಾ ಪಂಚಾಯತ್ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಕೆರೆಗಳ ದುರಸ್ತಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿಯಿಂದ ನಿರ್ವಹಿಸಲಾಗುತ್ತಿದೆ ಎಂದ ಅವರು, ಜಿಲ್ಲೆಯ 828ಶಾಲೆಗಳ 1707ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿಗಳಿಗೆ ರೂ.3448.54ಲಕ್ಷ ಮಂಜೂರಾಗಿದ್ದು, ಶಾಲೆಗಳ ದುರಸ್ತಿಕಾರ್ಯ ಪ್ರಗತಿಯಲ್ಲಿದೆ ಎಂದವರು ನುಡಿದರು.
ಜಿಲ್ಲೆಯ 255ಅಂಗನವಾಡಿ ದುರಸ್ತಿ ಕಾಮಗಾರಿಗಳಿಗೆ ರೂ. 499.65ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅನುಷ್ಠಾನಾಧಿಕಾರಿಗಳಾಗಿ ನೇಮಕಗೊಳಿಸಲಾಗಿದ್ದು, ಕೈಗೊಂಡ ಅನೇಕ ದುರಸ್ತಿಕಾರ್ಯಗಳು ಪ್ರಗತಿಯಾಗಿರುವ ಬಗ್ಗೆ ಮಾಹಿತಿ ಇದೆ ಎಂದವರು ನುಡಿದರು.
ಜಿಲ್ಲೆಯ 5794ರೈತರ ಗದ್ದೆಯಲ್ಲಿ ಮರಳು ಸಂಗ್ರಹವಾಗಿರುವ ಬಗ್ಗೆ ಅರ್ಜಿಗಳು ಬಂದಿದ್ದು, ಎನ್.ಡಿ.ಆರ್.ಎಫ್ ನಿಯಮಾನುಸಾರ 2297.15ಹೆ.ಜಮೀನಿಗೆ ರೂ.270.16ಲಕ್ಷಗಳ ಪರಿಹಾರಧನವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದ ಅವರು, ಇತ್ತೀಚೆಗೆ ಆಗಿರುವ ಬೆಳೆ ಹಾನಿ ಕುರಿತು ಬಾಧಿತ ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದರು.
ಬಾಧಿತ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಪೂರ್ವದಲ್ಲಿ ಜಮೆಯಾಗುವ ಹಣ ಅರ್ಹ ಫಲಾನುಭವಿಗೆ ತಲುಪಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಪರೀಕ್ಷಾರ್ಥವಾಗಿ ಒಂದು ರೂ.ವನ್ನು ಮೊದಲು ಜಮಾ ಮಾಡಲಾಗುವುದು. ಅರ್ಹ ಫಲಾನುಭವಿಗೆ ಹಣ ಜಮೆಯಾಗಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಉಳಿದ ಹಣವನ್ನು ತಕ್ಷಣವೇ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

error: Content is protected !!