ಶಿವಮೊಗ್ಗ ಮಾರ್ಚ್ 04 : ಮಲೆನಾಡು ವಸ್ತ್ರ ಉತ್ಸವ -22 ಜಿಲ್ಲಾ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಗರದ ಕರ್ನಾಟಕ ಸಂಘದಲ್ಲಿ ಮಾರ್ಚ್ 04 ರಿಂದ 09 ರವರೆಗೆ ಆಯೋಜಿಸಲಾಗಿದ್ದು, ಇಂದು ಸಂಜೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮತ್ತು ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ ಮೇಳಕ್ಕೆ ಚಾಲನೆ ನೀಡಿದರು.
ಕೇಂದ್ರ ಪುರಸ್ಕøತ ನ್ಯಾಷನಲ್ ಹ್ಯಾಂಡ್ಲೂಮ್ ಡೆವೆಲಪ್ಮೆಂಟ್ ಪ್ರೋಗ್ರಾಂ ಯೋಜನೆಯಡಿ ಶಿವರಾತ್ರಿ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಜಿಲ್ಲಾ ಕೈಮಗ್ಗ ಮೇಳವನ್ನು ಅಭಿವೃದ್ದಿ ಆಯುಕ್ತರು ಜವಳಿ ಮಂತ್ರಾಲಯ, ಭಾರತ ಸರ್ಕಾರ, ಜವಳಿ ಅಭಿವೃದ್ದಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ, ಬೆಂಗಳೂರು, ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ, ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದೆ. ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಮತ್ತು ಇತರೆ ಅಧಿಕಾರಿಗಳು ಕೈಮಗ್ಗ ಉತ್ಪನ್ನಗಳ ಮಳಿಗೆಗಳಿಗೆ ಭೇಟಿ ನೀಡಿ ತಮ್ಮ ತಮ್ಮ ಊರಿನ ಕೈಮಗ್ಗ ಉತ್ಪನ್ನಗಳು ಮತ್ತು ಅದರ ವೈಶಿಷ್ಟ್ಯದ ಕುರಿತು ಮಾರಾಟಗಾರರೊಂದಿಗೆ ಪರಿಶೀಲಿಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಸಪಾರೆ ಶ್ರೀನಿವಾಸ ಈ ವೇಳೆ ಮೇಳದ ಕುರಿತು ಮಾಹಿತಿ ನೀಡಿ, ಮೇಳದಲ್ಲಿ ರಾಜ್ಯ ಸರ್ಕಾರದಿಂದ ಶೇ.20 ರಷ್ಟು ರಿಯಾಯಿತಿ ದರದಲ್ಲಿ ಕೈಮಗ್ಗ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು ಸುಸಜ್ಜಿತವಾದ ಒಟ್ಟು 28 ಮಳಿಗೆಗಳನ್ನು ಸ್ಥಾಪಿಸಲಾಗಿ, ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯದ ಕೈಮಗ್ಗ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು. ವಿವಿಧ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಹಾವೇರಿ, ಗದಗ, ಚಿಕ್ಕಬಳ್ಳಾಪುರ ಹಾಗೂ ಹೊರ ರಾಜ್ಯಗಳಾದ ಪಶ್ಚಿಮ ಬಂಗಾಳ, ಗುಜರಾತ್ ರಾಜ್ಯಗಳ ಕೈಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು, ಪಾರಂಪರಾಗತ ಮೊಳಕಾಲ್ಮೂರು ಅಪ್ಪಟ ರೇಷ್ಮೆ ಸೀರೆಗಳು, ಇಳಕಲ್ ಸೀರೆಗಳು, ಉಣ್ಣೆ ಕಂಬಳಿಗಳು, ಜೊತೆಗೆ ವಿವಿಧ ಜಿಲ್ಲೆಗಳಲ್ಲಿ ತಯಾರಾಗುತ್ತಿರುವ ಹತ್ತಿ ಕೈಮಗ್ಗ ಉತ್ಪನ್ನಗಳಾದ ಕಾಟನ್ ಸೀರೆಗಳು, ಲುಂಗಿಗಳು, ಬೆಡ್ಶೀಟ್, ಶರ್ಟಿಂಗ್ಗಳು, ಕೈವಸ್ತ್ರ, ಟವಲ್ಸ್ ಇತ್ಯಾದಿ ಕೈಮಗ್ಗ ಉತ್ಪನ್ನಗಳು ನೇಕಾರ ಸಹಕಾರ ಸಂಘಗಳಿಂದ ನೇರವಾಗಿ ಗ್ರಾಹಕರಿಗೆ ಮಾರಾಟಕ್ಕೆ ಲಭ್ಯವಿದೆ ಎಂದು ತಿಳಿಸಿದರು. ಮೇಳದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಪ್ರವರ್ಧನಾಧಿಕರಿ ಅಪ್ಪಾ ರೇಖಾ ಸಿದ್ರಾಮಪ್ಪ, ಇತರೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.