ಹಣದುಬ್ಬರದಿಂದ ತತ್ತರಿಸಿರುವ ಜನಸಾಮಾನ್ಯರ ಆಶಾಕಿರಣ ‘ಗೃಹಜ್ಯೋತಿ’ ಯೋಜನೆ. ಈ ಯೋಜನೆಯಡಿ ಪ್ರತಿ ಗೃಹ ಬಳಕೆದಾರರು ಗರಿಷ್ಟ 200 ಯುನಿಟ್ವರೆಗೆ ವಿದ್ಯುತ್ನ್ನು ಉಚಿತವಾಗಿ ಪಡೆಯುವರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯು ಬೆಲೆ ಏರಿಕೆಯಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ವರದಾನವಾಗಿದೆ.ಗೃಹಜ್ಯೋತಿ ಅನುಷ್ಟಾನದಲ್ಲಿ ಅತ್ಯಂತ ಸರಳ ಹಾಗೂ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ರಾಜ್ಯದ ಎಲ್ಲಾ ಗೃಹ ಬಳಕೆ ವಿದ್ಯುತ್ ಗ್ರಾಹಕರು ಈ ಯೋಜನೆಗೆ ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಕೆ ಚಾಲನೆಗೊಂಡ ದಿನದಿಂದ ಈವರೆಗೆ ಉತ್ತಮ ಸ್ಪಂದನೆ ದೊರತಿದೆ.
2022-23 ನೇ ಸಾಲಿನಲ್ಲಿ ಗೃಹ ವಿದ್ಯುತ್ ಬಳಕೆಯ ಸರಾಸರಿ ಹಾಗೂ ಹೆಚ್ಚುವರಿಯಾಗಿ ಶೇ.10 ರಷ್ಟು ಯುನಿಟ್ ಲೆಕ್ಕ ಹಾಕಿದಾಗ ಒಟ್ಟು ಬಳಕೆಯ ಸರಾಸರಿ 200 ಯುನಿಟ್ಗಿಂತ ಕಡಿಮೆ ಇದ್ದವರಿಗೆ ಈ ಯೋಜನೆಯ ಲಾಭ ದೊರೆಯಲಿದೆ.
ಈ ಯೋಜನೆಯು 2023 ರ ಜುಲೈ ತಿಂಗಳ ವಿದ್ಯುತ್ ಬಳಕೆಗೆ ಅನ್ವಯವಾಗಿದ್ದು, 1 ನೇ ಆಗಸ್ಟ್ ಹಾಗೂ ನಂತರದ ಮಾಪಕ ಓದುವ ದಿನಾಂಕದಿಂದ ಅನುಷ್ಟಾನಗೊಂಡಿದೆ.
ಸರಳ ನೋಂದಣಿ: ಈ ಯೋಜನೆಯ ಅನುಷ್ಟಾನಕ್ಕೆ ಅತ್ಯಂತ ಸರಳ ಹಾಗೂ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪ್ರತಿ ಗೃಹ ಬಳಕೆದಾರು ಸೇವಾಸಿಂಧು ಪೋರ್ಟಲ್ನಲ್ಲಿ ನೊಂದಾಯಿಸಿಕೊಳ್ಳಬೇಕು. ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ, ಗ್ರಾ.ಪಂ, ನಾಡ ಕಚೇರಿ ಅಥವಾ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
ಸಲ್ಲಿಸಬೇಕಾದ ದಾಖಲೆಗಳು: ನೋಂದಣಿ ಸಂದರ್ಭದಲ್ಲಿ ಆಧಾರ್ ಸಂಖ್ಯೆ, ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ಖಾತೆ ಸಂಖ್ಯೆ/ಬಾಡಿಗೆ/ಭೋಗ್ಯದ ಕರಾರು ಪತ್ರ(ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ) ಅಥವಾ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಸಲ್ಲಿಸಬೇಕು
ಗೃಹಜ್ಯೋತಿ ಯೋಜನೆಗೆ ಶಿವಮೊಗ್ಗ ವೃತ್ತದ ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಶೇ.80 ರಷ್ಟು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ದಿ: 20-08-2023 ರವರೆಗೆ ಶಿವಮೊಗ್ಗ ವೃತ್ತ ವ್ಯಾಪ್ತಿಯಲ್ಲಿ ಒಟ್ಟು 2,63,400 ಗ್ರಾಹಕರಿಗೆ ಗೃಹಜ್ಯೋತಿ ಬಿಲ್ಲುಗಳನ್ನು ವಿತರಿಸಲಾಗಿದೆ. ಒಟ್ಟು 205992 ಗ್ರಾಹಕರಿಗೆ ಶೂನ್ಯ ಬಿಲ್ಲುಗಳನ್ನು ವಿತರಿಸಲಾಗಿದೆ. ಶೂನ್ಯ ಬಿಲ್ ಸಬ್ಸಿಡಿ ಮೊತ್ತ ರೂ. 53954539 ಆಗಿರುತ್ತದೆ. 57408 ಗ್ರಾಹಕರಿಗೆ ನೆಟ್ ಬಿಲ್ಗಳನ್ನು ನೀಡಲಾಗಿದ್ದು, ನೆಟ್ ಬಿಲ್ ಸಬ್ಸಿಡಿ ಮೊತ್ತ ರೂ. 25921565 ಆಗಿರುತ್ತದೆ.
– ನಾಮದೇವ.ಎನ್.ವಿ, ಉಪ ನಿಯಂತ್ರಣಾಧಿಕಾರಿ, ಶಿವಮೊಗ್ಗ ವೃತ್ತ, ಮೆಸ್ಕಾಂ
ಗೃಹ ವಿದ್ಯುತ್ ಬಳಕೆದಾರರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ವಾಣಿಜ್ಯ ಬಳಕೆದಾರರು ಈ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಬಾಡಿಗೆದಾರು, ವಸತಿ ಸಮುಚ್ಚಯ(ಅಪಾರ್ಟ್ಮೆಂಟ್) ಮಾಲಿಕರು ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಸಿದ್ದರೆ ಈ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದೆ.
ಯೋಜನೆಯ ಫಲಾನುಭವಿಯಾಗಿ ನಿಗದಿಪಡಿಸಿರುವ ವಿದ್ಯುತ್ಗಿಂತ ಹೆಚ್ಚುವರಿ ಯೂನಿಟ್ ವಿದ್ಯುತ್ ಬಳಸಿದರೆ, ಹೆಚ್ಚುವರಿ ಯೂನಿಟ್ ಗೆ ಬಿಲ್ಲನ್ನು ಪಾವತಿಸಬೇಕು.
ಮಾಸಿಕ ಬಳಕೆಯು 200 ಯೂನಿಟ್ಗಿಂತ ಹೆಚ್ಚಿದ್ದರೆ, ಆ ನಿರ್ದಿಷ್ಟ ತಿಂಗಳಿಗೆ ಸಂಪೂರ್ಣ ಬಿಲ್ಲನ್ನು ಪಾವತಿಸಬೇಕು. ಹೊಸ ಬಳಕೆದಾರರಿಗೆ ರಾಜ್ಯದ ವಿದ್ಯುತ್ ಬಳಕೆಯ ಸರಾಸರಿ ಯೂನಿಟ್ ಆಧಾರವಾಗಿಟ್ಟುಕೊಂಡು ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು. ಒಂದು ವರ್ಷದ ಸರಾಸರಿ ಲಭ್ಯವಾದ ಬಳಿಕ ದತ್ತಾಂಶವನ್ನು ಆಧರಿಸಿ ಯೂನಿಟ್ ನಿಗದಿಪಡಿಸಲಾಗುತ್ತದೆ.
ಗೃಹಜ್ಯೋತಿ ಸೇರಿದಂತೆ ಜಾರಿಯಾಗಿರುವ ಇತರೆ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಆ.28 ಕ್ಕೆ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದೆ. ಸರ್ಕಾರದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಟಾನಗೊಳ್ಳುತ್ತಿದ್ದು, ಅತ್ಯುತ್ತಮ ಸ್ಪಂದನೆ ಮತ್ತು ಪ್ರತಿಕ್ರಿಯೆ ಜನರಿಂದ ಲಭ್ಯವಾಗಿದೆ.
ಫಲಾನುಭವಿಗಳ ಅನಿಸಿಕೆ…
ಗೃಹಜ್ಯೋತಿ ಯೋಜನೆ ನಿಜಕ್ಕೂ ನಮ್ಮ ಮನೆ ಬೆಳಗಿದೆ. ಬಡತನದ ಹಿನ್ನೆಲೆ ಕರೆಂಟ್ ಬಿಲ್ ಕಟ್ಟಲು ಬಹಳ ಕಷ್ಟವಾಗುತ್ತಿತ್ತು. ಈ ತಿಂಗಳು ಶೂನ್ಯ ಬಿಲ್ ಬಂದಿದ್ದು ನಿಟ್ಟುಸಿರು ಬಿಡುವಂತೆ ಆಗಿದೆ. ಸರ್ಕಾರಕ್ಕೆ ಧನ್ಯವಾದಗಳು.
ಧನಂಜಯಪ್ಪ, ಹೊಳಲೂರು
ಆರ್ಥಿಕವಾಗಿ ಹಿಂದುಳಿದಿರುವ ಮಧ್ಯಮ ವರ್ಗದ ನಮ್ಮಂತಹ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ವರದಾನವಾಗಿದೆ. ಕರೆಂಟ್ ಬಿಲ್ ಕಟ್ಟುವುದು ತಪ್ಪಿರುವುದರಿಂದ ಅದೇ ಮೊತ್ತವನ್ನು ಕುಟುಂಬ ನಿರ್ವಹಣೆ ಇತರೆ ಖರ್ಚಿಗೆ ಬಳಕೆ ಮಾಡಿಕೊಳ್ಳುತ್ತೇವೆ.
– ಮಂಜುಳ, ತ್ಯಾವರೆಚಟ್ನಹಳ್ಳಿ
ವಿಶೇಷ ಲೇಖನ:
ಭಾಗ್ಯ ಎಂ.ಟಿ, ವಾರ್ತಾ ಸಹಾಯಕರು
ವಾರ್ತಾ ಇಲಾಖೆ, ಶಿವಮೊಗ್ಗ