ಶಿವಮೊಗ್ಗ,:ಮತದಾರರ ಪಟ್ಟಿಯ ಪರಿಷ್ಕರಣೆಯ ಅಗತ್ಯತೆ ಹಾಗೂ ಪರಿಷ್ಕರಣೆಗೆ ಬೇಕಾಗುವ ದಾಖಲೆಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್ ವೈಶಾಲಿ ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಮತದಾರರ ಪರಿಷ್ಕರಣಾ ಪಟ್ಟಿ ಹಾಗೂ ಪೋಷಣ್ ಅಭಿಯಾನ ಜನಾಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಕೂಲವಾಗುವಂತೆ ಕೇಂದ್ರ ಚುನಾವಣಾ ಆಯೋಗವು ವೋಟರ್ ಹೆಲ್ಪ್‍ಲೈನ್ ಆಪ್, ಸಹಾಯವಾಣಿ ಸಂಖ್ಯೆ 1950, ಪರಿಷ್ಕರಣಾ ಕೇಂದ್ರಗಳು ಹಾಗೂ ಎನ್‍ವಿಎಸ್‍ಪಿ ಪೋರ್ಟಲ್ ಗಳನ್ನು ತೆರೆದಿದ್ದು ಇವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಮತದಾರರಿಗೆ ತಲುಪಿಸುವಂತೆ ಅವರು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಇರುವಂತಹ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಬೂತ್ ಮಟ್ಟದ ಅಧಿಕಾರಿಗಳಿಂದ ಮನೆಮನೆ ಭೇಟಿ ಕಾರ್ಯವನ್ನು ನ. 18ರ ವರೆಗೆ ನಡೆಸಲಾಗುವುದು. ಈ ವೇಳೆ ಆಧಾರ್ ಕಾರ್ಡ್, ಚಾಲನಾ ಪರವಾನಿಗೆ, ಪಡಿತರ ಚೀಟಿ, ಸರ್ಕಾರಿ ನೌಕರರ ಕಾರ್ಡ್ ಅಥವಾ ಚುನಾವಣಾ ಆಯೋಗ ಅನುಮೋದಿಸಿದ ಯಾವುದಾದರು ಒಂದು ದಾಖಲೆಯನ್ನು ನೀಡುವ ಮೂಲಕ ಪರಿಷ್ಕರಿಸಿಕೊಳ್ಳುವಂತೆ ಅವರು ತಿಳಿಸಿದರು.
ಆಯಾ ತಾಲ್ಲೂಕುಗಳ ತಹಶಿಲ್ದಾರ್ ಕಛೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಕೊಳ್ಳಲು ಕೇಂದ್ರವನ್ನು ತೆರೆಯಲಾಗಿದೆ. ಇದರೊಂದಿಗೆ ಮತದಾರರು ಎನ್‍ವಿಎಸ್‍ಪಿ ಪೋರ್ಟಲ್ ಮೊಬೈಲ್ ಆಪ್ ಮೂಲಕ ಸ್ವತಃ ಪರಿಷ್ಕರಿಸಿಕೊಳ್ಳಲು ಅವಕಾಶವಿದೆ. ಈ ಎಲ್ಲಾ ಮಾಹಿತಿಗಳನ್ನು ಸದುಪಯೋಗ ಪಡಿಸಿಕೊಂಡು ಯಾರು ಸಹ ಮತದಾನದಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮುಂದುವರೆದು ಮಾತನಾಡಿದ ಅವರು ಶಿಶು ಹಾಗೂ ಬಾಣಂತಿಯರ ಆರೈಕೆಯ ಬಗ್ಗೆ ಸಾವಿರ ದಿನಗಳ ವರೆಗೂ ಗಮನಹರಿಸಿ ಆರೋಗ್ಯವನ್ನು ರಕ್ಷಿಸುವ ಮೂಲಕ ಶಿಶು ಹಾಗೂ ಬಾಣಂತಿಯರ ಮರಣ ಪ್ರಮಾಣವನ್ನು ತಗ್ಗಿಸುವ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕು ಎಂದರು.
ಬಾಣಂತಿಯರು ಹಾಗೂ ಶಿಶುಗಳಿಗೆ ಅಗತ್ಯವಿರುವ ಲಸಿಕೆ, ಪೋಷಕಾಂಶಗಳ ಕುರಿತು ಮಾಹಿತಿ ನೀಡುವ ಮೂಲಕ ಮಕ್ಕಳ ಪಾಲನೆ ಪೋಷಣೆ ವಿಷಯದಲ್ಲಿ ಸಮಾಜವನ್ನು ಸುಶಿಕ್ಷಿತರನ್ನಾಗಿಸುವ ಜವಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ವಹಿಸಿದ್ದರು. ಅಧಿಕಾರಿಗಳಾದ ಆರ್. ಶೇಷಪ್ಪ, ಮಹೇಶ್ವರಪ್ಪ, ಎಸ್. ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.