ಕೃಷಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಮಣ್ಣಿಗೆ ಮಹತ್ತರ ಪಾತ್ರವಿದೆ ಕಾರಣ ಯಾವುದೇ ಬೆಳೆಯ ಉತ್ತಮ ಬೆಳವಣಿಗೆಗೆ ಹಾಗೂ ಇಳುವರಿಗೆ ಮಣ್ಣಿನ ಫಲವತ್ತತೆಯು ಉನ್ನತ ಮಟ್ಟದಲ್ಲಿರಬೇಕಾದ ಅಗತ್ಯವಿದೆ. ಒಂದು ಸಮೀಕ್ಷೆ ಪ್ರಕಾರ 2030ರ ಒಳಗಾಗಿ ಶೇ. 75 ರಷ್ಟು ಮಣ್ಣು ಆರೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ. ಹೀಗಾಗಿ ರೈತ ಬಾಂಧವರು ಮಣ್ಣಿನ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿಕೊಳ್ಳುವ ಅನಿವಾರ್ಯವಾಗಿದೆ. ಆದರೆ ಬಹುತೇಕ ರೈತರು ಪ್ರತಿ ವರ್ಷ ಮಣ್ಣು ಪರೀಕ್ಷೆ ಮಾಡಿಸದೆ ತಮಗಿಷ್ಟವಾದ ಬೆಳೆಗಳನ್ನು ಬೆಳೆಯುತ್ತಾರೆ. ಅಲ್ಲದೆ ಮಣ್ಣಿಗೆ ಅವಶ್ಯವಿರುವ ಪೋಷಕಾಂಶಗಳ ಸರಿಯಾದ ಮಾಹಿತಿಯಿಲ್ಲದೇ ಅನಾವಶ್ಯಕವಾಗಿ ರಾಸಾಯನಿಕಗಳನ್ನು ಬಳಕೆ ಮಾಡುತ್ತಿರುವುದರಿಂದ ಮಣ್ಣಿನಲ್ಲಿರುವ ಪ್ರಮುಖ ಪೋಷಕಾಂಶಗಳು ನಾಶವಾಗಿ ಕ್ರಮೇಣ ಭೂಮಿಯು ಬರಡಾಗುತ್ತಿದೆ. ಅದಕ್ಕಾಗಿ ರೈತರು ತಮ್ಮ ಜಮೀನಿನ ಮಣ್ಣನ್ನು ಬಿತ್ತನೆಗೆ ಪೂರ್ವದಲ್ಲಿ ವೈಜ್ಞಾನಿಕವಾಗಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಮಣ್ಣು ಪರೀಕ್ಷೆ ವರದಿ ಆಧಾರದ ಮೇಲೆ ಬೆಳೆ ಆಯ್ಕೆ ಮತ್ತು ರಸಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಬೇಕು. ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗಿರುವ ಇಂದಿನ ದಿನಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಕೊರತೆಯಿರುವ ಪೋಷಕಾಂಶಗಳ ನಿರ್ವಹಣೆ ಮಾಡಿ ಅಗತ್ಯವಿದ್ದಷ್ಟು ಗೊಬ್ಬರಗಳನ್ನು ಕೊಡುವುದರಿಂದ ಇಳುವರಿ ಜೊತೆಗೆ ಆರ್ಥಿಕ ದೃಷ್ಟಿಕೋನದಿಂದಲ್ಲದೇ ಮಾನವರ ಹಾಗೂ ಮಣ್ಣಿನ ಆರೋಗ್ಯದ ದೃಷ್ಟಿಯಿಂದಲೂ ಲಾಭದಾಯಕವಾಗಿದೆ.
ಪ್ರಸ್ತುತ ಹದವಾಗಿ ಮಳೆಯಾಗಿರುವುದರಿಂದ ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ದಗೊಳಿಸುವ ಬಹುಪಯೋಗಿ ಕೃಷಿ ಚಟುವಟಿಕೆಯಾದ ಮಾಗಿ ಉಳುಮೆಯಂತಹ ಸಾಂಪ್ರದಾಯಿಕ ಪದ್ದತಿಗಳನ್ನು ಕೈಗೊಳ್ಳುವುದರಿಂದ ಅಲ್ಪ ಖರ್ಚಿನಲ್ಲಿ ಉತ್ತಮ ಫಸಲನ್ನು ತೆಗೆಯಬಹುದು. ಇದರಿಂದ ಮಣ್ಣಿನ ಆರೋಗ್ಯ ಕಾಪಾಡುವುದರ ಮೂಲಕ ವಿಷಮುಕ್ತ ಕೃಷಿಯನ್ನು ಕೈಗೊಂಡು ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬಹುದಾಗಿದೆ.
ಕೃಷಿಯ ಪುರಾತನ ಚಟುವಟಿಕೆಯಾದ ಮಾಗಿ ಉಳುಮೆಗೆ ಎಲ್ಲಿಲ್ಲದ ಮಹತ್ವವಿದೆ. ಆದರೆ ಇತ್ತಿಚಿನ ದಿನಗಳಲ್ಲಿ ರೈತರು ನಿರ್ಲಕ್ಷ ತೋರುತ್ತಿದ್ದಾರೆ. ಪೋಷಕಾಂಶ ಕೊರತೆಯ ಮಣ್ಣು ಮಾನವನ ಆರೋಗ್ಯಕ್ಕೆ ಅಗತ್ಯವಾದ ಪೌಷ್ಟಿಕಯುಕ್ತ ಆಹಾರ ಉತ್ಪಾದಿಸಲು ಸಾಧ್ಯವಿಲ್ಲ.
ಮಾಗಿ ಉಳುಮೆ: ಮಾಗಿ ಉಳುಮೆ ಎಂಬುವುದು ಮುಂಗಾರಿಗಿಂತ ಮುಂಚೆ ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಅಂದರೆ ಬೇಸಿಗೆಯಲ್ಲಿ ಕೈಗೊಳ್ಳಬಹುದಾದ ಕಡಿಮೆ ಖರ್ಚಿನ ಆದರೆ ಬಹು ಉಪಯೋಗಿ ಕೃಷಿ ಚಟುವಟಿಕೆಯಾಗಿದೆ.
ಮಾಗಿ ಉಳುಮೆಯಿಂದಾಗುವ ಪ್ರಯೋಜನಗಳು:
1) ಜಮೀನಿನ ಮಣ್ಣಿನ ಮೇಲೆ ಪರಿಣಾಮ: ಬೇಸಿಗೆಯಲ್ಲಿ ಮಾಗಿ ಉಳುಮೆಯಿಂದ ತಯಾರಾದ ಜಮೀನು ಮುಂಗಾರು ಮಳೆಯಾಗುತ್ತಿದ್ದಂತೆ ಹರಗಿ ಬಿತ್ತಲು ಸುಲಭವಾಗುತ್ತದೆ. ಇದರಿಂದ ಕೃಷಿ ಭೂಮಿಯಲ್ಲಿನ ಮಣ್ಣು ತಿರುವು ಮುರುವಾಗಿ ಸಡಿಲವಾಗುವುದರಿಂದ ಬಿದ್ದಂತಹ ಮಳೆ ನೀರು ಸುಲಭವಾಗಿ ಅಲ್ಲಿಯೇ ಇಂಗಿ ಭೂಮಿಯ ಅಂತರಜಲ ಮಟ್ಟ ಮತ್ತು ತೇವಾಂಶದ ಪ್ರಮಾಣ ಅಧಿಕವಾಗಲ ಸಡಿಲಾಗುವಂತೆ ಮಾಡಿ ಮಳೆ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಭೂಮಿಯಲ್ಲಿ ಇಂಗುವದಕ್ಕೆ ಸಹಾಯವಾಗಿ ಸಹಕಾರಿಯಾಗುವುದರ ಜೊತೆಗೆ ಬಿತ್ತಿದ ಬೀಜಗಳ ಮೊಳಕೆ ಪ್ರಮಾಣ ಹಾಗೂ ಸದೃಢ ಸಸಿಗಳ ಸಂಖ್ಯೆ ಹೆಚ್ಚಾಗಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುತ್ತದೆ. ಮಣ್ಣಿನ ಮೇಲ್ಪದರ ಸಡಿಗೊಂಡಿರುವುದರಿಂದ ಬೇರುಗಳು ಸರಾಗವಾಗಿ ಆಳಕ್ಕೆ ಇಳಿದು ಬೆಳೆಗಳ ಬೆಳವಣಿಗೆಯಿಂದ ಉತ್ತಮ ಫಸಲನ್ನು ಪಡೆಯಬಹುದು.
ಮಾಗಿ ಉಳುಮೆಯನ್ನು ಇಳಿಜಾರಿಗೆ ಅಡ್ಡಲಾಗಿ ಮಾಡುವುದರಿಂದ ಮಣ್ಣು, ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಸಂಗ್ರಹಣೆ ಹಾಗೂ ಅದರ ದಕ್ಷ ಉಪಯೋಗವನ್ನು ಹೆಚ್ಚಿನ ಖರ್ಚಿಲ್ಲದೆ ಪಡಯಬಹುದು- ಡಾ. ಶ್ರೀನಿವಾಸ ಬಿ. ವಿ, ವಿಜ್ಞಾನಿಗಳು ,ಮಣ್ಣು ವಿಜ್ಞಾನ.
2) ಕಳೆಗಳ ನಿಯಂತ್ರಣ: ಮಾಗಿ ಉಳುಮೆ ಕೈಗೊಳ್ಳುವ ಮೂಲಕ ಕರಿಕೆಯ ಬೇರುಗಳು ಹಾಗೂ ಜೇಕಿನ ಗಡ್ಡೆಗಳನ್ನು ಮತ್ತು ಇನ್ನಿತರ ಕಳೆಗಳ ಅವಶೇಷಗಳನ್ನು ಸುಲಭವಾಗಿ ಆರಿಸಿ ತೆಗೆಯಲು ಸಹಾಯವಾಗುವುದರಿಂದ ಮುಂದಿನ ಬೆಳೆಗಳಲ್ಲಿ ಇಂತಹ ಕಳೆಗಳನ್ನು ಪ್ರಥಮ ಹಂತದಲ್ಲಿಯೇ ಹತೋಟಿ ಮಾಡಬಹುದು. ಕಳೆಗಳ ನಿಯಂತ್ರಣಕ್ಕಾಗಿ ತಗಲುವ ಕೂಲಿ ಮತ್ತು ಕಳೆನಾಶಕಗಳ ವೆಚ್ಚ ಮತ್ತು ಸಮಯವನ್ನು ಕಡಿಮೆಗೊಳಿಸಬಹುದಾಗಿದೆ.
3) ಕೀಟಗಳು ಮತ್ತು ರೋಗಾಣುಗಳ ನಿಯಂತ್ರಣ: ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ಸಂಬಂಧಿಸಿದ ಕೀಟಗಳ ಕೋಶ ಮತ್ತು ಅವುಗಳ ತತ್ತಿಗಳು ಸೂರ್ಯನ ಶಾಖಕ್ಕೆ ಒಗ್ಗುವುದರಿಂದ ಜಮೀನಿನ ಒಳಗೆ ಇರಬಹುದಾದ ಪೈರಿನ ವೈರಿಗಳಾದ ಕೆಲವು ಕೀಟಗಳು ಮತ್ತು ಸಸ್ಯ ರೋಗಗಳ ರೋಗಾಣುಗಳನ್ನು ಕೋಶದ ಹಂತದಲ್ಲಿಯೇ ಕಡಿಮೆ ಖರ್ಚಿನಲ್ಲಿ ಹತೋಟಿ ಮಾಡುವ ಮೂಲಕ ಮುಂದೆ ಆಗಬಹುದಾದ ಹೆಚ್ಚಿನ ಹಾವಳಿಯನ್ನು ಪ್ರಾಥಮಿಕ ಹಂತದಲ್ಲಿಯೇ ನಿಯಂತ್ರಿಸಿ ಕೀಟನಾಶಕಗಳು ಮತ್ತು ಪೀಡೆನಾಶಕಗಳಿಗೆ ತಗಲುವ ಅನಾವಶ್ಯಕ ಖರ್ಚನ್ನು ಕಡಿಮೆಗೊಳಿಸಬಹುದು.
4) ನೈಸರ್ಗಿಕ ಹಾಗೂ ಜೈವಿಕ ಪರಿಸರದ ಮೇಲೆ ಪರಿಣಾಮ: ಮಾಗಿ ಉಳುಮೆಯಿಂದ ಕೀಟಗಳ ಕೋಶಗಳು ಮತ್ತು ರೋಗಾಣುಗಳನ್ನು ಕೊಕ್ಕರೆ ಮತ್ತು ಮುಂತಾದ ಪಕ್ಷಿಗಳು ಹೆಕ್ಕಿ ತಿನ್ನುವುದರಿಂದ ಜೈವಿಕ ನಿಯಂತ್ರಣದಿಂದ ಕೀಟ ಮತ್ತು ರೋಗಗಳನ್ನು ಹತೋಟಿ ಮಾಡಿ ಮಣ್ಣಿನ ಆರೋಗ್ಯ, ಪರಿಸರ ಮತ್ತು ಆಹಾರವನ್ನು ರಾಸಾಯನಿಕಗಳ ಬಳಕೆಯನ್ನು ಕಡಿಮೆಗೊಳಿಸಬಹುದು. ಜೊತೆಗೆ ಮಣ್ಣಿನಲ್ಲಿ ಜೈವಿಕ ಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
5) ಬೆಳೆ ಉಳಿಕೆಗಳು: ಬೆಳೆ ಕಟಾವು ನಂತರ ಉಳಿದ ಬೆಳೆ ಉಳಿಕೆಗಳು ಮತ್ತು ತ್ಯಾಜ್ಯವಸ್ತುಗಳು ಮಣ್ಣಿನಲ್ಲಿ ಬೇಗನೆ ಕೊಳೆತು ಉತ್ತಮ ಸಾವಯವ ಗೊಬ್ಬರವಾಗಿ ಮುಂಬರುವ ಬೆಳೆಗಳಿಗೆ ಪೂರೈಕೆಯಾಗುತ್ತದೆ. ಇದರಿಂದ ಕೃಷಿ ಪರಿಸರದಲ್ಲಿ ಸಾವಯವ ಪದಾರ್ಥಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆ ಹೆಚ್ಚಿಸುವ ಮೂಲಕ ಸ್ವಾಭಾವಿಕ ಕ್ರಿಯೆಗಳನ್ನು ತ್ವರಿತಗೊಳಿಸಿದಂತಾಗುತ್ತದೆ.
ರೈತರು ಬೇಸಿಗೆಯಲ್ಲಿ ಮಾಗಿ ಉಳುಮೆ ಕೈಗೊಂಡು ನೈಸರ್ಗಿಕ ಹಾಗೂ ಜೈವಿಕ ವಿಧಾನಗಳಿಂದ ಪ್ರಕೃತಿದತ್ತವಾದ ಮಣ್ಣಿನ ಸಂಪತ್ತನ್ನು ಸಂರಕ್ಷಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ಸಮರ್ಪಕ ರೀತಿಯಿಂದ ಬಳಸುವುದು ನಮ್ಮ ಕೈಯಲ್ಲಿಯೇ ಇದೆ. ಆದ್ದರಿಂದ ರೈತರು ಮಣ್ಣು ಪರೀಕ್ಷೆ ಫಲಿತಾಂಶ ಆಧರಿಸಿ ಮೇಲೆ ಬೆಳೆಗಳಿಗೆ ಸಮತೋಲನ ರಸಗೊಬ್ಬರಗಳನ್ನು ಬಳಸಿದರೆÀ ಭೂಮಿಯ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಅಂದರೆ ಮಣ್ಣಿನ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ. ಜೊತೆಗೆ ಕಡಿಮೆ ಖರ್ಚಿನ ಬೇಸಾಯವನ್ನು ಕೈಗೊಂಡು ಅಧಿಕ ಇಳುವರಿ ಪಡೆಯುವ ಮೂಲಕ ತಮ್ಮ ಆದಾಯವನ್ನೂ ಸಹ ಹೆಚ್ಚಿಸಿಕೊಳ್ಳಬಹುದು.
*ಡಾ. ಶ್ರೀನಿವಾಸ ಬಿ. ವಿ , ಡಾ. ಜಹೀರ್ ಅಹಮದ್, ಡಾ. ರಾಜು ಜಿ. ತೆಗ್ಗಳ್ಳಿ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ