ಶಿವಮೊಗ್ಗ ಮೇ 17. ಮಕ್ಕಳ ಸಹಾಯವಾಣಿ -1098 ದಿನಾಚರಣೆ ಅಂಗವಾಗಿ ಮೇ ಮಾಹೆ ಪೂರ್ತಿ ಮಕ್ಕಳ ರಕ್ಷಣೆ, ಪಾಲನೆ ಪೋಷಣೆ ಹಾಗೂ ಮಕ್ಕಳ ಕಾನೂನುಗಳ ಕುರಿತು ಎಲ್ಲ ಶಾಲೆಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ವತಿಯಿಂದ ಮಂಗಳವಾರ ಗಾಡಿಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ‘ಮಕ್ಕಳ ಸಹಾಯವಾಣಿ -1098 ದಿನಾಚರಣೆ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಕ್ಕಳೊಂದಿಗೆ ಸಹಾಯವಾಣಿ ಕುರಿತು ಸಂವಾದ ನಡೆಸಿದರು.
ಮಕ್ಕಳ ಸಹಾಯವಾಣಿ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಮಕ್ಕಳೊಂದಿಗೆ ನೇರವಾಗಿ ಸಂವಾದ ನಡೆಸಿ ಮಕ್ಕಳ ಸಹಾಯವಾಣಿ 1098 ಎಂದರೆ ಏನು, ಯಾವ ಸಂದರ್ಭದಲ್ಲಿ ಮಕ್ಕಳು ಇದನ್ನು ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಹಾಗೂ ಕೆಲವು ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ಹಿಂಸಾತ್ಮಕ ಕೃತ್ಯದ ವೇಳೆ ಸಹಾಯವಾಣಿಯ ನೆರವು, ಸಹಕಾರದ ಕುರಿತು ವಿವರಿಸಿದರು.
ಮಕ್ಕಳು ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೀಡಾದ ಸಂದರ್ಭ, ಶಾಲಾ ಡ್ರಾಪ್ಔಟ್ ಮತ್ತು ಇತರೆ ಸಮಸ್ಯೆಗಳು ಎದುರಾದಾಗ ನೇರವಾಗಿ 1098 ಗೆ ಕರೆ ಮಾಡಿ ನೆರವು ಪಡೆಯಬೇಕೆಂದು ತಿಳಿಸಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಇವರ ನಿರ್ದೇಶನದನ್ವಯ ದಿ: 17-05-2022 ನ್ನು ಮಕ್ಕಳ ಸಹಾಯವಾಣಿ -1098 ದಿನವನ್ನಾಗಿ ಆಚರಿಸಲಾಗುತ್ತಿದ್ದು, ಮೇ ಮಾಹೆ ಪೂರ್ತಿ ಎಲ್ಲ ಶಾಲೆಗಳಲ್ಲಿ ಮಕ್ಕಳ ಪಾಲನೆ, ಪೋಷಣೆ ಹಾಗೂ ಮಕ್ಕಳ ಕಾನೂನುಗಳ ಕುರಿತು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿಗಳು ಸಹಯೋಗದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಜಿ.ಜಿ.ಸುರೇಶ್ ಮಾತನಾಡಿ, 2012 ರಲ್ಲಿ ಪ್ರಾರಂಭವಾದ ಮಕ್ಕಳ ಸಹಾಯವಾಣಿಯು ಮಕ್ಕಳ ರಕ್ಷಣೆ, ಪಾಲನೆ ಪೋಷಣೆ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದೆ. ಹಲವಾರು ಸಂದರ್ಭಗಳಲ್ಲಿ ಮಕ್ಕಳು ನೇರವಾಗಿ 1098 ಗೆ ಕರೆ ಮಾಡಿ ನೆರವು ಪಡೆದಿದ್ದಾರೆ. ಮಕ್ಕಳ ಸಹಾಯವಾಣಿ ಕುರಿತು ಅಧಿಕಾರಿಗಳು, ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮಕ್ಕಳಿಗೆ ಘನತೆಯ ಬದುಕನ್ನು ನೀಡಲು ಮತ್ತು ಜಿಲ್ಲೆಯನ್ನು ಮಕ್ಕಳಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣಿ ಕೆಲಸ ಮಾಡುತ್ತಿದೆ ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರೇಖಾ.ಜಿ.ಎಂ ಮಾತನಾಡಿ, ಮಕ್ಕಳ ರಕ್ಷಣೆ, ಪಾಲನೆ ಮತ್ತು ಪೋಷಣೆಯಲ್ಲಿ ಮಕ್ಕಳ ಸಹಾಯವಾಣಿ ಮತ್ತು ಮಕ್ಕಳ ಕಲ್ಯಾಣ ಸಮಿತಿ ಉತ್ತಮವಾಗಿ ಸ್ಪಂದಿಸುತ್ತಿವೆ. ಮಕ್ಕಳ ಬೇಕು ಬೇಡಗಳ ಬಗ್ಗೆ ಗಮನ ಹರಿಸುವುದು ಸೇರಿದಂತೆ ಮಕ್ಕಳ ಸಮಸ್ಯೆಗಳ ಕುರಿತು ಗಮನ ಹರಿಸಲು ಮಕ್ಕಳ ಸಹಾಯವಾಣಿ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿ-1098 ನಿರ್ದೇಶಕ ಡಾ.ಫಾ.ಅಬ್ರಹಾಂ, ಬಿಇಓ ನಾಗರಾಜ್, ಗಾಡಿಕೊಪ್ಪದ ಸ.ಹಿ.ಪ್ರಾ.ಶಾಲೆಯ ಶಾಲಾ ಮುಖ್ಯೋಪಾಧ್ಯಾಯ ಭುವನೇಶ್ವರಿ ಪಾಲ್ಗೊಂಡಿದ್ದರು. ಮಕ್ಕಳ ಸಹಾಯವಾಣಿ ಸಂಯೋಜಕ ಪ್ರಮೋದ್ ನಿರೂಪಿಸಿದರು. ಮಕ್ಕಳ ರಕ್ಷಣಾ ಘಟಕದ ಸಂಯೋಜಕಿ ಗಾಯತ್ರಿ ಸ್ವಾಗತಿಸಿದರು.