ಶಿವಮೊಗ್ಗ, ಆಗಸ್ಟ್ 29 :ಮಕ್ಕಳ ಭಿಕ್ಷಾಟನೆಯನ್ನು ತಪ್ಪಿಸದಿದ್ದಲ್ಲಿ ಇದೊಂದು ಗಂಭೀರ ಸಾಮಾಜಿಕ ಪಿಡುಗಾಗಿ ಪರಿಣಮಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಕಳವಳ ವ್ಯಕ್ತಪಡಿಸಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಿ.ಎ.ಆರ್ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ‘ಮಕ್ಕಳ ಭಿಕ್ಷಾಟಣೆ ತಡೆ ಉಸ್ತುವಾರಿ ತಂಡದ ಸದಸ್ಯರುಗಳಿಗೆ ಹಾಗೂ ಜಿಲ್ಲೆಯ ಎಲ್ಲಾ ಠಾಣೆಯ ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿಗಳಿಗೆ ಬಾಲ ಭಿಕ್ಷಾಟನೆ ತಡೆ ಮತ್ತು ಪುನರ್ವಸತಿ ಕುರಿತಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದುರ್ಬಲ ಮಕ್ಕಳು ಅಥವಾ ಕಳ್ಳ ಸಾಗಾಣಿಕೆ ಮಾಡಿ ತಂದ ಮಕ್ಕಳನ್ನು ಭಿಕ್ಷಾಟನೆಗೆ ಹಚ್ಚಿರುವ ಸಂದರ್ಭ ಹೆಚ್ಚಾಗಿದ್ದು, ನೀವು ಅನುಕಂಪದಿಂದ ನೀಡುವ ಭಿಕ್ಷೆ ಮಗು ಪಾಲಾಗುವುದಿಲ್ಲ. ಬದಲಾಗಿ ಮಕ್ಕಳು ಜೀವನಪೂರ್ತಿ ಭಿಕ್ಷುಕರಾಗಿ ಉಳಿಯುವ ಸಂಭವವೇ ಹೆಚ್ಚಾಗಿರುತ್ತದೆ. ಆದ್ದರಿಂದ ಮಕ್ಕಳ ಭಿಕ್ಷಾಟಣೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪಾಲುದಾರ ಇಲಾಖೆಗಳಾದ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ಕಲ್ಯಾಣ ಸಮಿತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಈ ಕಾರ್ಯಾಗಾರ ಏರ್ಪಡಿಸಿರುವುದು ಅತ್ಯಂತ ಸೂಕ್ತವಾಗಿದೆ.
ಮಕ್ಕಳ ಭಿಕ್ಷಾಟನೆ ಎಂಬುದು ಒಂದು ಗಂಭೀರ ವಿಷಯ. ಮಕ್ಕಳ ಭಿಕ್ಷಾಟನೆ ತಡೆ ಉಸ್ತುವಾರಿ ತಂಡದ ಸದಸ್ಯರು ಇಂದಿನ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಟ್ಟುನಿಟ್ಟಾಗಿ ಈ ಪಿಡುಗನ್ನು ತಡೆಯುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.
ಸರ್ಕಾರ ಮಗು ತಾಯಿಯ ಗರ್ಭದಲ್ಲಿ ಇರುವಾಗಿನಿಂದಲೇ ಅದಕ್ಕೆ ಪೌಷ್ಟಿಕ ಆಹಾರ, ಆರೋಗ್ಯ ಭದ್ರತೆ ನೀಡುವುರಿಂದ ಹಿಡಿದು ಮಗುವಿಗೆ 18 ವರ್ಷ ಆಗುವವರೆಗೆ ಅಂಗನವಾಡಿ, ಪೌಷ್ಟಿಕ ಆಹಾರ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹೀಗೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೀಗೆ ವಿವಿಧ ಇಲಾಖೆಗಳ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಕಾಯ್ದೆಗಳ ಮೂಲಕ ಜಾರಿಗೊಳಿಸುತ್ತಾ ಬಂದಿದೆ. ಹೀಗಿರುವಾಗ ನಾವೆಲ್ಲ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ, ಅವರನ್ನು ಮುಖ್ಯವಾಹಿನಿಗೆ ತರಬೇಕು.
ನಗರದಲ್ಲಿ ಸಹ ಮಕ್ಕಳ ಭಿಕ್ಷಾಟಣೆ, ಮಕ್ಕಳ ಕಳ್ಳ ಸಾಕಾಣಿಕೆಯನ್ನು ಕಾಣುತ್ತಿದ್ದೇವೆ. ಮಕ್ಕಳು ಸಾಮಾಜಘಾತುಕರಾಗುವ ಮುನ್ನ ಎಚ್ಚೆತ್ತುಕೊಂಡು ಸಾಂವಿಧಾನಿಕವಾದ ಎಲ್ಲ ರೀತಿಯ ರಕ್ಷಣೆ, ಹಕ್ಕುಗಳು ಮತ್ತು ಸೌಲಭ್ಯ ನೀಡುವ ಮೂಲಕ ಜವಾಬ್ದ್ದಾರಿ ಪ್ರಜೆಯಾಗಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಅವರು ಭಿಕ್ಷೆ ಬೇಡುವ ಮಕ್ಕಳನ್ನು ಕಂಡಾಗ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡುವ ಮೂಲಕ ಸಣ್ಣ ಸಹಾಯ ಮಾಡಬೇಕು. ಜಿಲ್ಲೆಯನ್ನು ಭಿಕ್ಷಾಟನೆ ಮುಕ್ತಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಮಾತನಾಡಿ, ಮಕ್ಕಳೇ ನಮ್ಮ ದೇಶದ ಭವಿಷ್ಯ. ದುರ್ಬಲ ವರ್ಗದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಾಲ ಭಿಕ್ಷಾಟನೆ ಕುರಿತು ಯಾವುದಾದರೂ ಕರೆ, ಮಾಹಿತಿ ಬಂದಾಗ ಸಂಬಂಧಿಸಿದ ಅಧಿಕಾರಿಗಳು ತಡ ಮಾಡದೇ ಕಾರ್ಯೋನ್ಮುಖರಾಗಬೇಕು. ಆಗ ಮಾತ್ರ ಭಿಕ್ಷಾಟಣೆ ಮತ್ತು ಮಕ್ಕಳ ಕಳ್ಳಸಾಗಾಣಿಕೆಯನ್ನು ತಡೆಯಬಹುದು ಎಂದ ಅವರು ಮಕ್ಕಳ ರಕ್ಷಣೆ ಕುರಿತು ಕಾನೂನಿನ ನೆರವು ಬೇಕಾದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ದವಿದ್ದು, ಸಹಾಯ ಪಡೆಯಬೇಕೆಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಂ ಆಮ್ಟೆ ಮಾತನಾಡಿ, ಮಾಡುವ ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು. ಜಿಲ್ಲೆಯನ್ನು ಭಿಕ್ಷಾಟನೆಮುಕ್ತಗೊಳಿಸುವ ಮನಸ್ಸನ್ನು ಅಧಿಕಾರಿ ತಂಡದವರು ಮಾಡಬೇಕು. ಅದಕ್ಕೆ ಅಗತ್ಯವಾದ ಯೋಜನೆ ರೂಪಿಸಿ, ಮಾನವೀಯ ಮೌಲ್ಯದ ನೆಲಗಟ್ಟಿನಲ್ಲಿ ಕ್ರಮ ಕೈಗೊಂಡಲ್ಲಿ ಅರ್ಥಪೂರ್ಣ ಫಲಿತಾಂಶ ಲಭಿಸುವುದು. ಅಧಿಕಾರಿ ತಂಡ ಮತ್ತು ಸಾರ್ವಜನಿಕರು ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ಭಿಕ್ಷಾಟನೆ ಕುರಿತು ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು, ಇದರ ತಡೆಗೆ ಅಭಿಯಾನದ ರೀತಿಯಲ್ಲಿ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ.ಬಿ.ಎಂ ಮಾತನಾಡಿ, ಬಾಲ ನ್ಯಾಯ ಕಾಯ್ದೆ ಪ್ರಕಾರ ಬಾಲ ಭಿಕ್ಷಾಟಣೆ ಘೋರ ಅಪರಾಧ. 7 ವರ್ಷಗಳ ಸಜೆ, ರೂ.5 ಲಕ್ಷದವರೆಗೆ ದಂಡ ವಿಧಿಸಬಹುದು. ಮಕ್ಕಳನ್ನು ಅಂಗವೈಕಲ್ಯಗೊಳಿಸಿ ಭಿಕ್ಷಾಟನೆಗೆ ಹಚ್ಚಿದಲ್ಲಿ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು. ದುರ್ಬಲ ವರ್ಗದ ಮಕ್ಕಳು, ಮಹಿಳೆಯರು ಕಂಡಾಗ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬಂದಾಗ ಅನುಕುಂಪ ತೋರುವುದಕ್ಕಿಂತ ಅವರನ್ನು ಸೂಕ್ಷ್ಮವಾಗಿ ಗಮನಿಸಿ, ಪೊಲೀಸರು, ಮಕ್ಕಳ ಕಲ್ಯಾಣ ಸಮಿತಿ ಅಥವಾ ಮಕ್ಕಳ ಸಹಾಯವಾಣಿ 1098 ಗೆ ಕರೆ ನೀಡಿದಲ್ಲಿ ಅವರಿಗೆ ಅವಶ್ಯಕವಾದ ಕಾನೂನಿನ ರಕ್ಷಣೆ ನೀಡಿ, ತಾತ್ಕಾಲಿಕ ತಂಗುದಾಣದಲ್ಲಿರಿಸಿ ಪುನರ್ವಸತಿ ಕಲ್ಪಿಸಲಾಗುವುದು. ಭಿಕ್ಷಾಟನೆ ಸಣ್ಣ ವಿಚಾರವೆಂದು ನಿರ್ಲಕ್ಷ್ಯ ತೋರಬಾರದು. ಪೊಲೀಸ್ ಇಲಾಖೆಯವರಿಗೆ ಯಾವುದೇ ವಾರಂಟ್ ಇಲ್ಲದೇ ಇಂತಹವರನ್ನು ದಸ್ತಗಿರಿ ಮಾಡಿ, ಕ್ರಮ ವಹಿಸುವ ವಿಶೇಷ ಅಧಿಕಾರ ಇದ್ದು ಇದರ ಸದ್ಬಳಕೆ ಆಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್.ಕೆ ಇವರು ಮಕ್ಕಳ ಪುನರ್ವಸತಿ ಕುರಿತು ಸಮಾಜ ಕಲ್ಯಾಣ ಇಲಾಖೆಯ ಪಾತ್ರದ ಕುರಿತು ಮಾತನಾಡಿದರು. ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್, ಆರ್‍ಸಿಹೆಚ್‍ಓ ಡಾ.ನಾಗರಾಜ್ ನಾಯ್ಕ ಪಾಲ್ಗೊಂಡಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಗಾಯಿತ್ರಿ ಡಿ.ಎಸ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಕ್ಕಳ ಭಿಕ್ಷಾಟಣೆ ತಡೆ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ ಬಾಲ ಭಿಕ್ಷಾಟನೆ ತಡೆ ಕುರಿತಾದ ಕರಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸುರೇಶ್ ಜಿ.ಜಿ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಗಣೇಶ್.ಹೆಚ್ ನಿರೂಪಿಸಿದರು.

error: Content is protected !!