ಶಿವಮೊಗ್ಗ, ಡಿಸೆಂಬರ್ 18 : ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹರಡುವುದನ್ನು ತಡೆಗಟ್ಟಲು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದುವರೆಗೆ ಕೆಎಫ್ಡಿ ವೈರಾಣು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರದೇಶದಲ್ಲಿ ಮಂಗನ ಕಾಯಿಲೆ ಕಂಡು ಬಂದಿಲ್ಲ. ರೋಗ ನಿಯಂತ್ರಣಕ್ಕೆ ಮುಂಜಾಗರೂಕತಾ ಕ್ರಮವಾಗಿ 2.20ಲಕ್ಷ ಡೋಸ್ ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ 1.60 ಲಕ್ಷ ಡೋಸ್ ಲಸಿಕೆ ನೀಡಲಾಗಿದ್ದು, ಇನ್ನುಳಿದ 60ಸಾವಿರ ಡೋಸ್ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ 45ಸಾವಿರ ಡಿ.ಎಂ.ಪಿ ತೈಲದ ದಾಸ್ತಾನು ಲಭ್ಯವಿದ್ದು, ಈಗಾಗಲೇ 30ಸಾವಿರ ಡಿ.ಎಂ.ಪಿ ತೈಲವನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಅಲ್ಲದೇ 50 ಮೀಟರ್ ಪರಿಧಿಯಲ್ಲಿ ಮೆಲಾಥಿಯಾನ್ ಸಿಂಪಡಣೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಇದುವರೆಗೆ 2 ಕ್ವಿಂಟಾಲ್ ಮೆಲಾಥಿಯಾನ್ ಸರಬರಾಜು ಮಾಡಲಾಗಿದೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ವೇಕ್ಷಣಾ ಕಾರ್ಯಾಚರಣೆ: ಜಿಲ್ಲೆಯಾದ್ಯಂತ ಕೆ.ಎಫ್.ಡಿ ನಿಯಂತ್ರಣ ಸರ್ವೇಕ್ಷಣಾ ಕಾರ್ಯ ನಿರಂತರವಾಗಿ ನಡೆಸಲಾಗುತ್ತಿದೆ. ಎಲ್ಲಾ ಕೆ.ಎಫ್.ಡಿ ಬಾಧಿತ ಪ್ರದೇಶಗಳಿಂದ 205 ಉಣುಗುಗಳನ್ನು ಸಂಗ್ರಹಿಸಿ ಕೆ.ಎಫ್.ಡಿ ವೈರಾಣು ಪರೀಕ್ಷೆ ನಡೆಸಲಾಗಿದ್ದು, ಇದುವರೆಗೂ ಯಾವುದೇ ರೋಗಾಣು ದೃಢಪಟ್ಟಿಲ್ಲ. ಈವರೆಗೆ ಜಿಲ್ಲೆಯಲ್ಲಿ 120 ಮಂಗಗಳು ಮೃತಪಟ್ಟು, ಇವುಗಳಲ್ಲಿ ಅಂಗಾಂಶ ಸಂಗ್ರಹಣೆಗೆ ಯೋಗ್ಯವಾದ 18 ಮಂಗಗಳಿಂದ ಸೂಕ್ತ ಅಂಗಾಂಶ ಸಂಗ್ರಹಿಸಿ ಕೆ.ಎಫ್.ಡಿ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ರೋಗಾಣು ಪತ್ತೆಯಾಗಿಲ್ಲ. ಸರ್ವೇಕ್ಷಣಾ ಕಾರ್ಯವನ್ನು ತೀವ್ರಗೊಳಿಸಲಾಗಿದೆ.
ಕೆ.ಎಫ್.ಡಿ ಸರ್ವೇಕ್ಷಣಾ ಕಾರ್ಯ ಜಿಲ್ಲೆಯಾದ್ಯಂತ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಶಂಕಿತ ಹಾಗೂ ಬಾಧಿತ ಪ್ರದೇಶಗಳಿಂದ 467 ಜ್ವರ ಪ್ರಕರಣಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯದಲ್ಲಿ ಆರ್.ಟಿ.ಪಿ.ಸಿ.ಆರ್/ಐ.ಜಿ.ಎಂ. ಪರೀಕ್ಷೆ ನಡೆಸಲಾಗಿದೆ. ಯಾವುದೇ ಪ್ರಕರಣ ದೃಢಪಟ್ಟಿಲ್ಲ ಎಂದು ಅವರು ಹೇಳಿದ್ದಾರೆ.
ಕೆ.ಎಫ್.ಡಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಾಗರ ತಾಲ್ಲೂಕಿನ ಅರಳಗೋಡು ಗ್ರಾಮ ಪಂಚಾಯತ್, ಹೆದ್ದೂರು, ಶೇಡ್ಗಾರ್, ಸಾಲ್ಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ತಳಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆ ನಡೆಸಲಾಗಿದೆ. ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಂತರ್ ಇಲಾಖಾ ಸಮನ್ವಯ ಸಭೆಯನ್ನು ನಡೆಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಆರ್.ಆರ್.ಟಿ ತಂಡವನ್ನು ರಚಿಸಿ ಅವರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಕ್ಷೇತ್ರ ಸಿಬ್ಬಂದಿಗಳಿಗೆ ಕೆ.ಎಫ್.ಡಿ ರೋಗ ನಿಯಾಂತ್ರಣ ಕಾರ್ಯಕ್ರಮದ ಪುನರ್ಮನನ ಹಾಗೂ ಹೆಚ್ಚಿನ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.