ಶಿವಮೊಗ್ಗ : ಜೂನ್ 15 : ದಾವಣಗೆರೆ ಮತ್ತು ಹಾವೇರಿ ಜಿಲ್ಲಾಡಳಿತದ ಕೋರಿಕೆಯ ಮೇರೆಗೆ ನದಿ ಆಶ್ರಿತ ಕುಡಿಯುವ ನೀರಿನ ಯೋಜನೆಗಳಿಗೆ ಕುಡಿಯುವ ನೀರನ್ನು ಪೂರೈಸಲು ನೀರು ಬಿಡುಗಡೆ ಮಾಡುವ ಕುರಿತು ಜೂನ್ 15ರಿಂದ 25ರವರೆಗೆ ಪ್ರತಿದಿನ 1600ಕ್ಯೂಸೆಕ್ಸ್ ನೀರನ್ನು ಹರಿಯಬಿಡಲು ಇತ್ತೀಚೆಗೆ ಪ್ರಾದೇಶಿಕ ಆಯುಕ್ತರು ಹಾಗೂ ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಮೈಸೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಆದ್ದರಿಂದ ಸಾರ್ವಜನಿಕರು ನದಿ ಪಾತ್ರದಲ್ಲಿ ತಿರುಗಾಡುವುದಾಗಲಿ, ಜಾತ್ರಾ ಮಹೋತ್ಸವಗಳನ್ನು ಹಮ್ಮಿಕೊಳ್ಳುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲೀ, ಇತ್ಯಾದಿ ಚಟುವಟಿಕೆಗಳಿಗಾಗಿ ನದಿ ಪಾತ್ರದಲ್ಲಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ನೀರು ಹರಿಸುವ ಈ ಅವಧಿಯಲ್ಲಿ ರೈತ ಬಾಂಧವರು ನದಿದಂಡೆಯಲ್ಲಿ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರೆತ್ತುವುದನ್ನೂ ಸಹ ನಿಷೇಧಿಸಲಾಗಿದೆ ಎಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.