By: Lokesh Jagannath|29 September 2021
ಡಾ.ಸಿ.ಎಂ.ಕಲ್ಲೇಶ್ವರಸ್ವಾಮಿ, ಸಹಾಯಕ ಪ್ರಾಧ್ಯಾಪಕರು, (ಕೀಟಶಾಸ್ತ್ರ), ಕೃಷಿ ಕಾಲೇಜು, ಶಿವಮೊಗ್ಗ ಮೊಬೈಲ್ ಸಂಖ್ಯೆ: 94495 37578
ಭತ್ತ ಭಾರತದಲ್ಲಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಪ್ರಧಾನ ಆಹಾರ ಬೆಳೆ. ಭಾರತವು ಪ್ರಪಂಚದಲ್ಲಿ ಅಕ್ಕಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಕರ್ನಾಟಕವು ಭಾರತದ ಹತ್ತನೇ ಪ್ರಮುಖ ಅಕ್ಕಿ ಉತ್ಪಾದಿಸುವ ರಾಜ್ಯವಾಗಿದೆ. ಕರ್ನಾಟಕದಲ್ಲಿ ಭತ್ತವನ್ನು ವಿವಿಧ ಮಣ್ಣು, ವೈವಿಧ್ಯಮಯ ತಾಪಮಾನ ಮತ್ತು ಮಳೆ ಪ್ರದೇಶದಲ್ಲಿ ಬೆಳೆಯುತ್ತಾರೆ. ಕರ್ನಾಟಕದ ಭೌಗೋಳಿಕ ಪ್ರದೇಶಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುವುದರಿಂದ ಬೇರೆ ಬೇರೆ ಕೀಟಗಳು ಬೇರೆ ಪ್ರದೇಶದಲ್ಲಿ ಬಾಧಿಸುತ್ತವೆ.
ಭಾರತದಲ್ಲಿ 70ಕ್ಕೂ ಹೆಚ್ಚು ಪ್ರಬೇಧಗಳನ್ನು ಭತ್ತದ ಕೀಟ ಪೀಡೆಗಳಾಗಿ ದಾಖಲಿಸಲಾಗಿದೆ ಮತ್ತು ಸುಮಾರು 20 ಜಾತಿಯ ಕೀಟಗಳು ಪ್ರಾಮುಖ್ಯತೆಯನ್ನು ಪಡೆದಿವೆ ಮತ್ತು ಬಹಳಷ್ಟು ಪ್ರದೇಶಗಳಲ್ಲಿ ಹಾನಿ ಮಾಡುತ್ತವೆ. ಒಟ್ಟಿನಲ್ಲಿ ವಿವಿಧ ಕೀಟಗಳು ಭತ್ತದ ಎಲ್ಲಾಭಾಗಗಳನ್ನು ಎಲ್ಲಾ ಬೆಳವಣಿಗೆಯ ಹಂತಗಳಲ್ಲಿ ಹಾನಿ ಮಾಡಿ ಶೇ. 20 ರಿಂದ ಶೇ. 50 ರಷ್ಟು ಇಳುವರಿ ಕಡಿತ ಮಾಡುತ್ತವೆ.
ಭತ್ತದ ಬಹು ಮುಖ್ಯ ಕೀಟ ರಸ ಹೀರುವ ಕೀಟ ಅವುಗಳ ಹಾನಿಯ ಲಕ್ಷಣ, ಜೀವನ ಚರಿತ್ರೆ ಮತ್ತು ಹತೋಟಿ ಕ್ರಮ.
ಭತ್ರತದಲ್ಲಿ ರಸ ಹೀರುವ ಕೀಟಗಳು ಹಾನಿಯ ಲಕ್ಷಣಗಳು:
ಮರಿ ಮತ್ತು ಪ್ರೌಢ ಕೀಟಗಳು ಮೃದು ಎಲೆಗಳ ರಸವನ್ನು ಹೀರುತ್ತವೆ. ಪರಿಣಾಮವಾಗಿ ಎಲೆಗಳ ಮೇಲೆ ಬಿಳಿಯ ಬಣ್ಣದ ಗೆರೆಗಳು ಕಂಡುಬರುತ್ತವೆ. ನಂತರ ಎಲೆಗಳು ಉದ್ದದ ಸುರುಳಿಯಾಗಿ ತುದಿಯಿಂದ ಕೆಳಕ್ಕೆ ಒಣಗಲು ಪ್ರಾರಂಭವಾಗುತ್ತದೆ. ಬಾಧಿತ ಸಸಿಮಡಿಗಳು ಕಂದು ಬಣ್ಣಕ್ಕೆ ತಿರುಗಿ ಮಸುಕಾದ ಹಳದಿ ಬಣ್ಣವನ್ನು ಪ್ರದರ್ಶಿಸುತ್ತವೆ. ತೀವ್ರತರವಾಗಿ ಹಾನಿಯಾದ ಸಸಿಮಡಿಯಲ್ಲಿ ಸಂಪೂರ್ಣವಾಗಿ ಸಸಿಗಳು ಒಣಗುವ ಸಾಧ್ಯತೆ ಇದೆ. ಎಲೆಗಳು ದೊಡ್ಡದಾದ ಸೂಜಿಗಳಂತೆ ಕಾಣುತ್ತವೆ. ಕೆಲವೊಮ್ಮೆ ನಾಟಿ ಮಾಡಿದ ನಂತರವೂ ಹಾನಿಯು ಮುಂದುವರೆಯುವ ಸಾಧ್ಯತೆ ಇದೆ. ಒದ್ದೆಯಾದ ಅಂಗೈಯಲ್ಲಿ ಸಸ್ಯಗಳ ಮೇಲೆ ಕೈಯಾಡಿಸಿದರೆ ಹೆಚ್ಚಿನ ಸಂಖ್ಯೆಯ ಹಳದಿ ಬಣ್ಣದ ಅಪ್ಸರೆ (ಮರಿ)ಕೀಟಗಳು ಮತ್ತು ಕಪ್ಪು ಬಣ್ಣದ ಪ್ರೌಢ ಕೀಟಗಳು ಅಂಗೈಗೆ ಅಂಟಿಕೊಳ್ಳುತ್ತವೆ. ತೀಕ್ಷ್ಮವಾದ ಮಳೆಬಿದ್ದಲ್ಲಿ, ಥ್ರಿಪ್ಸ್ಗಳ ಸಂಖ್ಯೆ ಕಡಿಮೆಯಾಗುತ್ತದೆ. ಮುಖ್ಯವಾಗಿ ಇದರ ಹಾನಿ ಸಸಿಮಡಿಗೆ ಸೀಮಿತವಾಗಿದ್ದು ಕೆಲವೊಮ್ಮೆ ನಾಟಿಮಾಡಿದ ನಂತರ ಗದ್ದೆಗಳಲ್ಲಿಯು ಕಂಡು ಬರುವ ಸಾಧ್ಯತೆ ಇರುತ್ತದೆ.
ಜೀವನ ಚರಿತ್ರೆ ಮತ್ತು ಕೀಟಗಳ ಗುರುತಿಸುವಿಕೆ: ಹೊಸ ಮೃದು ಎಲೆಗಳ ಅಂಗಾಂಶಗಳಲ್ಲಿ ಪ್ರೌಢಕೀಟಗಳು ಮೊಟ್ಟೆಗಳನ್ನು ಪ್ರತ್ಯೇಕವಾಗಿ ಒಂದೊಂದನ್ನೇ ಚುಚ್ಚಿ ಇಡುತ್ತವೆ. ಮೊಟ್ಟೆಗಳು ಬಿಳಿಯ ಬಣ್ಣದಾಗಿದ್ದು ಅವು ಬೆಳೆದಂತೆ ಕ್ರಮೇಣ ಮಸುಕಾದ ಹಳದಿ ಬಣ್ಣಕ್ಕೆ ತಿರುಗುತ್ತವೆ. ಮೊಟ್ಟೆಯ ಅವಧಿ 3-5 ದಿನಗಳು. ಹೊಸದಾಗಿ ಮೊಟ್ಟೆಯಿಂದ ಬಂದ ಅಪ್ಸರೆ ಹುಳುಗಳು ಪಾರದರ್ಶಕವಾಗಿರುತ್ತವೆ. ಆದರೆ ಮೊದಲ ಮೌಲ್ಟ್ ನಂತರ ಹಳದಿ ಮಿಶ್ರಿತ ಬಿಳಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಕಪ್ಪಾದ ಕಾಲು, ತಲೆ ಮತ್ತು ಮೀಸೆ(ಅಂಟಿನಾ)ಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಹುಳುಗಳು ಸುರುಳಿಕೊಂಡ ಎಲೆಗಳ ಒಳಗೆ ಕೋಶಾವಸ್ಥೆಗೆ ಹೋಗುತ್ತವೆ. ಪ್ರೌಢ ಹುಳುಗಳು 1 ಮಿ.ಮೀ. ಉದ್ದವಾಗಿದ್ದು ಕಡಿ ಕಪ್ಪು ಬಣ್ಣದ ಉದ್ದವಾದ ರೆಕ್ಕೆಗಳನ್ನು ಹೊಂದಿರುತ್ತವೆ. ಈ ರೆಕ್ಕೆಗಳ ಮೇಲೆ ಕೂದಲು ಇರುವುದರಿಂದ ಪ್ರ್ರಿಂಜಡ್ ವಿಂಗ್ಸ್ ಎಂದು ಕರೆಯುತ್ತಾರೆ ಗಂಡು ಥ್ರಿಪ್ಸ್ ಹೆಣ್ಣಿಗಿಂತ ಚಿಕ್ಕದಾಗಿದ್ದು ಹೆಚ್ಚು ತೆಳ್ಳಗಿರುತ್ತದೆ. ಗಂಡು ಹುಳುಗಳು ವಿರಳವಾಗಿ ಕಂಡುಬರುವುದರಿಂದ ಈ ಕೀಟಗಳು ಪಾರ್ಥೆನೋಜೆನಿಟಿಕ್ (ಅಲೈಂಗಿಕ/ ಮಿಲನ ಹೊಂದದೆ) ಕ್ರಿಯೆಯಿಂದ ವಂಶಾಭಿವೃದ್ಧಿ ಮಾಡುತ್ತದೆ. ಅಂದರೆ ಲೈಂಗಿಕ ಕ್ರಿಯೆಯ ಅಗತ್ಯತೆ ಇರುವುದಿಲ್ಲ. ಒಟ್ಟು ಜೀವನಚಕ್ರ 13-19 ದಿನಗಳು.
ಹತೋಟಿ ಕ್ರಮಗಳು: ನೀರು ಮತ್ತು ಶಿಫಾರಸ್ಸು ಮಾಡಿದಂತೆ ಪೋಷಕಾಂಶಗಳನ್ನು ಸಸಿಮಡಿಯಲ್ಲಿ ಕೊಡುವುದರಿಂದ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಸರಿಯಾಗಿ ನಿರ್ವಹಣೆ ಮಾಡದ ಸಸಿಮಡಿಗಳು ಹಾನಿಗೆ ತುತ್ತಾಗಿ ಬಳಲುತ್ತವೆ. ಹಾನಿ ಹೆಚ್ಚಾದರೆ ಮಾತ್ರ ಪಿಫ್ರೋನಿಲ್ 5 ಎಸ್.ಸಿ. 1.5 ಮಿ.ಲೀ/ಲೀ ಅಥವಾ ಇಮಿಡಾಕ್ಲೋಪ್ರಿಡ್ 0.5 ಮಿ.ಲೀ./ಲೀ. ನೀರಿನಲ್ಲಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ : ಡಾ.ಸಿ.ಎಂ.ಕಲ್ಲೇಶ್ವರಸ್ವಾಮಿ, ಸಹಾಯಕ ಪ್ರಾಧ್ಯಾಪಕರು, (ಕೀಟಶಾಸ್ತ್ರ), ಕೃಷಿ ಕಾಲೇಜು, ಶಿವಮೊಗ್ಗ ಮೊಬೈಲ್ ಸಂಖ್ಯೆ: 94495 37578