ವಮೊಗ್ಗ ತಾಲ್ಲೂಕಿನಲ್ಲಿ ಭತ್ತವು ಮುಖ್ಯ ಬೆಳೆಯಾಗಿದ್ದು, 2018-19ರ ಹಿಂಗಾರು/ಬೇಸಿಗೆ ಹಂಗಾಮಿಗೆ ಭತ್ತದ ಬೇಸಾಯಗಾರರು ಹಂಗಾಮು ಪೂರ್ವ ಕೆಲಸ ಕಾರ್ಯಗಳಾದ ಬಿತ್ತನೆ ಬೀಜ ಹಾಗೂ ಇತರೆ ಪರಿಕರಗಳನ್ನು ಹೊಂದಿಸುವಲ್ಲಿ ತೊಡಗಿಕೊಂಡಿರುತ್ತಾರೆ. ಅಚ್ಚುಕಟ್ಟು ಹಾಗೂ ನೀರಾವರಿ ವ್ಯವಸ್ಥೆ ಇರುವ ರೈತರಲ್ಲಿ ಈಗಾಗಲೇ 10 ರಿಂದ 20 ದಿನಗಳ ಭತ್ತದ ಸಸಿ ಮಡಿಯಿದ್ದು ಹಲವಡೆ ನಾಟಿ ಕಾರ್ಯ ಪ್ರಾರಂಭಿಸಿರುತ್ತಾರೆ. ರೈತರು ಬೀಜದಿಂದ ಹಾಗೂ ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳಿಂದ ಭತ್ತದ ಬೆಳೆಯನ್ನು ರಕ್ಷಿಸಲು ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೋದಲು ಪೀಡೆ ನಾಶಕಗಳಿಂದ ಉಪಚರಿಸಿ ಬಿತ್ತುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾದ್ಯವಾಗುವುದು.
ರೈತ ಬಾಂಧವರು ಭತ್ತದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಕಡ್ಡಾಯವಾಗಿ ಬೀಜೋಪಚಾರದ ಜೊತೆಗೆ ಈ ಕೆಳಕಂಡ ಬೇಸಾಯದ ಪದ್ಧತಿಗಳನ್ನು ಅನುಸರಿಸಲು ಸೂಚಿಸಿದೆ.
• ಬೆಳೆ ಕಟಾವು ನಂತರ ಆಳವಾಗಿ ಉಳುಮೆ ಮಾಡುವುದು
• ಎಕರೆಗೆ 200 ರಿಂದ 250 ಕೆ.ಜಿ ಸುಣ್ಣವನ್ನು ನಾಟಿ ಮಾಡುವ 15-20 ದಿನಗಳ ಮುನ್ನ ಬಳಸುವುದು.
• ಎಕರೆಗೆ 4 ಟನ್ ಅಥವಾ ಗರಿಷ್ಟ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರವನ್ನು ನಾಟಿ ಮಾಡುವ 15-20 ದಿನಗಳ ಮುನ್ನ ಬಳಸುವುದು.
• ನಾಟಿ ಮಾಡಲು 20 ರಿಂದ 25 ದಿವಸಗಳ ಸದೃಢವಾದ ಸಸಿಗಳನ್ನು ಉಪಯೋಗಿಸುವುದು.
• 20 x 10 ಸೆ.ಮೀ ಅಂತರದಲ್ಲಿ ಸಾಲು ನಾಟಿ ಮಾಡುವುದು.
• 5 ಸೆ.ಮೀ ಗಿಂತ ಹೆಚ್ಚು ಆಳವಾಗಿ ಸಸಿ ನಾಟಿ ಮಾಡದಿರುವುದು.
• ಪ್ರತೀ ಗುಣಿಗೆ 2 ರಿಂದ 3 ಸಸಿ ನಾಟಿ ಮಾಡುವುದು.
• ಎಕರೆಗೆ 400 ಗ್ರಾಂ ಅಝೋಸ್ಪೈರಿಲಂ ದ್ರಾವಣದಲ್ಲಿ ಸಸಿಗಳನ್ನು 10 ರಿಂದ 15 ನಿಮಿಷ ಅದ್ದಿ ನಾಟಿ ಮಾಡುವುದು.
• ಪ್ರತೀ ಮೂರು ಬೆಳೆಗಳಿಗೊಮ್ಮೆ ಎಕರೆಗೆ 8 ಕೆ.ಜಿ ಜಿಂಕ್ ಸಲ್ಪೇಟ್ ಹಾಗೂ 1 ರಿಂದ 2 ಕೆ.ಜಿ ಬೋರಾನ್ ಬಳಸುವುದು.
• ಕಳೆ ನಾಶಕ ಸಿಂಪರಣೆ: ಹೆಕ್ಟೇರ್ ಪ್ರದೇಶಕ್ಕೆ : ನಾಟಿ ಮಾಡಿದ 3-5 ದಿನದಲ್ಲಿ 30 ಕಿ.ಗ್ರಾಂ ಶೇ 5ರ ಬ್ಯೂಟಾಕ್ಲೋರ್ ಹರಳನ್ನು 75 ಕೆ.ಜಿ ಮರಳಿನಲ್ಲಿ ಮಿಶ್ರಣ ಮಾಡಿ ಎರಚುವುದು. ಅಥವಾ 2 ಲೀಟರ್ ಶೇ 50ರ ಇ.ಸಿ ಬ್ಯೂಟಾಕ್ಲೋರ್ ದ್ರಾವಣವನ್ನು 500 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.
• ಮಣ್ಣು ಮಾದರಿ ವಿಶ್ಲೇಷಣೆ ವರದಿ ಆದಾರದ ಮೇಲೆ ಶಿಪಾರಸ್ಸು ಮಾಡಲಾದ ಪ್ರಮಾಣದಲ್ಲಿ ರಸಗೊಬ್ಬರ (ಬೇಸಿಗೆ ಬೆಳೆಗೆ ಎಕರೆಗೆ 50 ಕೆ.ಜಿ ಸಾರಜನಕ 25 ಕೆ.ಜಿ, ರಂಜಕ, 25 ಕೆ.ಜಿ ಪ್ಯೊಟ್ಯಾಷ್) (ಶೇ 50ರಷ್ಟು ಸಾರಜನಕ, ಪೂರ್ತಿ ರಂಜಕ&ಪೋಟ್ಯಾಷ್ ಗೊಬ್ಬರಗಳನ್ನು ನಾಟಿ ಸಮಯದಲ್ಲಿ ಮತ್ತು ಉಳಿದ ಶೇ 25 ರಷ್ಟು ಸಾರಜನಕ ನಾಟಿ ಮಾಡಿದ 25-30 ದಿನದಲ್ಲಿ ಹಾಗೂ ಇನ್ನುಳಿದ ಶೇ25 ರಷ್ಟು ಸಾರಜನಕವನ್ನು ನಾಟಿ ಮಾಡಿದ 50-60 ದಿನದಲ್ಲಿ ಮೇಲುಗೊಬ್ಬರವಾಗಿ ಕೊಡುವುದು)ಮತ್ತು ಪೀಡೆನಾಶಕಗಳನ್ನು ಬಳಸುವಂತೆ ಸೂಚಿಸಿದೆ.
(ಡಾ. ರಾಮಪ್ಪ ಜಕನೂರ)
ಕೃಷಿ ಅಧಿಕಾರಿ
ರೈತ ಸಂಪರ್ಕ ಕೇಂದ್ರ,
ಹೊಳಲೂರು-2