ಭತ್ತದ ಕೃಷಿಯಲ್ಲಿ ಸಮಸ್ಯೆಗಳು ಎಲ್ಲಾ ಹಂತಗಳಲ್ಲೂ ಕಂಡು ಬಂದು ಇಳುವರಿ ಕುಂಠಿತಗೊಳಿಸುವುದಲ್ಲದೇ ಬೇಸಾಯದ ಖರ್ಚನ್ನು ಹೆಚ್ಚಿಸುತ್ತವೆ. ಕೃಷಿಯಲ್ಲಿ ಮೊದಲ ಹಂತದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳೆಂದರೆ ವಾತಾವರಣದ ವೈಪರೀತ್ಯ ಅಥವಾ ಮಣ್ಣಿನ ತೇವಾಂಶ ಕೊರತೆಯಿಂದ ಮೊಳಕೆಯ ಪ್ರಮಾಣ ಕಡಿಮೆಯಾಗುವುದು, ಮೊಳಕೆ ಬಂದ ಬೀಜ ಸಸಿಯಾಗದಿರುವುದು, ಸಸಿಗಳು ಬೀಜದಿಂದ ಪಸರಿಸುವ ರೋಗಗಳಿಂದ ಮತ್ತು ಕೀಟದಿಂದ ಬಾಧೆಗೊಂಡು ಬೆಳವಣಿಗೆ ಕುಂಠಿತವಾಗುವುದು ಅಥವಾ ಸಸಿಗಳು ಸತ್ತು ಹೋಗುವುದು. ಮತ್ತು ಪೋಷಕಾಂಶ ಕೊರತೆಯಿಂದ ಸಸಿ/ಬೆಳೆಯ ಬೆಳವಣಿಗೆ ಕುಂಠಿತೆಯಿಂದ ಸಸಿ/ಬೆಳೆಯ ಬೆಳವಣಿಗೆ ಕುಂಠಿತವಾಗುವುದು. ಇದರಿಂದ ಸಸ್ಯ ಸಂಖ್ಯೆ ಕಡಿಮೆ ಮತ್ತು ಕಳೆಗಳ ಸಂಖ್ಯೆ ಹೆಚ್ಚಾಗಿ ಬೆಳೆಯ ಜೊತೆ ಸಂಪನ್ಮೂಲ ಬಳಕೆಗೆ ಪೈಪೋಟಿ ಹಾಗೂ ರೋಗ ಕೀಟಗಳಿಗೆ ಆಶ್ರಯ ಕೊಟ್ಟು ಬೆಳೆಯ ಬೆಳವಣಿಗೆ ಇಳುವರಿ ಕಡಿಮೆಯಾಗುವುದು. ಉತ್ತಮ ಭತ್ತದ ಕೃಷಿಗೆ ಬೀಜವೇ ಮೂಲ. ಬಿತ್ತನೆ ಬೀಜ ಆರೋಗ್ಯವಂತ, ಸದೃಢವಾಗಿದ್ದು ಉತ್ತಮ ಮೊಳಕೆ ಪ್ರಮಾಣ ಮತ್ತು ಕೀಟ ರೋಗವನ್ನು ತಡೆಗಟ್ಟುವ ಶಕ್ತಿ ಹೊಂದಲು ಇದಕ್ಕೆ ಪರಿಹಾರವೆಂದರೆ ಬೀಜೋಪಚಾರ.

ಬೀಜೋಪಚಾರ:
ನೀರಿನಲ್ಲಿ ನೆನೆಸಿ, ರಾಸಾಯನಿಕ ದ್ರಾವಣದಲ್ಲಿ ಅದ್ದಿ, ಸೂಕ್ಷ್ಮಜೀವಿ/ರಸಗೊಬ್ಬರ ಮತ್ತು ಕೀಟ/ರೋಗ ನಾಶಕಗಳಿಂದ ಲೇಪಿಸಿ ಮೊಳಕೆಯೊಡೆಯುವಿಕೆ, ಬರನಿರೋಧಕತೆ, ಪೋಷಕಾಂಶ ಪೂರೈಕೆ ಹಾಗೂ ಕೀಟ/ರೋಗ ನಿರ್ವಹಣೆ ಮುಖಾಂತರ ಬಿತ್ತನೆ ಬೀಜದ ಗುಣಮಟ್ಟ ಹೆಚ್ಚಿಸುವ ವಿಧಾನವೇ ಬೀಜೋಪಚಾರ.

ಬೀಜೋಪಚಾರದ ಮುಖ್ಯ ಉದ್ದೇಶಗಳು :- ಬಿತ್ತನೆಗೆ ಸದೃಢ ಬೀಜದ ಆಯ್ಕೆ, ಶೀಘ್ರ ಮತ್ತು ಸಮನ್ವಯ ಮೊಳಕೆ, ಬರ ನಿರೋಧಕತೆ, ಪೋಷಕಾಂಶ ನಿರ್ವಹಣೆ ಮತ್ತು ಪರಿಸರದಲ್ಲಿನ ಪೋಷಕಾಂಶಗಳನ್ನು ಬೆಳೆಗೆ ಸಿಗುವಂತೆ ಮಾಡುವುದು ಹಾಗೂ ಕೀಟ ಮತ್ತು ರೋಗ ನಿಯಂತ್ರಣ.

ಭತ್ತದ ಬೀಜೋಪಚಾರ ವಿಧಾನಗಳು:

  1. ಭತ್ತದ ಬಿತ್ತನೆಗೆ ಸದೃಢ ಬೀಜದ ಆಯ್ಕೆ :- ಕೆಲವೊಮ್ಮೆ ಬಿತ್ತನೆಗೆ ರೈತರು ಸ್ವತಃ ಬೆಳೆದ ಬೀಜ ಬಳಸುವುದಾದಲ್ಲಿ, ಉತ್ತಮ ಮೊಳಕೆ ಪ್ರಮಾಣ ಪಡೆಯಲು ಜೊಳ್ಳು ಕಾಳಿಲ್ಲದ ಉತ್ತಮ/ಗಟ್ಟಿ ಬೀಜ ಆಯ್ಕೆ ಮಾಡಬೇಕಾಗುತ್ತದೆ. ಇದಕ್ಕೆ ಮಾಡಬೇಕಾದ ಬೀಜೋಪಚಾರವೆಂದರೆ, ಉಪ್ಪು ನೀರಿನ ದ್ರಾವಣದಲ್ಲಿ ಉಪಚಾರ ಮಾಡುವುದು,


4 ಲೀ. ನೀರು
1 ಕಿ.ಗ್ರಾಂ ಉಪ್ಪಿನ ದ್ರಾವಣಕ್ಕೆ ಬೀಜವನ್ನು ಹಾಕುವುದು
ಉಪ್ಪಿನ ದ್ರಾವಣದಲ್ಲಿರುವ ಬೀಜಗಳನ್ನು ಕೈಯಿಂದ ತೊಳೆಯುವುದು
ಗಟ್ಟಿ ಬೀಜಗಳು ತಳಭಾಗದಲ್ಲಿರುತ್ತವೆ, ಜೊಳ್ಳು ಬೀಜಗಳು ಮೇಲ್ಭಾಗಕ್ಕೆ ಬರುತ್ತವೆ
ಬೀಜಗಳನ್ನು ತೆಳುವಾಗಿ ಹರಡಿ ನೆರಳಿನಲ್ಲಿ ಒಣಗಿಸುವುದು
ವಿಧಾನ : ಬಿತ್ತನೆಗೆ ಬಳಸಲಿಚ್ಚಿಸುವ ಬೀಜವನ್ನು 4:1 ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕಿ.ಗ್ರಾ. ಉಪ್ಪು) ಹಾಕಬೇಕು. ಸ್ವಲ್ಪ ಸಮಯದ ನಂತರ ಗಟ್ಟಿ/ಬಲಿತ ಬೀಜ ಪಾತ್ರೆಯ ತಳಭಾಗದಲ್ಲಿದ್ದು ಜೊಳ್ಳು/ಅರ್ಧಬಲಿತ ಬಿತ್ತನೆ ಬೀಜ ಹಗುರವಾಗಿದ್ದು ನೀರಿನ ಮೇಲೆ ತೇಲುತ್ತದೆ. ತೇಲುತ್ತಿರುವ ಜೊಳ್ಳು ಬೀಜವನ್ನು ಬೇರ್ಪಡಿಸಿ, ಬಲಿತ/ಗಟ್ಟಿ ಬೀಜವನ್ನು ದ್ರಾವಣದಿಂದ ತೆಗೆದು 2-3 ಬಾರಿ ನೀರಿನಿಂದ ತೊಳೆದು ನೆರಳಿನಲ್ಲಿ ಒಣಗಿಸಿ ಬಳಸುವುದು.
  1. ಅಝೋಸ್ಪೈರಿಲಂ ಜೈವಿಕ ಗೊಬ್ಬರದ ಬಳಕೆ: ಅಝೋಸ್ಪೈರಿಲಂ ಎನ್ನುವ ಏಕಾಣು ಜೀವಿ ಭತ್ತದ ಸಸ್ಯಗಳ ಬೇರಿನ ಹೊರ ವಲಯದಲ್ಲಿ ಜೀವಿಸಿ ಸಾರಜನಕ ಸ್ಥಿರೀಕರಣ ಮಾಡುತ್ತದೆ. ಅಝೋಸ್ಪೈರಿಲಂ ಜೀವಾಣು ಗೊಬ್ಬರ ಬಳಕೆಯಿಂದ ಬೆಳೆಗಳಿಗೆ ನೇರವಾಗಿ ಸಾರಜನಕ ಲಭ್ಯವಾಗುವುದರ ಜೊತೆಗೆ ಈ ಏಕಾಣುಗಳು ಹಾರ್ಮೋನುಗಳನ್ನು ಉತ್ಪನ್ನ ಮಾಡಿ ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುತ್ತವೆ.
ಅಝೋಸ್ಪೈರಿಲಂ ಜೀವಾಣು ಬಳಸುವ ವಿಧಾನ


ಇದನ್ನು ಮೂರು ಹಂತಗಳಲ್ಲಿ ಬಳಸಬಹುದು.

  1. ಎಕರೆ ಪ್ರದೇಶಕ್ಕೆ ಬೇಕಾಗುವ ಬಿತ್ತನೆ ಬೀಜವನ್ನು 400 ಗ್ರಾಂ. ಅಝೋಸ್ಪೈರಿಲಂ ಜೈವಿಕ ಗೊಬ್ಬರದೊಂದಿಗೆ ಉಪಚರಿಸುವುದು;
    ಅಥವಾ
  2. 800 ಗ್ರಾಂ. ಜೈವಿಕ ಗೊಬ್ಬರವನ್ನು ನೇರವಾಗಿ ಸಸಿ ಮಡಿಯಲ್ಲಿ ಅಥವಾ ನಾಟಿ ಮಾಡುವ ಪ್ರದೇಶಕ್ಕೆ ಎರಚುವುದು;
    ಅಥವಾ
  3. ಸಸಿಮಡಿಯಿಂದ ಕಿತ್ತ ನಂತರ ಸಸಿ ಬೇರುಗಳನ್ನು 400 ಗ್ರಾಂ. ಅಝೋಸ್ಪೈರಿಲಂ ಜೈವಿಕ ಗೊಬ್ಬರದ ಮಿಶ್ರಣದಲ್ಲಿ ಅದ್ದಿ ನಾಟಿ ಮಾಡುವುದು.

ವಿಧಾನ
1) ಬೀಜೋಪಚಾರ (ನೇರ ಬಿತ್ತನೆ ಮಾಡುವಾಗ): 50 ಗ್ರಾಂ. ಬೆಲ್ಲ ಅಥವಾ ಸಕ್ಕರೆಯನ್ನು ಅರ್ಧ ಲೀಟರ್ ನೀರಿನಲ್ಲಿ ಕರಗಿಸಿ 5 ನಿಮಿಷಗಳ ಕಾಲ ಕುದಿಸಿ ಅಂಟು ದ್ರಾವಣವನ್ನು ತಯಾರಿಸುವುದು. ತಣಿದ ಬೆಲ್ಲ ಅಥವಾ ಸಕ್ಕರೆ ದ್ರಾವಣವನ್ನು ಭತ್ತದ ಮೇಲೆ ಸಮಾನವಾಗಿ ಲೇಪಿಸಿ ನಂತರ ಜೈವಿಕ ಗೊಬ್ಬರ (400 ಗ್ರಾಂ.)ಮಿಶ್ರಣ ಮಾಡುವುದು. ಅನಂತರ ಅರ್ಧ ಗಂಟೆ ನೆರಳಿನಲ್ಲಿ ಒಣಗಿಸಿ ಸಸಿ ಮಡಿಗೆ ಉಪಯೋಗಿಸುವುದು;
ಅಥವಾ

2) ನಾಟಿ ಮಾಡುವ ಪ್ರದೇಶದಲ್ಲಿ ಉಪಯೋಸುವುದು: 800 ಗ್ರಾಂ. ಅಝೋಸ್ಪೈರಿಲಂ ಜೈವಿಕ ಗೊಬ್ಬರವನ್ನು ನುಣ್ಣನೆ ಪುಡಿ ಮಾಡಿದ 10 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ ಮತ್ತು 10 ಕಿ.ಗ್ರಾಂ ಮಣ್ಣಿನೊಡನೆ ಮಿಶ್ರಣಗೊಳಿಸುವುದು. ಈ ಮಿಶ್ರಣ ಗೊಬ್ಬರವನ್ನು ಸಸಿ ಕ್ಷೇತ್ರಕ್ಕೆ ಅಥವಾ ಒಂದು ಎಕರೆ ನಾಟಿ ಮಾಡುವ ಪ್ರದೇಶಕ್ಕೆ ನೇರವಾಗಿ ಎರಚಿ ಉಳುಮೆ ಮಾಡುವುದು;
ಅಥವಾ
3) ಸಸಿ ಬೇರುಗಳ ಉಪಚಾರ: 3 ಮೀ. * 3 ಮೀ. ಅಗಲದ ಹೊಂಡವನ್ನು ಮಾಡಿ ಇದರಲ್ಲಿ 4 ಅಂಗುಲ ನೀರು ನಿಲ್ಲಿಸಬೇಕು. 400 ಗ್ರಾಂ. ಅಝೋಸ್ಪೈರಿಲಂ ಗೊಬ್ಬರವನ್ನು ಹೊಂಡದಲ್ಲಿ ಹಾಕಿ ಮಿಶ್ರಣ ಮಾಡುವುದು. ಸಸಿ ಮಡಿಯಿಂದ ಕಿತ್ತ ಸಸಿಗಳನ್ನು 10 ರಿಂದ 15 ನಿಮಿಷಗಳ ಕಾಲ ಮಿಶ್ರಣದಲ್ಲಿ ಅದ್ದಿ ನಂತರ ನಾಟಿ ಮಾಡುವುದು.

  1. ರೋಗ ನಿಯಂತ್ರಣಕ್ಕೆ :- ರೋಗಕಾರಕ ಸೂಕ್ಷ್ಮಜೀವಿಗಳು ಬೆಳೆ ಹಂತದಲ್ಲಿ / ಬಿತ್ತನೆಯ ನಂತರ ಮಣ್ಣಿನಿಂದ ಬಿತ್ತನೆ ಬೀಜದ ಜೊತೆ ಬೆರೆತು ಹಿತಕರ ವಾತಾವರಣದಲ್ಲಿ ಬೆಳವಣಿಗೆ ಹೊಂದಿ ಬೆಳೆಗಳ ರೋಗಕ್ಕೆ ಕಾರಣವಾಗುತ್ತವೆ. ಈ ರೋಗಗಳ ನಿಯಂತ್ರಣಕ್ಕೆ ರೋಗ ನಾಶಕಗಳಿಂದ ಬೀಜೋಪಚಾರ ವಿಧಾನ ಕೆಳಕಂಡಂತಿದೆ.
ಭತ್ತದ ಬೀಜವನ್ನು ಕಾರ್ಬೆಂಡೈಜಿಂ ನಿಂದ ಬೀಜೋಪಚಾರ ಮಾಡಿರುವುದು

ಬೀಜೋಪಾಚಾರದಲ್ಲಿ ಮುಂಜಾಗ್ರತಾ ಕ್ರಮಗಳು

  1. ಅಗತ್ಯ ಪ್ರಮಾಣದ ಬೀಜಕ್ಕೆ ಬೀಜೋಪಚಾರ ಮಾಡಿ ತಕ್ಷಣ ಬಿತ್ತನೆಗೆ ಬಳಸುವುದು
  2. ಶಿಫಾರಿತ ವಸ್ತು ಮತ್ತು ಶಿಫಾರಿತ ಪ್ರಮಾಣದ ಬಳಕೆ
  3. ಬೀಜೋಪಚಾರ ಮಾಡಲು ಸುರಕ್ಷಿತ ಮುಖವಾಡ ಮತ್ತು ಕೈಚೀಲ ಬಳಸಿ
  4. ಬೀಜೋಪಚಾರ ಮಾಡುವಾಗ ತಿನ್ನುವುದು / ಕುಡಿಯುವುದು ಮಾಡಬಾರದು.
    ಬೀಜೋಪಚಾರದ ಲಾಭಗಳು
  5. ಬೆಳೆಯಿಂದ ಬೆಳೆಗೆ ಹರಡುವ ರೋಗವನ್ನು ಬೀಜಗಳ ಮುಖಾಂತರ ನಿಯಂತ್ರಿಸಬಹುದು.
    ಉದಾ. ಕಾಳಿನ ಕಾಡಿಗೆ ರೋಗ, ಬ್ಲೈಟ್ ಇನ್ನಿತರೆ ರೋಗಗಳು
  6. ಬೀಜ ಕೊಳೆಯುವಿಕೆ ಮತ್ತು ಸಸಿ ಒಣಗುವಿಕೆ ತಡೆಯಬಹುದು.
  7. ಬೀಜದ ಮೊಳಕೆ ಪ್ರಮಾಣ ಹಾಗೂ ಸಂಗ್ರಹಣಾ ಶಕ್ತಿಯನ್ನು ಅಧಿಕಗೊಳಿಸಬಹುದು.
  8. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬೀಜಗಳಿಂದ ರೋಗ ಹರಡುವುದನ್ನು ತಡೆಯಲು ಸಹಾಯಕ

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: ಬಸವರಾಜ, ವಿಜ್ಞಾನಿ (ಬೇಸಾಯ ಶಾಸ್ತ್ರ)
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ, ಮೊ: 9945134501

ರೇಖಾ, ಎಂ.ವಿ., ವಿಜ್ಞಾನಿ (ಮಣ್ಣು ವಿಜ್ಞಾನ)
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ, ಮೊ: 7411295034

error: Content is protected !!