ಶಿವಮೊಗ್ಗ: ಜೀವನದಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆಯಂತಹ ಹಿಂದು ಮಹಾ ಗ್ರಂಥಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಂಸಾರದ ಸಮಸ್ಯೆಗಳಿಗೆ ರಾಮಾಯಣ, ಮಹಾ ಭಾರತದಲ್ಲಿ, ಬದುಕಿನ ದ್ವಂದಗಳಿಗೆ ಭಗವದ್ಗೀತೆಯಲ್ಲಿ ಪರಿಹಾರವಿದೆ. ಇದರಿಂದಾಗಿ ಭಗವದ್ಗೀತೆಯಂತಹ ಹಿಂದು ಗ್ರಂಥಗಳು ಜಗತ್ತಿನ ಶ್ರೇಷ್ಠ ಗ್ರಂಥಗಳಲ್ಲಿ ಒಂದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಚಿಂತಕ ಡಾ|| ಸಂಬಿತ್ ಪಾತ್ರ ಅಭಿಮತ ವ್ಯಕ್ತಪಡಿಸಿದರು.

ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ್ಯದ ತ್ರೈವಾರ್ಷಿಕ ಸಮ್ಮೇಳನ ಸ್ವಾಗತ ಸಮಿತಿಯು ೧೬-೧೨-೨೦೨೨ರಂದು ಸಂಜೆ ಇಲ್ಲಿನ ಸುವರ್ಣ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಂಡಿದ್ದ ಹಿಂದು ವಾಯ್ಸ್ ಆಫ್ ಶಿವಮೊಗ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬದುಕನ್ನು ಬಹುತೇಕವಾಗಿ ಹೊರ ಜಗತ್ತು, ಅದರ ಆಗುಹೋಗು ಹಾಗೂ ಇತರರಿಗಾಗಿ ಕಳೆಯುತ್ತೇವೆ. ಚಿಂತನೆ, ಒಳಧ್ವನಿಯ ಆಂತರಿಕ ಜಗತ್ತಿಗೂ ಸಮಯವನ್ನು ಮೀಸಲಿಡಬೇಕು. ಧಾರ್ಮಿಕ ಗ್ರಂಥಗಳನ್ನು ಅವಲೋಕಿಸಬೇಕು. ಜ್ಞಾನದ ಆಗರವಾಗಿರುವ ಈ ಗ್ರಂಥಗಳು ಬದುಕಿನ ಪಾಠ ಕಲಿಸುತ್ತವೆ. ಇವುಗಳ ಅಧ್ಯಯನ ವ್ಯರ್ಥವಲ್ಲ ಎಂದರು.

ಹಿಂದು ಧರ್ಮ ಅತ್ಯಂತ ಪ್ರಮುಖ ಮತ್ತು ಮೌಲ್ಯಯುತ ವಿಶೇಷವಾಗಿದೆ. ಇದು ಯಾವುದೇ ಬಾಹ್ಯ ರೇಖೆಯಳಗೆ ತನ್ನನ್ನು ಮುಚ್ಚಿಟ್ಟುಕೊಂಡಿಲ್ಲ. ಆದರೆ ಜ್ಞಾನ ಮತ್ತು ಅನುಭವದ ಅಪರಿಮಿತತೆಯ ವಾಸ್ತವಿಕ ನಿರೂಪಣೆಯಾಗಿದೆ ಎಂದು ತಿಳಿಸಿದರು.

ದೊಡ್ಡ ದೊಡ್ಡ ಸೇತುವೆ, ರಸ್ತೆ, ಕಟ್ಟಡ ನಿರ್ಮಾಣವಷ್ಟೇ ಅಭಿವೃದ್ಧಿಯಲ್ಲ. ಪ್ರಕೃತಿಗೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಇದಕ್ಕೆ ವಿರುದ್ಧವಾಗಿ ನಡೆದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಂತ್ರಜ್ಞಾನದ ಬಗ್ಗೆ ಕೇವಲ ಆಧುನಿಕ ಜಗತ್ತಿಗಷ್ಟೇ ಅಲ್ಲ ನಮ್ಮ ಪೂರ್ವಿಕರಿಗೂ ಅರಿವಿತ್ತು. ಆದರೆ ಅವರುಪ್ರಕೃತಿಗೆ ವಿರುದ್ಧವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಿಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಡಾ||ತೇಜಸ್ವಿ ಟಿ.ಎಸ್., ಪ್ರಧಾನ ಕಾರ್ಯದರ್ಶಿ ಹರ್ಷ ಕಾಮತ್, ಹಿಂದು ಜಾಗರಣ ವೇದಿಕೆ ಪ್ರಾಂತ ಸಮಿತಿ ಸದಸ್ಯ ಉಲ್ಲಾಸ್ ಕೆ.ಟಿ. ಉಪಸ್ಥಿತರಿದ್ದರು.

                                                                                      
                                                                                
error: Content is protected !!