
ಬೊಜ್ಜು ಒಂದು ಸಾಮಾನ್ಯವಾದ ಮತ್ತು ಸವಾಲಾಗಿ ಪರಿಣಮಿಸಿರುವ ಆರೋಗ್ಯ ಸಮಸ್ಯೆ, ಬೊಜ್ಜು ದಿನೇ ದಿನೇ ಹೆಚ್ಚುತ್ತಿರುವ ಹಾಗೂ ಅತ್ಯಂತ ನಿರ್ಲಕ್ಷಿತವಾಗಿರುವ ಆರೋಗ್ಯ ಸಮಸ್ಯೆ ಎಂಬುದು ವಿಶ್ವಸಂಸ್ಥೆಯ ಅಭಿಪ್ರಾಯ. ಬೊಜ್ಜು ಅಥವಾ ಸ್ಥೂಲ ಕಾಯಕ್ಕೆ ಅನಿಯಮಿತ ಆಹಾರ ಸೇವನೆ, ದೈಹಿಕ ವ್ಯಾಯಾಮದ ಕೊರತೆ, ಶಿಸ್ತು ರಹಿತ ಜೀವನ ಶೈಲಿ ಮತ್ತು ಅನಗತ್ಯವಾಗಿ ಸೇರಿದ ಕೊಬ್ಬಿನ ಹೆಚ್ಚಳವೇ ಕಾರಣ, ಇದಕ್ಕೆಮೇದೋರೋಗವೆಂದು ಕರೆಯುತ್ತಾರೆ.

ಬೊಜ್ಜು ಎಲ್ಲಾ ಜನಾಂಗ, ಮತ, ಧರ್ಮದವರನ್ನು ಕಾಡುವ ಕಾಯಿಲೆ. ಬೊಜ್ಜು ಹೇಗೆ ಬರುತ್ತದೆ ಎಂದು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ತಿಳಿಯುವ ಅಂಶವೆಂದರೆ ನಮ್ಮ ದೇಹದಲ್ಲಿ ಕೊಬ್ಬಿನ ಜೀವ ಕೋಶಗಳ ಸಂಖ್ಯೆ ಜೀವನ ಪಯರ್ಂತ ಒಂದೇ ಸಮನಾಗಿರುತ್ತದೆ. ಬೊಜ್ಜು ಹೊಂದಿರುವವರಲ್ಲಿ ಕೊಬ್ಬಿನ ಕೋಶಗಳು ಗಾತ್ರದಲ್ಲಿ ಹಿಗ್ಗುತ್ತಾ ಹೋಗುತ್ತವೆ. ಆದರೆ ಸಂಖ್ಯೆಯಲ್ಲಿ ಜಾಸ್ತಿ ಆಗುವುದಿಲ್ಲ ಬೊಜ್ಜನ್ನು ಹಲವಾರು ವಿಧಗಳಲ್ಲಿ ಅಳೆಯಲಾಗುತ್ತದೆ. ಇವುಗಳಲ್ಲಿ ದೇಹದಲ್ಲಿ ಕೊಬ್ಬಿನಾಂಶದ ಶೇಕಡಾವಾರು ಪ್ರಮಾಣ, ಚರ್ಮದ ಮಡಿಕೆಗಳ ದಪ್ಪ, ಸೊಂಟ ಮತ್ತು ಅಂಡಿನ ಭಾಗಗಳ ಆನುಪಾತ ಲೆಕ್ಕಾಚಾರ. ಎತ್ತರ ಮತ್ತು ತೂಕಗಳ ನಡುವಿನ ಅನುಪಾತ ಲೆಕ್ಕಾಚಾರ ಮುಖ್ಯವಾದವುಗಳು.
ಅನುವಂಶೀಕತೆ ಬೊಜ್ಜಿಗೆ ಮುಖ್ಯ ಕಾರಣವಾಗಿರುತ್ತದೆ. ಹಾರ್ಮೋನ್‍ಗಳಲ್ಲಿ ವ್ಯತ್ಯಾಸ, ಹೆಚ್ಚಿನ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮಾಡದಿರುವುದು, ಹೆರಿಗೆಯ ನಂತರದ ಬದಲಾವಣೆಗಳು
ಮುಖ್ಯವಾದ ಕಾರಣಗಳು, ನಿಮ್ಮ ತೂಕವು ಸರಿಯಾಗಿದೆ ಎಂದು ಬೇಗನೆ ತಿಳಿದುಕೊಳ್ಳಲು ನಿಮ್ಮ ಎತ್ತರ (ಸೆಂ.ಮೀ) ದಲ್ಲಿ 100ನ್ನು ಕಳೆಯಿರಿ ಅದೇ ಮಾದರಿಯ ತೂಕ.
ನಿಗದಿ ಪಡಿಸಿದ ಸಾಮಾನ್ಯ ಮಟ್ಟಕ್ಕಿಂತ ಶೇ.10 ರಷ್ಟು ತೂಕ ಹೆಚ್ಚಾದರೆ ಅದನ್ನು ಆರಂಭಿಕ ಬೊಜ್ಜು ಎಂದು ಕರೆಯುತ್ತಾರೆ. ದೇಹದ ಇತರ ಅಂಗಗಳ ಮೇಲೆ ಇದರ ದುಷ್ಪರಿಣಾಮ ಕಡಿಮೆ, ಅಲ್ಲದೆ ಇದನ್ನು ಸೂಕ್ತ ಪಥ್ಯಾಹಾರ ಮತ್ತು ವ್ಯಾಯಾಮದಿಂದ ಕೆಲವೇ ವಾರಗಳಲ್ಲಿ ಸಾಮಾನ್ಯ ಸ್ಥಿತಿಗೆ ತಂದುಕೊಳ್ಳಬಹುದು. ಇದನ್ನು ಅಲಕ್ಷಿಸಿದರೆ ದೇಹದಲ್ಲಿ ತೊಂದರೆಗಳು ಉಂಟಾಗಬಹುದು. ನಿಗದಿಪಡಿಸಿದ ಸಾಮಾನ್ಯ ಮಟ್ಟಕ್ಕಿಂತ ಶೇ.20 ರಷ್ಟು ತೂಕ ಹೆಚ್ಚಾದರೆ ಅದಕ್ಕೆ ಬೊಜ್ಜು ಎಂದು
ಕರೆಯುತ್ತಾರೆ. ಇದು ನಿಶ್ಚಿತವಾಗಿ ಇತರ ತೊಂದರೆಗಳನ್ನು ಹುಟ್ಟುಹಾಕುತ್ತದೆ. ದೇಹವನ್ನು ಸ್ಥೂಲಗೊಳಿಸಿ ಆಯುಷ್ಯವನ್ನು ಕಡಿಮೆಗೊಳಿಸುತ್ತದೆ.
ಭಾರತೀಯ ಜೀವನ ಕ್ರಮವನ್ನು ಗಮನಿಸಿದಾಗ ಬಡತನ ರೇಖೆಯ ಹತ್ತಿರಕ್ಕೆ/ಕೆಳಗಿನ ಮಟ್ಟದಲ್ಲಿ ಜೀವಿಸುವ ಶ್ರಮಜೀವಿಗಳಲ್ಲಿ ಅತಿಯಾದ ದೇಹತೂಕ ಕಂಡುಬರುವುದಿಲ್ಲ, ಹಾಗಾಗಿ ಹಳ್ಳಿಗರಲ್ಲಿ ಬೊಜ್ಜಿನ ಹಾವಳಿ ಅಷ್ಟಿಲ್ಲ. ಪ್ರತಿಶತ 73 ರಷ್ಟು ನಗರ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಆರಂಭಿಕ ಬೊಜ್ಜು ಕಂಡುಬಂದಿದೆ. ನಗರದ ಯಾಂತ್ರಿಕ ಜೀವನ, ಸಮಯಾಭಾವ, ದೂರವಿರುವ ಕಾರ್ಯಾಲಯವನ್ನು ತಲುಪುವುದಕ್ಕಾಗಿ ವಾಹನಗಳ ಬಳಕೆ, ದೈಹಿಕ ವ್ಯಾಯಾಮ ನಡೆಸಲಾರದಂತಹ ಆಲಸ್ಯ.
ಸೋಮಾರಿತನ, ಇವೆಲ್ಲದರ ಸಮ್ಮಿಲನದಿಂದ ಪಟ್ಟಣಗಳಲ್ಲಿ ಅನೇಕರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಇತ್ತೀಚಿನ ವೈಜ್ಞಾನಿಕ ವಿಶ್ಲೇಷಣೆ ಪ್ರಕಾರ ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇ.5 ರಷ್ಟು ಜನ ಬೊಜ್ಜಿನಿಂದ
ಬಳಲುತ್ತಿದ್ದಾರೆ, ಪ್ರತಿ 4 ಭಾರತೀಯರಲ್ಲಿ 3 ಜನರು ಹೆಚ್ಚಿನ ತೂಕವನ್ನು ಹೊಂದಿದ್ದಾರೆ. ಪುರುಷರಿಗಿಂತ ಸ್ತ್ರೀಯರಲ್ಲಿ ಬೊಜ್ಜು ಹೆಚ್ಚಾಗಿರುವುದು ಕಂಡುಬಂದಿದೆ. ಅಲ್ಲದೇ 15 ರಿಂದ 49 ವಯಸ್ಸಿನವರಲ್ಲಿ ಶೇ.11 ರಿಂದ 15 ರಷ್ಟು ಬೊಜ್ಜು ಹೆಚ್ಚಾಗಿರುವುದೆಂದು ಪರಿಗಣಿಸಲಾಗಿದೆ. ಸ್ಥೂಲಕಾಯವುಳ್ಳವರ ಹೆಚ್ಚಿನ ಪ್ರಮಾಣವು ಪಂಜಾಬ್, ಕೇರಳ, ದೆಹಲಿ ಮತ್ತು ಆಂಧ್ರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಕಂಡು ಬಂದಿದೆ.
ಪುರುಷರಲ್ಲಿ ಹೊಟ್ಟೆಯ ಸುತ್ತ ಕೊಬ್ಬು ಶೇಖರಣೆಯಾಗುವುದು ಸಹಜ. ಇದು ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ಕಾರಣೀಭೂತವಾಗಿದೆ. ಪ್ರೌಢಾವಸ್ಥೆಯಲ್ಲಿನ ಹೆಚ್ಚುವರಿ ಹೊಟ್ಟೆ ಕೊಬ್ಬು ಮತ್ತು ದೊಡ್ಡ ಸೊಂಟವು ಪುರುಷರಲ್ಲಿ ಸಾವಿಗೆ ಎಡೆಮಾಡಿಕೊಡುತ್ತದೆ.
ಬೊಜ್ಜಿಗೆ ಕಾರಣಗಳು
- ದಿನನಿತ್ಯ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು. ಅತಿ ಕೊಬ್ಬಿನ ಹಾಗೂ ಶಕ್ತಿಯುತ ವ್ಯಂಜನಗಳಾದ ಬಜಿ, ಮಿರ್ಚಿ, ಉಂಡೆ, ಬರ್ಫಿ, ಫಿಜ್ಜಾ, ಬರ್ಗರ್, ನೂಡಲ್ಸ್ ಸೇವಿಸುವುದು.
- ದೈಹಿಕ ಕೆಲಸವು ಕಡಿಮೆ ಮಾಡಿ ಹೆಚ್ಚು ವಿಶ್ರಾಂತಿ ಪಡೆಯುವುದರಿಂದ ಕ್ಯಾಲೋರಿಯ ಬಳಕೆ ಕಡಿಮೆಯಾಗುವುದು. ಕುಳಿತಲ್ಲಿ ಕೆಲಸ ಮಾಡುವುದು, ಮನೆ ಕೆಲಸಕ್ಕೆ ಆಳು ಹಾಗೂ ಆಧುನಿಕ ಯಂತ್ರಗಳಾದ ವಾಷಿಂಗ್ ಮಷಿನ್, ಮಿಕ್ಸಿ, ಫ್ರಿಜ್ ಇತ್ಯಾದಿಗಳ ಉಪಯೋಗವು ಬೊಜ್ಜಿಗೆ ದಾರಿ ಮಾಡಿಕೊಡುವುದು.
- ಪಾಲಕರಿಗೆ ಆಹಾರದ ಪೌಷ್ಟಿಕತೆ ಕುರಿತು ತಿಳುವಳಿಕೆ ಕಡಿಮೆ ಇರುವುದು ಹಾಗೂ ಮಕ್ಕಳಿಗೆ ಒತ್ತಾಯ ಮಾಡಿ ಹೆಚ್ಚಿನ ಆಹಾರ ತಿನ್ನಿಸುವುದು.
- ಜಾಹೀರಾತಿನ ಮೂಲಕ ಯುವ ಜನಾಂಗವು ಅಪೌಷ್ಟಿಕ ತಿನಿಸುಗಳಾದ ಜಂಕ್/ಫಾಸ್ಟ್ ಫುಡ್ಸ್ ಸೇವನೆಗೆ ಮಾರು ಹೋಗುವುದು.
- ಮದ್ಯಪಾನ ಸೇವನೆಯ ಜೊತೆಗೆ ಕೊಬ್ಬಿನ ಹಾಗೂ ಪಿಷ್ಟಮಯ ಪದಾರ್ಥ ಸೇವಿಸುವುದು.
- ಆತಂಕದ ಕಾಯಿಲೆಗಳು ಮತ್ತು ಖಿನ್ನತೆ ಆವರಿಸಿದಾಗ ದುಃಖದಿಂದ ಹೊರಬರಲು ಕುರುಕಲು ತಿಂಡಿಗಳಾದ ಚಕ್ಕುಲಿ, ಬ್ರೆಡ್, ಬಿಸ್ಕಟ್ ಮುಂತಾದವುಗಳನ್ನು ಸೇವಿಸುವುದು.
- ಮಾರುಕಟ್ಟೆಯಲ್ಲಿ ಸುಲಭವಾಗಿ ದೊರಕುವ ಅತೀ ಕೊಬ್ಬುವುಳ್ಳ ಮತ್ತು ಶಕ್ತಿಯುತವಾದ ಸಂಸ್ಕರಿಸಿದ ಪದಾರ್ಥಗಳನ್ನು ಪ್ರತಿದಿನ ಸೇವಿಸುವುದು.
ಬೊಜ್ಜಿನಿಂದಾಗುವ ಹಾಂಗಳು
- ಬೊಜ್ಜಿನಿಂದ ಎದ್ದು ಕಾಣುವ ವಿಕಾರಮಯವಾದ ದೇಹ ಸ್ವರೂಪವು ಮಾನಸಿಕ ಶಾಂತಿಯ ಕದಡುವಿಕೆಗೆ ಕಾರಣ.
- ಬೊಜ್ಜು ನಿವಾರಣೆಯಾಗದಿದ್ದಾಗ ಮೈಯ ಮಾಟಕ್ಕೆ ಕುತ್ತು ತರುವುದಲ್ಲದೆ, ನಡಿಗೆಯಲ್ಲಿ ಸಾಕಷ್ಟು ತೊಂದರೆ, ಅಸಹಾಯಕತೆ, ಹತಾಶೆ, ಆತಂಕ ಮತ್ತು ಮಾನಸಿಕ ತೊಳಲಾಟ ಪ್ರಾರಂಭ.
- ರಕ್ತದೊತ್ತಡದಲ್ಲಿ ಏರುಪೇರು.
- ಮಂಡಿನೋವು, ತೊಡೆ, ಕೀಲು ನೋವು, ಸೊಂಟನೋವು ಒಂದೊಂದಾಗಿ ಪ್ರಾರಂಭ.
- ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿ ಹೃದಯಾಘಾತವಾಗುವ ಸಂಭವ.
- ಸ್ಥೂಲ ಕಾಯವು ಮಧುಮೇಹಕ್ಕೆ ಆಹ್ವಾನ.
- ಯುವತಿಯರಲ್ಲಿ ಬೊಜ್ಜುತನ ಕಂಡುಬಂದರೆ ಋತುಸ್ರಾವದಲ್ಲಿ ಏರುಪೇರು, ಬಂಜೆತನ ಹಾಗೂ ಜನನೇಂದ್ರಿಯಗಳಲ್ಲಿ ಉರಿ, ನೋವು, ಮುಂತಾದ ತೊಂದರೆಗಳು.
- ಚರ್ಮದಲ್ಲಿ ಕೊಬ್ಬು ಹೆಚ್ಚಾಗಿ ಶೇಖರಣೆಗೊಂಡು ಚರ್ಮ ದಪಾಗುತ್ತದೆ. ವ್ಯಕ್ತಿ ಕುಳಿತಾಗ ಹೊಟ್ಟೆಯ ಚರ್ಮದಲ್ಲಿ ಮೂರು ಮಡಿಕೆಗಳು (3 ಟೈಯರ್) ಕಂಡುಬರುತ್ತದೆ.
- ಬೊಜ್ಜಿರುವವರು ಬೇಗನೆ ಏಳಲಾರರು, ನಡೆಯಲಾರರು ಮತ್ತು ನಾಲ್ಕು ಹೆಜ್ಜೆ ನಡೆದರೆ ನಿಟ್ಟುಸಿರು ಬಿಡುತ್ತಾರೆ. ಸ್ಥೂಲ ಕಾಯ ಹೊಂದಿದವರು ಯಾವ ಕೆಲಸವನ್ನೂ ದೀರ್ಘ ಕಾಲ ಮಾಡಲಾಗದೇ ಬಹುಬೇಗ ಸುಸ್ತಾಗುತ್ತಾರೆ.
- ಅತಿಯಾದ ಬೊಜ್ಜು ಅಲ್ಪಾಯುಷ್ಯಕ್ಕೆ ಕಾರಣ. ಬೊಜ್ಜುಳ್ಳ ವ್ಯಕ್ತಿಯ ಜೀವನ ಮೊಟಕುಗೊಳ್ಳುತ್ತದೆ. ಸರಾಸರಿಗಿಂತ 12 ಕಿ. ಗ್ರಾಂ ಹೆಚ್ಚಳದಷ್ಟು ಬೊಜ್ಜುಳ್ಳ ವ್ಯಕ್ತಿಯ ಆಯುಷ್ಯ ಶೇ.25 ರಷ್ಟು ಕಡಿಮೆ ಆಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ:
ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ , 93539 78995