ಬುದ್ದಿವಂತಿಕೆ ಹಾಗೂ ಬೌದ್ದಿಕ ಸಾಮಥ್ರ್ಯದ ಮೇಲೆ ಅವಲಂಬಿತವಾದ ಚದುರಂಗ (ಚೆಸ್) ಆಟ ಇಂದಿನ ದಿನಮಾನಗಳಲ್ಲಿ ಅತ್ಯಗತ್ಯ ಎನಿಸುತ್ತದೆ. ಒಬ್ಬ ಉತ್ತಮ ಚೆಸ್ ಆಟಗಾರ ಜೀವನದಲ್ಲಿ ಯಾವತ್ತೂ ಸೋಲು ಕಾಣುವುದೇ ಇಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮಿಜಿ ಹೇಳಿದರು.
ಅವರು ಇಂದು ಬೆಳಿಗ್ಗೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆರಂಭಗೊಂಡ 14ರಿಂದ 17 ವರುಷದೊಳಗಿನ ಶಾಲಾ ಬಾಲಕ ಬಾಲಕಿಯರ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡುತ್ತಾ, ಲೆಕ್ಕಾಚಾರ ಇಟ್ಟುಕೊಂಡೇ ಆಡುವ ಚೆಸ್‍ನಲ್ಲಿ ಮೂರರಿಂದ ನಾಲ್ಕು ನಡೆಗಳ ಬಗ್ಗೆ ಚಿಂತಿಸುವ ಚಾಣುಕ್ಯತೆ ಅಗತ್ಯವಿದೆ. ಇಂತಹ ಆಟ ಬುದ್ದಿವಂತಿಕೆಯ ಪ್ರೇರಕ ಶಕ್ತಿಯಾಗಿರುತ್ತದೆ ಎಂದು ತಿಳಿಸಿದರು.
ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ಚೆಸ್ ಭಾರತದಲ್ಲೇ ಹುಟ್ಟಿದೆ ಎನ್ನುವ ಬಹುದೊಡ್ಡ ಸಾಕ್ಷಿಗಳಿವೆ. ಈ ಚೆಸ್ ಗ್ರೀಸ್ ಈಜಿಪ್ಟ್ ದೇಶಗಳಲ್ಲಿ ಹುಟ್ಟತ್ತು ಎಂಬ ಕೆಲ ವಿಶ್ಲೇಷಕರ ವಾದಕ್ಕೆ ಅಷ್ಟು ದೊಡ್ಡ ಮಾನ್ಯತೆ ದೊರೆತಿಲ್ಲ. ಈ ಆಟ ಭಾರತದ ಮೂಲಕ ಬೆಳೆದು ವಿಶ್ವದಾದ್ಯಂತ ವಿಸ್ತರಿಸಿತು ಎಂದು ಹೇಳಬಹುದು ಎಂದರು.
ಹಿಂದಿನ ರಾಜಮಹಾರಾಜರ ಕಾಲದಲ್ಲಿ ಸೈನಿಕ, ಕುದುರೆ, ಒಂಟೆ, ಆನೆ ಮಂತ್ರಿ ಹೇಗೆ ರಾಜನನ್ನು ಹಾಗೂ ರಾಜ್ಯವನ್ನು ಕಾಪಾಡಲು ಬಳಸುತ್ತಿದ್ದರೊ ಅದೇ ಮಾದರಿಯ ರೂಪದಲ್ಲಿನ ಈ ಆಟ ನಮ್ಮಲ್ಲಿನ ಚಾಕಚಕ್ಯತೆಯನ್ನು ಹೊರಬಿಂಬಿಸುತ್ತದೆ ಎಂದು ಹೇಳಿದರು.
ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ವಿಜೇತರಾಗುವ ಮೂಲಕ ರಾಷ್ಟ್ರಕ್ಕೆ ಕೀರ್ತಿ ತರುವಂತಹ ಕ್ರೀಡಾಪಟುಗಳಾಗಿ ಎಂದು ಶುಭ ಹಾರೈಸಿದ ಶ್ರೀಗಳು ಜ್ಞಾನ ದಾಸೋಹದ ಮೂಲಕ ಸಾವಿರಾರು ಮಕ್ಕಳಿಗೆ ನಿರಂತರವಾಗಿ ವಿದ್ಯೆ, ಕ್ರೀಡೆ ನೀಡುತ್ತಿರುವ ಆದಿಚುಂಚನಗಿರಿ ಮಹಾಸಂಸ್ಥಾನವು ಇಲ್ಲಿ ವಿಜೇತರಾದ ಮಕ್ಕಳ ಮುಂದಿನ ಕ್ರೀಡಾ ಬೆಳವಣಿಗೆಗೆ ಮುಕ್ತ ನೆರವು ನೀಡುತ್ತದೆ ಎಂದು ಹೇಳಿದರು.
ಶಿವಮೊಗ್ಗ ಚೆಸ್‍ನಲ್ಲಿ ಸಾಕಷ್ಟು ಹಿರಿಮೆಯನ್ನು ಹೊಂದಿದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಸಚಿವ ಈಶ್ವರಪ್ಪ ಸೇರಿದಂತೆ ಹಲವು ಜನಪ್ರತಿನಿಧಿಗಳು ಈ ಆಟವನ್ನು ಆಡಿದ್ದಾರೆ. ಇಲ್ಲಿನ ಅಪಾರ ಮಕ್ಕಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಮಾತನಾಡುತ್ತಾ, ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಕಲಿಯುತ್ತಿದ್ದು, ಅದರಲ್ಲಿ ಆಯ್ಕೆಯಾಗಿ ಬಂದ ನೀವುಗಳು ನಿಜಕ್ಕೂ ವಿಶೇಷ ಬುದ್ದಿವಂತರು. ಚೆಸ್ ಎಂಬ ಸೂಕ್ಷ್ಮ ಹಾಗೂ ಬುದ್ದಿವಂತಿಕೆಯ ಆಟದಲ್ಲಿ ನಿಮಗೆಲ್ಲ ಶುಭವಾಗಲೀ ಎಂದು ಮಕ್ಕಳಿಗೆ ಶುಭ ಕೋರಿದರು.
ವಿದ್ಯೆಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಆಟದ ಪರಿಕಲ್ಪನೆ ಕುಂಠಿತಗೊಳ್ಳುತ್ತಿರುವುದು ದುರಂತದ ಸಂಗತಿ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕ್ರೀಡೆಗೂ ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ.ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಪ್ಪ, ಕಾರ್ಯದರ್ಶಿ ನಿರಂಜನಮೂರ್ತಿ, ಗೌರವಾಧ್ಯಕ್ಷ ಹಾಲಪ್ಪ, ಪ್ರಮುಖರಾದ ಅನಂತಕೃಷ್ಣಮೂರ್ತಿ, ಗೋವಿಂದರಾಜು, ರಮೇಶ್, ಗಿರಿಜಮ್ಮ, ನಂದಾರಾವ್, ಹಾಗೂ ಇತರರಿದ್ದರು.
ಸಂತಾಪ: ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ದೈಹಿಕ ಶಿಕ್ಷಕ ಟಿ.ಮಹೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.