ಶಿವಮೊಗ್ಗ,ಫೆ.06: ರೈತರಿಂದ ಖರೀದಿ ಮಾಡುತ್ತಿದ್ದ ಹಾಲಿನ ದರವನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಇಂದು ಬಿಜೆಪಿ ರೈತ ಮೋರ್ಚಾ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಗೋವುಗಳ ಸಮೇತ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ರೈತರಿಗೆ ನೀಡಬೇಕಾಗಿದ್ದ ಹಾಲಿನ ಪ್ರೋತ್ಸಾಹ ಧನ 716 ಕೋಟಿ ರೂ.ಗಳನ್ನು ಇನ್ನೂ ನೀಡಿಲ್ಲ. ಇದರಿಂದ ಬೇಸತ್ತ ರೈತರು ಹಾಲನ್ನು ಕೊಡುವುದನ್ನೇ ನಿಲ್ಲಿಸಿದ್ದಾರೆ. ಏಕ ಕಾಲದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಮತ್ತು ಗೋವುಗಳಿಗೂ ದ್ರೋಹ ಮಾಡುತ್ತಿದ್ದಾರೆ. ಇವರೆಗೆ ಗೋವಿನ ಶಾಪ ತಟ್ಟುತ್ತದೆ. ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದರು.
ರೈತರ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಕಾಂಗ್ರೆಸ್ ಶಾಸಕರು ದೆಹಲಿಗೆ ಹೋಗುತ್ತಿದ್ದಾರೆ. ಇದಕ್ಕಾಗಿ ಜಾಹಿರಾತು ನೀಡುತ್ತಿದ್ದಾರೆ. ಜಾಹಿರಾತಿನಲ್ಲಿ ಗಾಂಧೀಜಿಯವರ ಪೋಟೋ ಹಾಕಿದ್ದಾರೆ. ಗಾಂಧೀಜಿಯವರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜೈಲಿಗೆ ಹೋದವರೆಲ್ಲ ಹೀಗೆ ಗಾಂಧೀಜಿಯವರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ದುರಾದೃಷ್ಟಕರ ವ್ಯಂಗ್ಯವಾಡಿದರು.
ಶಾಸಕ ಹೆಚ್.ಎನ್. ಚೆನ್ನಬಸಪ್ಪ ಮಾತನಾಡಿ, ಇದು ರೈತ ವಿರೋಧಿ ಸರ್ಕಾರ. ಬಿಜೆಪಿ ಸರ್ಕಾರ ರೈತರಿಗೆ ನೀಡಿದ್ದ ಯೋಜನೆಗಳನ್ನೆಲ್ಲ ಕಾಂಗ್ರೆಸ್ ಸರ್ಕಾರ ಕಸಿದುಕೊಂಡಿದೆ. ಹಾಲಿನ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೂ, ರೈತರಿಗೂ ಏಕಕಾಲದಲ್ಲಿ ವಂಚನೆ ಮಾಡುತ್ತಿದೆ. ಮುಸ್ಲಿಂರಿಗೆ 10 ಸಾವಿರ ಕೋಟಿ ಕೊಡಲು ಹಣ ಇರುತ್ತದೆ. ರೈತರಿಗೆ ಕೊಡಲು ಇರುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಇವರಿಗೆ ಆಲ್ಕೋಹಾಲು ಪವಿತ್ರ, ಹಾಲಲ್ಲ.ಮುಂದೊಂದು ದಿನ ಗೋವಿನ ಮೂತ್ರಕ್ಕೂ ಬೆಲೆ ಕಟ್ಟುತ್ತಾರೆ ಎಂದರು.
ಈ ಹಿಂದೆ ರೈತರಿಗೆ 42 ರೂ.ಗಳನ್ನು ನೀಡುತ್ತಿದ್ದರು. ಈಗ 33 ರೂ.ಗಳಿಗೆ ಇಳಿಸಲಾಗಿದೆ. ಇದಲ್ಲದೆ ಭತ್ತ, ಮೆಕ್ಕೆಜೋಳ, ಕಬ್ಬು ಇತ್ಯಾದಿ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರು. ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದ ಸರ್ಕಾರ ಈಗ 4 ಗಂಟೆ ಕೂಡ ವಿದ್ಯುತ್ ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ಸುಮಾರು 350ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ರೈತ ಮೋರ್ಚಾ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಎಸ್. ಸಿದ್ದಲಿಂಗಪ್ಪ, ಪ್ರಮುಖರಾದ ದತ್ತಾತ್ರಿ,ಟಿ.ಡಿ.ಮೇಘರಾಜ್, ಮೋಹನ್ ರೆಡ್ಡಿ, ಅಣ್ಣಪ್ಪ, ಜಗದೀಶ್, ಮುಂತಾದವರು ಪಾಲ್ಗೊಂಡಿದ್ದರು.