ಶಿವಮೊಗ್ಗ, ಡಿಸೆಂಬರ್-17 : ಜಿಲ್ಲೆಯಲ್ಲಿ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರ ಪುನರ್ವಸತಿ ಕಾರ್ಯವನ್ನು ಚುರುಕುಗೊಳಿಸಲಾಗಿದ್ದು, ಮನೆ ನಿರ್ಮಾಣದಲ್ಲಿ ಮೊದಲ ಹಂತ ಪೂರ್ಣಗೊಳಿಸಿದವರಿಗೆ ಎರಡನೇ ಹಂತದ ಅನುದಾನವನ್ನು ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಅತಿವೃಷ್ಟಿಯಲ್ಲಿ ಭಾಗಶಃ ಹಾಗೂ ಪೂರ್ಣ ಮನೆ ಹಾನಿ ಸಂಭವಿಸಿದ ಎ ಮತ್ತು ಬಿ ವರ್ಗದ ಜನರಿಗೆ ಮನೆ ನಿರ್ಮಾಣಕ್ಕಾಗಿ 5ಲಕ್ಷ ರೂ. ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ ಎ ವರ್ಗದ 408 ಸಂತ್ರಸ್ತರಿಗೆ 4.18ಕೋಟಿ ರೂ, ಬಿ ವರ್ಗದ 808 ಸಂತ್ರಸ್ತರಿಗೆ 8.23ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಅಲ್ಪ ಹಾನಿಯಾದ ಸಿ ವರ್ಗದ ಮನೆಗಳಿಗೆ 50ಸಾವಿರ ರೂ.ನೆರವು ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 3055 ಸಂತ್ರಸ್ತರಿಗೆ 1.53ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ ಪೂರ್ಣವಾಗಿ ಹಾಗೂ ಭಾಗಶಃ ಮನೆ ಕಳೆದುಕೊಂಡ 844 ಮಂದಿಗೆ, ಭದ್ರಾವತಿಯಲ್ಲಿ 131 ಮಂದಿಗೆ, ಹೊಸನಗರ ತಾಲೂಕಿನಲ್ಲಿ 69, ತೀರ್ಥಹಳ್ಳಿಯಲ್ಲಿ 50, ಸೊರಬದಲ್ಲಿ 54, ಶಿಕಾರಿಪುರದಲ್ಲಿ 5 ಹಾಗೂ ಸಾಗರದಲ್ಲಿ 50 ಮಂದಿಗೆ ಪ್ರಥಮ ಹಂತದಲ್ಲಿ ತಲಾ ಒಂದು ಲಕ್ಷ ರೂ. ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಮನವಿ ಪತ್ರ ವಿತರಣೆ: ಪ್ರವಾಹ ಸಂತ್ರಸ್ತರ ಪುನರ್ವಸತಿ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂತ್ರಸ್ತರಿಗೆ ಮನವಿ ಮಾಡಿದ್ದಾರೆ. ನೆರೆ ಸಂತ್ರಸ್ತರ ಸ್ಥಿತಿಯನ್ನು ಮನಗಂಡು 5ಲಕ್ಷ ರೂ.ಗಳ ಪೈಕಿ ರೂ.1ಲಕ್ಷವನ್ನು ಈಗಾಗಲೇ ಮೊದಲ ಹಂತದಲ್ಲಿ ಮುಂಗಡವಾಗಿ ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಉಳಿದ ರೂ. 4ಲಕ್ಷ ಅನುದಾನವನ್ನು ನಿರ್ಮಾಣವಾಗುತ್ತಿರುವ ಮನೆಯ ಹಂತವಾರು ಜಿ.ಪಿ.ಎಸ್.ಛಾಯಾಚಿತ್ರಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು. ಆದ್ದರಿಂದ ಕೂಡಲೇ ಮನೆ ನಿರ್ಮಾಣ ಪ್ರಾರಂಭಿಸಿ ಬೇಗನೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಅವರು ಮನವಿ ಮಾಡಿದ್ದಾರೆ. ಈ ಮನವಿ ಪತ್ರವನ್ನು ಪ್ರತಿ ಸಂತ್ರಸ್ತರ ಮನೆಗೆ ವಿತರಿಸಿ ಧೈರ್ಯ ತುಂಬಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಸಂತ್ರಸ್ತರಿಗೆ ಸೂರು ಒದಗಿಸಲು ಎಲ್ಲಾ ನೆರವು ನೀಡಲಾಗುತ್ತಿದ್ದು, ಈಗಾಗಲೇ ಬಿಡುಗಡೆ ಮಾಡಿರುವ ಅನುದಾನ ಬಳಸಿಕೊಂಡು ಮನೆ ನಿರ್ಮಾಣ ಕಾರ್ಯವನ್ನು ಆರಂಭಿಸಿದರೆ ಎರಡನೇ ಹಂತದಲ್ಲಿ ಉಳಿದ ಅನುದಾನ ಬಿಡುಗಡೆ ಮಾಡಲಾಗುವುದು. ಸಂತ್ರಸ್ತರು ಸ್ಥಳೀಯಾಡಳಿತದ ನೆರವು ಪಡೆದುಕೊಂಡು ಮನೆ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಮುಗಿಸುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದ್ದಾರೆ.


error: Content is protected !!