ಜಿಲ್ಲೆಯಲ್ಲಿ ಪ್ರವಾಹ ಪೀಡಿತರಿಗೆ ನೆರವು ಒದಗಿಸಲು ಬಯಸುವ ದಾನಿಗಳಿಂದ ನೆರವು ಪಡೆಯಲು ಸ್ವೀಕೃತಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ಶಿವಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಮಹಾನಗರ ಪಾಲಿಕೆ ಕಚೇರಿ ಹಾಗೂ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಕಚೇರಿಯಲ್ಲಿ ಸ್ವೀಕೃತಿ ಕೇಂದ್ರ ಆರಂಭಿಸಲಾಗಿದ್ದು, ಈ ಕೆಳಕಂಡ ಪ್ಯಾಕ್ ಮಾಡಲಾದ ಪಡಿತರ ಸಾಮಾಗ್ರಿಗಳು ಹಾಗೂ ಅಗತ್ಯ ವಸ್ತುಗಳನ್ನು ಸ್ವೀಕರಿಸಲಾಗುವುದು. ಸಿದ್ಧಪಡಿಸಿದ ಆಹಾರವನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಸ್ಕಿಟ್ ಪ್ಯಾಕ್, ಬೇಳೆ ಕಾಳುಗಳು, ಮೆಣಸಿನ ಪುಡಿ, ಉಪ್ಪು, ಅಕ್ಕಿ, ಸಾಂಬಾರು ಪದಾರ್ಥಗಳು, ಸೋಪು, ಟೂತ್ ಪೇಸ್ಟ್ ಮತ್ತು ಬ್ರಷ್, ಅಡುಗೆ ಎಣ್ಣೆ, ಕೊಬ್ಬರಿ ಎಣ್ಣೆ, ಹಿಟ್ಟಿನ ಪ್ಯಾಕ್‍ಗಳು, ಹೊಸ ಸೀರೆಗಳು, ರವಿಕೆ, ನೈಟಿ, ಚೂಡಿದಾರ್, ಪ್ಯಾಂಟ್, ಶರ್ಟು, ಲುಂಗಿ, ಟವಲ್, ಒಳ ಉಡುಪುಗಳು, ಸ್ವೆಟರ್, ಬ್ಲಾಂಕೆಟ್‍ಗಳು, ಶೂ, ಚಪ್ಪಲ್‍ಗಳು, ಸೋಪ್ ಕಿಟ್‍ಗಳು, ಸ್ಯಾನಿಟರಿ ಪ್ಯಾಡ್‍ಗಳು, ಅಡುಗೆ ಪಾತ್ರೆ ಪಗಡೆ, ಒಲೆಗಳು, ರೈನ್ ಕೋಟ್, ಕೊಡೆ, ವಾಷಿಂಗ್ ಪೌಡರ್, ನೋಟ್ ಬುಕ್, ನವಜಾತ ಶಿಶು ಮತ್ತು ಬಾಣಂತಿಯರ ಅಗತ್ಯ ಸಾಮಾಗ್ರಿಗಳು, ಚಾಪೆ, ದಿಂಬು, ಸೊಳ್ಳೆ ಬತ್ತಿ, ಮೇಣದ ಬತ್ತಿ, ಬೆಂಕಿ ಪೆಟ್ಟಿಗೆ, ಟಾರ್ಪಾಲುಗಳು, ಜಾನುವಾರುಗಳಿಗೆ ಹಿಂಡಿ, ಹಗ್ಗ ಇತ್ಯಾದಿ.
ಸ್ವೀಕೃತಿ ಕೇಂದ್ರಗಳಲ್ಲಿ ಸಾಮಾಗ್ರಿಗಳನ್ನು ನೀಡಿ ಸ್ವೀಕೃತಿ ಪಡೆದುಕೊಳ್ಳಬಹುದಾಗಿದೆ. ಹಣ ನೀಡಲು ಅವಕಾಶ ಇರುವುದಿಲ್ಲ. ಯಾವುದೇ ಮಧ್ಯವರ್ತಿಗಳು ಜಿಲ್ಲಾಡಳಿತದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ದುರ್ಬಳಕೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಪ್ರವಾಹ ಪೀಡಿತರಿಗೆ ಹಣದ ರೂಪದಲ್ಲಿ ನೆರವು ನೀಡಲು ಬಯಸುವವರು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ನೇರವಾಗಿ ಸಲ್ಲಿಕೆ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.