ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಹಾಪ್‍ಕಾಮ್ಸ್ ತರಕಾರಿ ಮತ್ತು ಹಣ್ಣು ಮಾರಾಟ ಮಳಿಗೆ ಆರಂಭಿಸಲು ಸ್ಥಳ ಗುರುತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಅವರು ಶನಿವಾರ ಹಾಪ್‍ಕಾಮ್ಸ್ ಸಭಾಂಗಣದಲ್ಲಿ ಶಿವಮೊಗ್ಗ ನಗರದಲ್ಲಿ ತರಕಾರಿ ಮತ್ತು ಹಣ್ಣು ಹಂಪಲು ಸುಗಮ ಪೂರೈಕೆಗಾಗಿ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು. ಶಿವಮೊಗ್ಗ ನಗರದಲ್ಲಿ ಪ್ರಸ್ತುತ 15ಹಾಪ್‍ಕಾಮ್ಸ್ ಮಳಿಗೆಗಳಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಎಲ್ಲಾ 20 ವಾರ್ಡ್‍ಗಳಲ್ಲಿ ಸಹ ಹಾಪ್‍ಕಾಮ್ಸ್ ಮಳಿಗೆ ಆರಂಭಿಸಲು ಸೂಕ್ತ ಸ್ಥಳವನ್ನು ತಕ್ಷಣ ಗುರುತಿಸಬೇಕು. ನೆಲಬಾಡಿಗೆ ಆಧಾರದಲ್ಲಿ ಸ್ಥಳವನ್ನು ನೀಡಿದರೆ ಹಾಪ್‍ಕಾಮ್ಸ್ ತನ್ನ ವೆಚ್ಚದಲ್ಲಿ ಮಳಿಗೆ ನಿರ್ಮಿಸಲಿದೆ ಎಂದು ಸಚಿವರು ಹೇಳಿದರು. ಕರೋನಾ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಒಟ್ಟು 32 ವಾಹನಗಳನ್ನು ಬಳಸಿಕೊಂಡು ಎಲ್ಲಾ ಬಡಾವಣೆ, ವಾರ್ಡ್‍ಗಳಲ್ಲಿ ಹಣ್ಣು ಹಂಪಲು ಮತ್ತು ತರಕಾರಿ ಮಾರಾಟ ನಡೆಸಲಾಗುತ್ತಿದೆ. ಬೇಡಿಕೆ ಬಂದರೆ ಇನ್ನಷ್ಟು ವಾಹನಗಳಿಗೆ ಅನುಮತಿಯನ್ನು ನೀಡಲಾಗುವುದು. ಈ ವಾಹನಗಳಲ್ಲಿ ಉತ್ಪನ್ನಗಳ ದರವನ್ನು ನಿಗದಿಪಡಿಸಿದ ಪಟ್ಟಿಯನ್ನು ಅಂಟಿಸಲಾಗಿದ್ದು, ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಬೆಳೆಗಾರರಿಂದ ಉತ್ಪನ್ನಗಳನ್ನು ಖರೀದಿಸಲು ಹಾಪ್‍ಕಾಮ್ಸ್‍ಗೆ ತಕ್ಷಣ 50ಲಕ್ಷ ರೂ. ದುಡಿಯುವ ಬಂಡವಾಳವನ್ನು ಒದಗಿಸುವಂತೆ ಹಾಪ್‍ಕಾಮ್ಸ್ ಪ್ರತಿನಿಧಿಗಳ ಬೇಡಿಕೆಗೆ ತಕ್ಷಣ ಸ್ಪಂದಿಸಿ, ತೋಟಗಾರಿಕಾ ಇಲಾಖಾ ಸಚಿವರು ಹಾಗೂ ಕಾರ್ಯದರ್ಶಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು ಆದಷ್ಟು ಬೇಗನೆ ದುಡಿಯುವ ಬಂಡವಾಳ ಒದಗಿಸುವುದಾಗಿ ತಿಳಿಸಿದರು. ರೇಷನ್: ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಎರಡು ತಿಂಗಳ ಪಡಿತರವನ್ನು ಒಮ್ಮೆಲೇ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಜನರು ಸೇರುವುದನ್ನು ತಪ್ಪಿಸಲು ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಟೋಕನ್ ಪಡೆದವರು ನಿಗದಿಪಡಿಸಿದ ದಿನದಂದು ಬಂದು ಪಡಿತರ ಪಡೆಯಬಹುದಾಗಿದೆ. ಜನರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೀಶ್, ಮಹಾನಗರ ಪಾಲಿಕೆ ಸದಸ್ಯರಾದ ಚನ್ನಬಸಪ್ಪ, ಜ್ಞಾನೇಂದ್ರ, ಹಾಪ್‍ಕಾಮ್ಸ್ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!