ಶಿವಮೊಗ್ಗ : ಡಿಸೆಂಬರ್ 03 :: ಪ್ರಜಾಪ್ರಭುತ್ವದ ಯಶಸ್ಸಿಗೆ ದೇಶದ ಅರ್ಹ ಯುವ ಮತದಾರರೆಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ ಅವರು ಹೇಳಿದರು.
ಅವರು ಇಂದು ಜಿಲ್ಲಾ ಚುನಾವಣಾ ಶಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಯುವ ಮತದಾರರ ಜಾಗೃತಿ ಮತ್ತು ಜಿಲ್ಲಾ ಮಟ್ಟದ ಇ.ಎಲ್.ಸಿ. ಮತ್ತು ಸಿ.ಜೆ.ಸಿ. ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ದೇಶ ಮುನ್ನಡೆಸುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ನಾಗರೀಕರ ಹೊಣೆಯಾಗಿದೆ. ದೇಶ ಸದೃಢವಾಗಿ ನಿರ್ಮಿಸುವಲ್ಲಿ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ಭಾರತ ದೇಶದ ಉಳಿವು, ವಿಕಾಸ ಯುವ ಮತದಾರರ ಜವಾಬ್ದಾರಿಯಾಗಿದೆ ಎಂದರು.
ಶೀಘ್ರದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳಲಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವುದು ಚುನಾವಣಾ ಪ್ರಕ್ರಿಯೆಗೆ ಅಡಿಪಾಯ. ಜನವರಿ 01ಕ್ಕೆ 18ವರ್ಷ ಪೂರ್ಣಗೊಳ್ಳುವ ಎಲ್ಲಾ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನೋಂದಣಿಯಾಗಿರದಿದ್ದಲ್ಲಿ ತಮ್ಮ ಸಮೀಪದ ಮತಗಟ್ಟೆ ಅಧಿಕಾರಿಗಳಿಗೆ ನಿಗಧಿತ ನಮೂನೆಯ ಅರ್ಜಿ ನೀಡಿ ಅಥವಾ ಚುನಾವಣೆಗೆ ಸಂಬಂಧಿಸಿದ ಆ್ಯಪ್ ಮೂಲಕ ಆನ್‍ಲೈನ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ವ್ಯಕ್ತಿಯೂ ಮತದಾನ ಪ್ರಕ್ರಿಯೆಯಿಂದ ವಂಚಿತನಾಗದಂತೆ ನೋಡಿಕೊಳ್ಳಬೇಕೆಂದವರು ನುಡಿದರು.
ಕೆಲವು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಾಯಿತ ಸ್ತ್ರೀ-ಪುರುಷರ ಲಿಂಗಾನುಪಾತದಲ್ಲಿ ಏರಿಳಿತಗಳಿರುವುದನ್ನು ಗುರುತಿಸಲಾಗಿದ್ದು, ಕಾರಣ ತಿಳಿದು, ಸಮತೋಲನ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಅನೇಕ ಕಡೆಗಳಲ್ಲಿ ಯುವತಿಯರು, ನವವಿವಾಹಿತರು ಹೆಸರು ಸೇರ್ಪಡೆಗೊಳಿಸಲು ಹಿಂಜರಿಯುತ್ತಿದ್ದಾರೆ. ಎಲ್ಲಾ ಅರ್ಹ ಮತದಾರರು ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಬಂಧುಗಳು-ನೆರೆಹೊರೆಯವರಿಗೆ ತಿಳಿಸುವ ಮೂಲಕ ಪ್ರಜಾಪ್ರಭುತ್ವದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.
ಜಿಲ್ಲಾ ಚುನಾವಣಾ ಶಾಖೆ ಮತ್ತು ಸ್ವೀಪ್ ಸಮಿತಿಯು ಜನರಲ್ಲಿ ಅರಿವು ಮೂಡಿಸಲು ಹಾಗೂ ಚುನಾವಣೆ ಕುರಿತು ಮಾಹಿತಿ ಒದಗಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪ್ರಸ್ತುತ ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಿಸಲು, ಹೆಸರುಗಳನ್ನು ತಿದ್ದುಪಡಿ ಮಾಡಿಕೊಳ್ಳಲು, ವಿಳಾಸ ಬದಲಾಯಿಸಲು, ಮರಣ ಹೊಂದಿದವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲು ಅವಕಾಶ ಮಾಡಿಕೊಡಲಾಗಿದೆ. ಈ ಕುರಿತು ನಿಯೋಜಿತ ಅಧಿಕಾರಿ ಸಿಬ್ಬಂಧಿಗಳು ಮನೆಮನೆಗೆ ತೆರಳಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಈ ಸಮೀಕ್ಷೆ ಕಾರ್ಯಕ್ಕೆ ಆಗಮಿಸುವ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್ ಅವರು ಯುವ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಜಯಂತ್ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಚಂದ್ರಪ್ಪ ಗುಂಡಪಲ್ಲಿ, ಮಹೇಶ್, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!