ಶಿವಮೊಗ್ಗ, ಮಾರ್ಚ್ 25 :: ನಮ್ಮನ್ನಾಳುವ ಓರ್ವ ಸಮರ್ಥ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ನಿರ್ಲಕ್ಷ್ಯ ಬೇಡ. ಎಲ್ಲಾ ಅರ್ಹ ಮತದಾರರು ಚುನಾವಣೆ ದಿನದಂದು ಸ್ವಯಂ ಪ್ರೇರಿತರಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಶ್ರೀಮತಿ ಪ್ರಭಾವತಿ ಎಂ.ಹಿರೇಮಠ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಾನಗರಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ತುಂಗಾ ಜಿಲ್ಲಾ ಸ್ತ್ರೀಶಕ್ತಿ ಸಂಘಗಳ ಒಕ್ಕೂಟ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಎಲ್ಲಾ ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಮತದಾನ ಜಾಗೃತಿ ಹಾಗೂ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾರುಕಟ್ಟೆಯಲ್ಲಿ ನಮ್ಮ ಅಗತ್ಯಗಳಿಗಾಗಿ ಯಾವುದೋ ವಸ್ತುವನ್ನು ಖರೀದಿಸುವಾಗ ಅನೇಕ ರೀತಿಯಲ್ಲಿ ಪರಿಶೀಲಿಸಿ, ಪರೀಕ್ಷಿಸಿದ ನಂತರವೇ ಖರೀದಿಸುವ ನಾವು ಜನನಾಯಕನ ಆಯ್ಕೆ ಮಾಡುವಲ್ಲಿ ಉದಾಸೀನ ಏಕೆ ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವ ಹೊಂದಿರುವ ವಿಶ್ವದ ಯಶಸ್ವಿ ರಾಷ್ಟ್ರ ಭಾರತವಾಗಿದ್ದು, ಈ ದೇಶದ ಪ್ರತಿಯೊಬ್ಬರಿಗೂ ಸಂವಿಧಾನದತ್ತವಾಗಿ ಮತದಾನದ ಹಕ್ಕನ್ನು ನೀಡಿದೆ ಎಂದವರು ನುಡಿದರು.
ಅರ್ಹರಾದ ಎಲ್ಲರೂ ಮತದಾನ ಮಾಡಿ, ಇತರರಿಗೂ ಮತದಾನಕ್ಕೆ ಪ್ರೇರಣೆ ನೀಡಿ ಎಂದು ಕರೆ ನೀಡಿದ ಅವರು, ಪ್ರತಿ ಮಹಿಳೆಯೂ ತನ್ನ ಮಗುವಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡಬೇಕು. ಮಕ್ಕಳಿಗೆ ಸರಿಯಾದ ಮಾರ್ಗ ತೋರಿಸುವುದು ಹಾಗೂ ಜೀವನದ ಮೌಲ್ಯಗಳನ್ನು ತಿಳಿಸುವುದು ಕೂಡ ಮಾತೆಯರ ಜವಾಬ್ದಾರಿಯಾಗಿದೆ ಎಂದರು.
ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯ ಹಾಗೂ ಕಿರುಕುಳಗಳಿಗೆ ಸಕಾಲಿಕ ಪರಿಹಾರ ಕಂಡುಕೊಳ್ಳಲು, ಸಮಸ್ಯೆ-ಸವಾಲುಗಳ ಪರಿಹಾರ ಕಂಡುಕೊಳ್ಳಲು ಇರುವ ಮಹಿಳಾ ಕಾನೂನು-ಕಾಯ್ದೆಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕೆಂದ ಅವರು, ಅರಿತು ಅಥವಾ ಅರಿಯದೇ ಮಾಡುವ ಪ್ರಮಾದಗಳಿಗೆ ಕಾನೂನಿನಲ್ಲಿ ಕ್ಷಮೆ ಇಲ್ಲ ಎಂದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳ ನೊಂದ ಮಹಿಳೆಯರಿಗೆ ದೊರೆಯುವ ಸೌಲಭ್ಯಗಳು, ಕಾರ್ಯಕ್ರಮಗಳ ಬಗ್ಗೆ ತಿಳಿದಿರಬೇಕಾದ ಅಗತ್ಯವಿದೆ. ದೇಶದ ಜನಸಂಖ್ಯೆಗೆ ಸಂಬಂಧಿಸಿದಂತೆ ಸ್ತ್ರೀ ಮತ್ತು ಪುರುಷರ ಲಿಂಗಾನುಪಾತದಲ್ಲಿ ಭಾರೀ ಪ್ರಮಾಣದ ವೆತ್ಯಾಸವಿದೆ. ದೇಶದಲ್ಲಿ ಜನಿಸುವ ಪ್ರತಿ ವ್ಯಕ್ತಿಗೂ ಹುಟ್ಟಿನಿಂದಲೇ ಅನ್ವಯವಾಗಲಿದೆ. ಪೋಷಕರು ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರಯುತ ಶಿಕ್ಷಣ ನೀಡಿದಲ್ಲಿ ಅಪರಾಧಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ. ವಿಶೇಷವಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮಾತೆಯರ ಪಾತ್ರ ಮಹತ್ವದ್ಧಾಗಿದೆ. ಈವರೆಗೆ ರಾಜ್ಯದಲ್ಲಿ ದಾಖಲಾದ ಮಹಿಳಾ ದೌಜ್ಯನ್ಯಗಳಲ್ಲಿ ಬೆಂಗಳೂರು ನಂತರದಲ್ಲಿ ಶಿವಮೊಗ್ಗ ಸ್ಥಾನ ಪಡೆದಿರುವುದು ಬೇಸರದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ, ಜಿಲ್ಲಾ ಮತ್ತು ತಾಲೂಕು ಮಟ್ಟದ ಮಹಿಳಾ ಒಕ್ಕೂಟದ ಎಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.