ಪ್ರತಿಯೊಂದು ಕುಟುಂಬದ ಪರಿಮಿತ ವರಮಾನದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ ಪೌಷ್ಠಿಕಾಂಶವುಳ್ಳ ಆಹಾರ ಸಿದ್ಧಪಡಿಸುವುದು ಸುಲಭದ ಕೆಲಸವಲ್ಲ. ತುಪ್ಪ, ಹಾಲು, ಹಣ್ಣು, ಸಕ್ಕರೆ, ಬ್ರೆಡ್, ಬಿಸ್ಕತ್, ಹಾರ್ಲಿಕ್ಸ್ ಇತ್ಯಾದಿ ಪದಾರ್ಥಗಳು ಉತ್ತಮ ಪೌಷ್ಠಿಕ ಆಹಾರ ವಸ್ತುಗಳು ಎಂಬುದು ಜನರ ನಂಬಿಕೆ. ಈ ಆಹಾರ ವಸ್ತುಗಳ ಬೆಲೆ ಅಧಿಕವಾಗಿರುವುದರಿಂದ ಪೌಷ್ಠಿಕ ಆಹಾರ ಸೇವಿಸಬೇಕಾದರೆ ಅಧಿಕ ಹಣ ಬೇಕೆಂಬುದು ಮನೆ ಮಾತಾಗಿದೆ. ಅಗ್ಗದ ಬೆಲೆಯಲ್ಲಿ ದೊರಕುವ ಹಣ್ಣು, ತರಕಾರಿಗಳನ್ನು ತಾಜ ರೂಪದಲ್ಲಿ ಸಮತೋಲನ ರೀತಿಯಲ್ಲಿ ಬಳಸಿದರೆ ನಮ್ಮ ದೇಹಕ್ಕೆ ಬೇಕಾಗುವ ಎಲ್ಲ ಪೋಷಕಾಂಶಗಳು ಲಭ್ಯವಾಗುತ್ತವೆ. ಆದುದರಿಂದ ಪ್ರತಿಯೊಂದು ಕುಟುಂಬದವರು ತಮ್ಮ ತಮ್ಮ ಹಿತ್ತಲಲ್ಲಿ ಅಥವಾ ಸಣ್ಣ ಪ್ರಮಾಣದಲ್ಲಿ ಹೊಲಗಳಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಸಿ ಪ್ರತಿ ನಿತ್ಯದ ಆಹಾರದಲ್ಲಿ ತಾಜಾತನದ ಆರೋಗ್ಯವಂತ ತರಕಾರಿಗಳನ್ನು, ಹಣ್ಣುಗಳನ್ನು ಬಳಸಿದರೆ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ. ಇಂತಹ ತೋಟಗಳಿಗೆ ‘ಕೈತೋಟ’ ಎಂದು ಕರೆಯುತ್ತಾರೆ. ಹಣ್ಣು – ತರಕಾರಿಗಳನ್ನು ಕೈತೋಟಗಳಲ್ಲಿ ಬೆಳೆಯುವಂತಾದರೆ ಕಡಿಮೆ ಖರ್ಚಿನಲ್ಲಿ ಉತ್ತಮ ಆಹಾರ ವಸ್ತುಗಳ ಪೂರೈಕೆಯಾಗುವುದರಲ್ಲಿ ಸಂಶಯವಿಲ್ಲ.
ದೇಶದಲ್ಲಿ ತರಕಾರಿ ಮತ್ತು ಹಣ್ಣುಗಳ ಉತ್ಪಾದನೆ ಹೆಚ್ಚಿದರೆ ಪೌಷ್ಠಿಕ ಆಹಾರ ಪದಾರ್ಥಗಳ ಕೊರತೆ ನಿವಾರಣೆಯಾಗುವುದು ಖಂಡಿತ. ಐ.ಸಿ.ಎಂ.ಆರ್. (Iಅಒಖ) ನ ಪ್ರಕಾರ ಪ್ರತಿ ವ್ಯಕ್ತಿಯು ಪ್ರತಿನಿತ್ಯ 85 ಗ್ರಾಂ ಹಣ್ಣು ಮತ್ತು 300 ಗ್ರಾಂ ನಷ್ಟು ತರಕಾರಿಗಳನ್ನು ಸೇವಿಸಬೇಕಾಗುತ್ತದೆ. ಅದರೆ ಈಗ ಲಭ್ಯವಿರುವುದು ಬರೀ 40-50 ಗ್ರಾಂ ಹಣ್ಣು ಹಾಗೂ 120 ಗ್ರಾಂನಷ್ಟು ತರಕಾರಿ ಮಾತ್ರ. ಒಂದು ಚಿಕ್ಕ ಮಾದರಿ ಕುಟುಂಬಕ್ಕೆ (5-6 ಜನ ಸದಸ್ಯರು) ವರ್ಷವಿಡೀ ಬೇಕಾಗುವ ವಿವಿದ ತರಕಾರಿ – ಹಣ್ಣುಗಳನ್ನು ಬೆಳೆಸಲು ಕನಿಷ್ಟ 200-300 ಚದರ-ಮೀಟರ್ ಭೂಮಿ ಬೇಕಾಗುತ್ತದೆ, ಅಂದರೆ ಪ್ರತಿಯೋಬ್ಬರಿಗೆ 50 ಚದರ ಮೀಟರ್ ನಷ್ಟು. ಬಳಕೆದಾರರು, ನಾಗರಿಕರು ತಮ್ಮ ಮನೆಯ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಅಥವಾ ಕೈತೋಟಗಳನ್ನು ನಿರ್ಮಿಸಿ ಹೆಚ್ಚೆಚ್ಚು ಹಣ್ಣು ತರಕಾರಿಗಳನ್ನು ಬೆಳೆಸಿ ಉತ್ತಮವಾದ ರೋಗರಹಿತ ಪೌಷ್ಠಿಕ ಆಹಾರಗಳನ್ನು ಪಡೆಯಬಹದು. ಈ ರೀತಿ ಬೆಳೆಯುವುದರಿಂದ ನಮ್ಮ ಮುಂದೆ ಇರುವ ಪೌಷ್ಠಿಕ ‘ಆಹಾರ ಸಮಸ್ಯೆ’ ನಿವಾರಣೆ ಮಾಡಬಹುದು. ಪ್ರತಿ ಮನೆಯಲ್ಲೂ ಆಹಾರದ ಬದಲಾವಣೆಯಾಗಬೇಕು. ತಮ್ಮ ಮಕ್ಕಳು ಪೌಷ್ಠಿಕರವಾದ ಆಹಾರಗಳನ್ನು ಉಪಯೋಗಿಸಿ ಬುದ್ಧಿ ಮತ್ತು ಶಕ್ತಿಯನ್ನು ಬೆಳೆಸಿಕೊಳ್ಳುವ ರೂಢಿ ಬರಬೇಕು. ಪ್ರತಿಯೊಬ್ಬರು ತಮ್ಮ ಸಂಸಾರಕ್ಕೆ ಬೇಕಾಗುವ ಹಸಿರು ಸೊಪ್ಪು, ತರಕಾರಿ, ಹಣ್ಣು ಹಂಪಲನ್ನು ಬೆಳೆಯಲು ಅನುಕೂಲವಾಗುವಂತೆ ಬಾವಿಯ ಹತ್ತಿರವಾಗಲಿ, ಕೊಳ, ಕೆರೆ, ನದಿ, ಕಾಲುವೆಗಳ ಅಕ್ಕ ಪಕ್ಕಗಳಲ್ಲಾಗಲಿ ಮತ್ತು ಹೊಲ-ಗದ್ದೆಗಳಲ್ಲಾಗಲಿ ಅನುಕೂಲವಿರುವ ಕಡೆಗಳಲ್ಲಿ ಒಂದೊಂದು ಕೈತೋಟವನ್ನು ಮಾಡಬೇಕು ನಗರ, ಪಟ್ಟಣ ಪ್ರತಿ ಮನೆಯಲ್ಲೂ ಕೈತೋಟ ಇರಬೇಕು. ಭೂಮಿ ಇಲ್ಲದ ಕಡೆ ಕುಂಡಗಳಲ್ಲಿ ಬೆಳೆಯಬಹುದು. ಕೈತೋಟ ನಮ್ಮ ಹಳ್ಳಿಯ ಮತ್ತು ದೇಶದ ಪೌಷ್ಠಿಕ ಆಹಾರ ಸಮಸ್ಯೆಗೆ ಒಂದು ಪರ್ಯಾಯ ಮಾರ್ಗ. ನಗರ, ಪಟ್ಟಣಗಳಲ್ಲಿ ನೆಲೆಸಿರುವವರೆಲ್ಲ ಹಳ್ಳಿಯಿಂದ ಬಂದ ಜನರೇ ಆದುದರಿಂದ ಕೈತೋಟ ಇವರಿಗೆ ಹೊಸದೇನಲ್ಲ. ಮನಸ್ಸು ಹಾಗೂ ಶ್ರಮ ವಹಿಸಿ ಕೈತೋಟ ಮಾಡಿದರೆ ಇಡೀ ಕುಟುಂಬಕ್ಕೆ ಬೇಕಾಗುವ ತಾಜಾ ತರಕಾರಿಗಳನ್ನು ವರ್ಷವಿಡೀ ಪಡೆಯಬಹುದು.
ಪೌಷ್ಠಿಕ ತೋಟದಲ್ಲಿ ಸೊಪ್ಪು, ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಯುವ ಭೂಮಿಯು ಗೋಡು ಮತ್ತು ಮರಳು ಮಿಶ್ರಿತವಾಗಿರಬೇಕು. ಅತೀ ಮರಳು ಭೂಮಿ ಅಥವಾ ಅತೀ ಜೇಡಿ ಮಣ್ಣಿನ ಭೂಮಿ ಕೈತೋಟಕ್ಕೆ ಯೋಗ್ಯವಲ್ಲ. ಒಂದು ವೇಳೆ ಅಂತಹ ಭೂಮಿ ಉಳ್ಳವರು ಪ್ರತಿ ವರ್ಷ ಮಳೆಗಾಲ ಮುಗಿದ ನಂತರ ಚೆನ್ನಾಗಿ ಕಳೆತ ಎಲೆಗೊಬ್ಬರ ಅಥವಾ ತಿಪ್ಪೆಗೊಬ್ಬರವನ್ನು ಒಂದು ನೂರು ಚದರ ಅಡಿಗೆ ನೂರು ಕಿಲೋಗ್ರಾಂನಂತೆ ಸೇರಿಸಬೆಕು. ಅದರ ಜೊತೆಗೆ ಸವi ಭಾಗದ ಕೆಂಪು ಮಣ್ಣನ್ನು ಉಪಯೋಗಿಸಬೇಕು. ಹೀಗೆ ಮಾಡುವುದರಿಂದ ಭೂಮಿಯು ಮೃದುವಾಗುತ್ತದೆ ಮತ್ತು ತೇವವನ್ನು ಹಿಡಿದಿಡಲು ಸಹಾಯವಾಗುತ್ತದೆ. ತರಕಾರಿ ಸೊಪ್ಪನ್ನು ಬೆಳೆಯಲು ಯೋಗ್ಯವಾದ ಮಣ್ಣನ್ನು ಕೈಯಲ್ಲಿ ಅದುಮಿ ಮುದ್ದೆಮಾಡಿ ಕೈಬಿಟ್ಟಾಗ, ಮಣ್ಣು ಹೂವಿನ ಹಾಗೆ ಅರಳಬೇಕು.
ಕಾಂಪೋಸ್ಟ್ ಗೊಬ್ಬರದ ಜೊತೆಗೆ ಕನಿಷ್ಟಪಕ್ಷ ಪ್ರತಿ ನೂರು ಚದರ ಅಡಿಗೆ 1.5 ಕಿಲೋಗ್ರಾಂನಷ್ಟು ಸಾರಜನಕ, ರಂಜಕ, ಪೋಟ್ಯಾಶ ಮಿಶ್ರಣವನ್ನು ಉಪಯೋಗಿಸಿದರೆ ತರಕಾರಿ ಬೆಳೆ ಹುಲಸಾಗಿಯೂ ಮತ್ತು ಲಾಭದಾಯಕವಾಗಿಯೂ ಬೆಳೆಯುತ್ತದೆ. ತೋಟದಲ್ಲಿ ಬೆಳೆಯುವ ಕಳೆಯನ್ನು ಆಗಾಗ್ಗೆ ಅಗೆದು ಬುಡಸಮೇತ ತೆಗೆಯುತ್ತಿರಬೇಕು. ನೀರಾವರಿ ಸೌಲಭ್ಯ ಮಾಡಿಕೊಂಡರೆ ದೇಶಿಯ ಮತ್ತು ವಿದೇಶಿಯ ತರಕಾರಿಗಳನ್ನು ಹವಾಗುಣವನ್ನು ಅನುಸರಿಸಿ ಬೆಳೆಯಬಹುದು.
ವಿವಿಧ ತರಕಾರಿಗಳನ್ನು ಬೆಳೆಯುವ ಕಾಲ ಮತ್ತು ಅವುಗಳ ನಿರ್ವಹಣೆ:
- ತಂಪು ಹವಾಗುಣದಲ್ಲಿ ಅಂದರೆ ಸೆಪ್ಟಂಬರ್ನಿಂದ ಜನವರಿವರೆಗೂ ಎಲೆಕೋಸು, ಹೂಕೋಸು, ಗೆಡ್ಡೆಕೋಸು, ಕ್ಯಾರೆಟ್, ಆಲೂಗಡ್ಡೆ, ಬೀಟ್ರೋಟ್, ಮೂಲಂಗಿ ಮುಂತಾದವುಗಳನ್ನು ಬೆಳೆಯಬಹುದು.
- ಲೆಟ್ಯೂಸ್, ಟೊಮ್ಯಾಟೋ, ಮೆಣಸಿನಕಾಯಿ, ಬದನೆ, ಬೆಂಡೆ, ಗೆಣಸು, ಚವಳಿಕಾಯಿ, ಅವರೆಕಾಯಿ ಬೀನ್ಸ್ಗಳನ್ನು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಬಹುದು.
- ಸೊಪ್ಪು ತರಕಾರಿಗಳಾದ ರಾಜಗಿರಿ (ದಂಟು), ಚಕ್ಕೋತ, ಸ್ಪಿನಾಚ್, ಮೆಂತ್ಯೆ, ಸಬ್ಬಸಿಗೆ, ಕೊತ್ತಂಬರಿ, ಪಾಲಕ್, ಪುದಿನಾ, ಮುಂತಾದವುಗಳನ್ನು ಮಳೆಗಾಲ ಬಿಟ್ಟು ನೀರಾವರಿ ಇದಲ್ಲಿ ಉಳಿದೆಲ್ಲ ಕಾಲದಲ್ಲಿಯೂ ಬೆಳೆಯಬಹದು.
- ಬೇಸಿಗೆ ಕಾಲದಲ್ಲಿ ಅಂದರೆ ಫೆಬ್ರವರಿಯಿಂದ ಆಗಸ್ಟ್ ನವರೆಗೂ ಸವತೆಕಾಯಿ, ಹೀರೆಕಾಯಿ, ಹಾಗಲಕಾಯಿ, ಸೋರೆಕಾಯಿ, ಬೂದುಕುಂಬಳ, ಸಿಹಿಕುಂಬಳಗಳನ್ನು ತೋಟದ ಅಂಚಿನಲ್ಲಿ ನಿರ್ಮಿಸಲಾಗುವ ಬೇಲಿಗಳ ಮೇಲೆ ಹಬ್ಬಿಸಿ, ಇಲ್ಲವಾದಲ್ಲಿ ಒಂದು ಮೂಲೆಯಲ್ಲಿ ತಿಪ್ಪೆಗುಂಡಿಯ ಮೇಲೆ ಚಪ್ಪರವನ್ನು ನಿರ್ಮಿಸಿ ಹಬ್ಬಿಸಬಹುದು.
- ಹಣ್ಣಿನ ಬೆಳೆಗಳನ್ನು ಕೈತೋಟದ ಅಂಚಿನಲ್ಲಿ ಹಚ್ಚಬಹುದು. ದಿನ ನಿತ್ಯ ಬೇಕಾಗುವ- ಬಾಳೆ, ನೆಲ್ಲಿಕಾಯಿ, ನಿಂಬೆ, ಹಲಸು, ಬೆಣ್ಣೆಹಣ್ಣು, ಪೇರಲ ಇತ್ಯಾದಿಗಳನ್ನು ನಿಗಧಿತ ಅಂತರದಲ್ಲಿ ನಾಟಿ ಮಾಡಬೇಕು. ಈ ಎಲ್ಲಾ ಬೆಳೆಗಳಿಗೆ ಶಿಫಾರಸ್ಸು ಮಾಡಿರುವ ಬೇಸಾಯಕ್ರಮಗಳನ್ನು ಪಾಲಿಸಿಬೇಕು.
• ಬೀಜಗಳನ್ನು ಬಿತ್ತಿ ಬೆಳೆಯುವಂತಹವು: ಮೂಲಂಗಿ, ಈರುಳ್ಳಿ, ಬೀಟ್ರೂಟ್, ಕ್ಯಾರೆಟ್, ಹುರಳಿ, ಹೀರೆ, ಹಾಗಲ, ಪಡುವಲ, ಕುಂಬಳ, ಸೌತೆ, ಲೆಟ್ಯೂಸ್, ಬೆಂಡೆ ಮುಂತಾದವುಗಳು.
• ಸಸಿಗಳನ್ನು ತಯಾರಿಸಿ ಬೇರೆ ಕಡೆ ವರ್ಗಾಯಿಸಿ ಬೆಳೆಯುವಂತಹವು: ಎಲೆಕೋಸು, ಹೂಕೋಸು, ಗೆಡ್ಡೆಕೋಸು, ಟೊಮ್ಯಾಟೋ, ಬದನೆ, ಮೆಣಸಿನಕಾಯಿಗಳು ಇತ್ಯಾದಿ. ಈ ಕೆಲಜಾತಿ ಗಿಡಗಳ ಹಾಗೂ ಮಿಶ್ರಿತ ತಳಿಗಳ ಸಸಿಗಳಲ್ಲಿ ಇತ್ತೀಚಿನ ಆಧುನಿಕ ಸೌಲಭ್ಯವೇನೆಂದರೆ ಬೀಜ ಬಿತ್ತಿ ಸಸಿ ತಯಾರಿಸುವ ಅವಧಿಯನ್ನು ಉಳಿಸಲು ಸಿದ್ಧವಾಗಿ ದೊರೆಯುವ ಸಸಿಗಳನ್ನು ಬಳಸಿ ಕೈತೋಟದಲ್ಲಿ ನೇರವಾಗಿ ಬೆಳೆಸಿಕೊಳ್ಳಬಹುದು.
ಕೈತೋಟದ ವಿಶಿಷ್ಟತೆಗಳು:
ನೂರರಿಂದ ಇನ್ನೂರು ಚದರ ಮೀಟರ್ ವಿಸ್ತೀರ್ಣವುಳ್ಳ ಕಿರಿದಾದ ಬಯಲು ಪ್ರದೇಶ ಕೈತೋಟ ಮಾಡಲು ಪ್ರಶಸ್ತವಾಗಿದ್ದು ಮನೆಯ ಅಂದವನ್ನು ಹೆಚ್ಚಿಸುವುದು.
ಕೈತೋಟ ವಾಸದ ಮನೆಗೆ ಹೊಂದಿ ಕೊಂಡಿರುವುದರಿಂದ ತೋಟದ ಕೆಲಸವು ಶ್ರಮರಹಿತವಾಗಿರುವುದು.
ವರ್ಷವಿಡೀ ಉತ್ತಮ ಜಾತಿಯ ತಾಜಾಹಣ್ಣು ಮತ್ತು ತರಕಾರಿ ದೊರಕುವುದು.
ಅಡುಗೆ ಮನೆ ಮತ್ತು ಬಚ್ಚಲು ಮನೆಯಿಂದ ಹೊರಕ್ಕೆ ಹರಿಯುವ ನೀರನ್ನೇ ಬಳಸಿಕೊಂಡು ಹಣ್ಣು ಮತ್ತು ತರಕಾರಿ ಬೆಳೆಯಬಹುದು.
ಹಣ್ಣು, ತರಕಾರಿ ಕೊಳ್ಳಲು ಖರ್ಚುಮಾಡುವ ಹಣವನ್ನು ಉಳಿತಾಯ ಮಾಡಬಹುದು.
ಮನೆಯ ಆವರಣದಲ್ಲಿ ಸಂಗ್ರಹವಾಗುವ ಕಸ ಉತ್ತಮ ಗೊಬ್ಬರವಾಗಿ ಕೈತೋಟದಲ್ಲಿ ಉಪಯೋಗಕ್ಕೆ ಬರುವುದು.
ಪೌಷ್ಠಿಕ ಆಹಾರದ ಕೊರತೆ ನಿವಾರಣೆಯಾಗಿ ಮನೆಮಂದಿಯ ಆರೋಗ್ಯ ಸುಧಾರಿಸುವುದು.
ಮನೆಯ ಸುತ್ತ ಮುತ್ತಲಿನ ಪ್ರದೇಶ ಹಸಿರಾಗಿದ್ದು. ಕಣ್ಮನಗಳಿಗೆ ಆನಂದದಾಯಕವಾಗಿರುವುದು.
ಮನೆಯ ಹೊರ ಆವರಣ ಸದಾಕಾಲ ಚೊಕ್ಕಟವಾಗಿದ್ದು ಹುಳು-ಹುಪ್ಪಟೆ ಸೇರಲು ಅವಕಾಶವಾಗದು.
ಬಿಡುವಿನ ವೇಳೆಯಲ್ಲಿ ಕೈತೋಟದಲ್ಲಿ ಕೆಲಸಮಾಡುವುದರಿಂದ ಮನಸ್ಸಿನ ನೆಮ್ಮದಿಯುಂಟಾಗುವುದು, ಬೇಸರ ಕಳೆಯುವುದು, ಕಷ್ಟದ ಬೆಲೆ ತಿಳಿಯುವುದು.
ಹಣ್ಣು, ತರಕಾರಿ ಬೆಳೆಯುವ ವಿಧಾನದಲ್ಲಿ ಸಂಶೋಧನೆ ಮಾಡಲು ಸಾಕಷ್ಟು ಅವಕಾಶ ಲಭಿಸುವುದು.
ಹೊಸತಳಿ ನಿರ್ಮಾಣಕ್ಕೆ ಕೈತೋಟ ಪರೀಕ್ಷಾ ಕೇಂದ್ರವಾಗುವುದು.
ಮನೆಯಂಗಳದ ಕೈತೋಟವು ಪ್ರಾತ್ಯಕ್ಷಿಕೆಯ ಕೇಂದ್ರವಾಗಿ ನೆರಹೊರೆಯ ಜನರಿಗೆ ಉತ್ತಮ ಮಾರ್ಗದರ್ಶನ ದೊರಕುವುದು.
ಕಲಿಯುವ ಮಕ್ಕಳಿಗೆ ಪ್ರಕೃತಿ ಪಾಠದ ಮಾರ್ಗದರ್ಶನ ಸುಲಭವಾಗಿ ದೊರಕುವುದು.
ತೋಟಗಾರಿಕೆಯು ಉತ್ತಮ ಹವ್ಯಾಸವಾಗಿ ಬೆಳೆದು ಬರುವ ಕಾರಣ ದುಶ್ಚಟಗಳಿಗೆ ಬಲಿಯಾಗುವ ಅವಕಾಶಗಳಿಂದ ದೂರವಿರಲು ಸಾಧ್ಯವಾಗುವುದು.
ಮನೆಯ ಮಂದಿ ಕಲೆತು ಕೆಲಸುಮಾಡುವುದರಿಂದ ಸಹಕಾರ ಮನೋಭಾವ ಬೆಳೆದು ಬರುವುದು.
ಸ್ವಾವಲಂಭನೆಯ ದೃಷ್ಟಿ ಬೆಳೆದು ಬರುವುದು.
ಮನೆಯ ಅವಶ್ಯಕತೆ ಪೂರೈಸಿದ ನಂತರವೂ ಹೆಚ್ಚು ಫಸಲು ಕೈಗೆ ಬಂದರೆ ಅದನ್ನು ಯೋಗ್ಯ ಬೆಲೆಗೆ ಮಾರಾಟಮಾಡಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು.
ಡಾ. ಬಿ. ಹೇಮ್ಲಾ ನಾಯಕ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು (ತೋಟಗಾರಿಕೆ), 94488 62225
ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ