ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಘಟಕ ಕೇಂದ್ರ ಸಂವಹನ ಇಲಾಖೆ, ಶಿವಮೊಗ್ಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ –ಭಾವನಾ ಲೀಜನ್ ಸಹಯೋಗದಲ್ಲಿ ಶಾಂತಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ ಅಭಿಯಾನ ಕುರಿತ ಜಾಗೃತಿ ಕಾರ್ಯಕ್ರಮ ಏರ್ಪಡಿಲಾಯಿತು.
ಕಾರ್ಪೋರೇಟರ್ ಸುರೇಖಾ ಮುರಲೀಧರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪೋಷಣ ಅಭಿಯಾನ ಅಪೌಷ್ಟಿಕತೆ ಸಮಸ್ಯೆ ವಿರುದ್ಧ ಹೋರಾಡಿ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಗುರಿ ಹೊಂದಿದೆ ಎಂದರು.
ಕ್ಷೇತ್ರ ಪ್ರಚಾರ ಅಧಿಕಾರಿ ಅಕ್ಷತಾ ಸಿ.ಹೆಚ್ ಮಾತನಾಡಿ, ಅಂಗನವಾಡಿ ಕೇಂದ್ರಗಳು ಗ್ರಾಮೀಣ ಪ್ರದೇಶಗಳಲ್ಲಿ ಪೋಷಣಾ ಅಭಿಯಾನದ ಯಶಸ್ವೀ ಅನುಷ್ಠಾನದಲ್ಲಿ ಪ್ರಧಾನ ಪಾತ್ರ ವಹಿಸಿವೆ ಎಂದರು.
ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ –ಭಾವನಾ ಲೀಜನ್ ಅಧ್ಯಕ್ಷೆ ಪುಷ್ಪಾ ಶೆಟ್ಟಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು. ಕ್ಷೇತ್ರ ಪ್ರಚಾರ ಸಹಾಯಕ ಲಕ್ಷ್ಮೀಕಾಂತ.ಸಿ.ವಿ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಕಿರು ಧಾನ್ಯಗಳಿಂದ ಸಿದ್ಧಪಡಿಸಿದ ಆಹಾರ ಸೇರಿದಂತೆ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಸ್ಪರ್ಧೆ ಏರ್ಪಡಿಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.