ಶಿವಮೊಗ್ಗ, ಫೆ.5 : ಅಲ್ಪಸಂಖ್ಯಾತ ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳ ಸಾಮಾಜಿಕ, ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಮೂಲಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮ (ಪಿಎಂಜೆವಿಕೆ) ಯೋಜನೆಯಡಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್ ಅವರು ಹೇಳಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನಮಂತ್ರಿಗಳ 15ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಈ ಯೋಜನೆಯಡಿ ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳಲ್ಲಿ ಶೈಕ್ಷಣಿಕ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿ ಸುಧಾರಣೆಗೆ ಮೂಲಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ ವಸತಿಯುತ ಕಾಲೇಜು, ಐಟಿಐ ಕಾಲೇಜು, ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳು, ಉದ್ಯೋಗನಿರತ ಮಹಿಳೆಯರ ವಸತಿ ನಿಲಯಗಳು, ಸಮುದಾಯ ಭವನಗಳು, ಮಾರುಕಟ್ಟೆ ಸ್ಥಳಗಳು ಸೇರಿದಂತೆ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿ ನೆರವು ಒದಗಿಸಲಾಗುವುದು. ಈ ಕಾರ್ಯಕ್ರಮ ಅನುಷ್ಟಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಕ್ರಮವಾಗಿ 60 ಮತ್ತು 40 ಅನುಪಾತದಲ್ಲಿ ಅನುದಾನ ಒದಗಿಸಲಿದೆ ಎಂದು ಹೇಳಿದರು.
ಈ ಯೋಜನೆಯಡಿ 10ಕೋಟಿ ರೂ. ಅನುದಾನ ಒದಗಿಸಲಾಗುವುದು. ಈ ಯೋಜನೆಯಡಿ ಆರಂಭವಾಗುವ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗುವುದು. ಅಲ್ಪಸಂಖ್ಯಾತರ ಬಾಹುಳ್ಯದ ಪ್ರದೇಶಗಳಲ್ಲಿ ಈ ಶಾಲೆ, ವಸತಿ ನಿಲಯಗಳನ್ನು ನಿರ್ಮಿಸಿದರೂ, ಎಲ್ಲಾ ವರ್ಗದವರೂ ಪ್ರವೇಶ ಪಡೆಯಬಹುದಾಗಿದೆ. ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಯೋಜನೆಯನ್ನು ರೂಪಿಸಿ ಪಾಲಿಕೆ ಮತ್ತು ಜಿಲ್ಲಾಧಿಕಾರಿ ಅವರ ಅನುಮೋದನೆಯೊಂದಿಗೆ ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿಯವರ ಅನುಮೋದನೆಯೊಂದಿಗೆ ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಕುರಿತು ಅಲ್ಪಸಂಖ್ಯಾತರ ಸಮುದಾಯದವರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ. ಸಿವಿಲ್ ಸರ್ವಿಸ್ ಮುಖ್ಯ ಪರೀಕ್ಷೆಗೆ ಸಿದ್ಧರಾಗುವವರಿಗೆ ಒಂದು ಲಕ್ಷ ರೂ, ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವವರಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಪ್ರತಿ ವರ್ಷ 1ಕೋಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸಲಾಗುತ್ತಿದೆ. ಸ್ವಯಂ ಉದ್ಯೋಗ ಆರಂಭಿಸಲು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಮದ್ರಸಾಗಳನ್ನು ವಕ್ಫ್ ಅಡಿ ನೋಂದಣಿ ಮಾಡಿಸಿಕೊಂಡು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಮನವೊಲಿಸಬೇಕು. ಮದ್ರಸಾಗಳಲ್ಲಿ ಸಾಮಾನ್ಯ ಶಿಕ್ಷಣ ಒದಗಿಸಲು ಮತ್ತು ಆಧುನೀಕರಣಕ್ಕೆ ಅನುದಾನ ಒದಗಿಸಲಾಗುವುದು. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ಸಾಲ ಒದಗಿಸಲು ಬ್ಯಾಂಕುಗಳು ಷರತ್ತುಗಳನ್ನು ವಿಧಿಸುವಂತಿಲ್ಲ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪೊಲೀಸ್ ವರಿಷ್ಟಾಧಿಕಾರಿ ಶಾಂತಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಧರ್ಮಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!