ಶಿವಮೊಗ್ಗ : ಸೆಪ್ಟಂಬರ್ 24 : ವನ್ಯಜೀವಿಗಳ ಮಾರಣಹೋಮ, ಕಳ್ಳಬೇಟೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ವನ್ಯಸಂಪತ್ತು ನಾಶ, ಕಳ್ಳಸಾಗಾಣೆ, ಅಮೂಲ್ಯ ಔಷಧಿಸಸ್ಯಗಳ ನಾಶ ಮುಂತಾದ ಅಕ್ರಮಗಳಲ್ಲಿ ಭಾಗವಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಅದರ ಸಂರಕ್ಷಣೆಗಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಶೀಘ್ರದಲ್ಲಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದೆಂದು ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಗೋವಿಂದ ಜಟ್ಟಪ್ಪ ನಾಯ್ಕ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಅಕ್ರಮದಲ್ಲಿ ತೊಡಗಿರುವ ಹಾಗೂ ಪರಿಸರಕ್ಕೆ ಧಕ್ಕೆ ತರುವ ಅಕ್ರಮ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ, ಅದಕ್ಕೆ ಕುಮಕ್ಕು ನೀಡುತ್ತಿರುವ ವ್ಯಕ್ತಿಗಳು ಅಥವಾ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಶ್ಚಿಮಘಟ್ಟದಲ್ಲಿನ ಪರಿಸರ, ವನ್ಯಜೀವಿಗಳು, ಔಷಧಿ ಸಸ್ಯಗಳ ಸಂರಕ್ಷಣೆ ಕುರಿತು ಈಗಾಗಲೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಪರಿಣಿತರಿಂದ ವಿಷಯವನ್ನು ಸಂಗ್ರಹಿಸಿಕೊಳ್ಳಲಾಗುತ್ತಿದೆ ಎಂದ ಅವರು, ಕಳೆದೆರೆಡು ದಿನಗಳ ಹಿಂದೆ ಜಿಲ್ಲೆಯಲ್ಲಿ ಎರಡು ಆನೆಗಳು ವಿದ್ಯುತ್ ಅವಘಡಕ್ಕೆ ಸಿಲುಕಿ ಮೃತಪಟ್ಟಿರುವುದು ಗಮನಕ್ಕೆ ಬಂದಿದ್ದು, ಘಟನೆಗೆ ಕಾರಣದಾದವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ಆಭಯಾರಣ್ಯದಂಚಿನ ಪ್ರದೇಶಗಳಲ್ಲಿ ಗಣಿಗಾರಿಕೆ ನಿಷೇಧಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ನಿರ್ಬಂಧಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ರೆಸಾರ್ಟ್, ಹೋಟೆಲ್ಗಳು ತಲೆ ಎತ್ತುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದ ಅವರು, ಈ ಸಂಬಂಧ ಸಮಗ್ರ ಮಾಹಿತಿ ಸಂಗ್ರಹಿಸಿ ಕ್ರಮಕ್ಕೆ ಸೂಚಿಸಲಾಗುವುದು. ತುಂಗಾ ನದಿಗೆ ನಗರದ ಕಲುಶಿತ ನೀರು ಸೇರುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ನಿಯಂತ್ರಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಜಂಬಿಟ್ಟಿಗೆ ಕ್ವಾರಿ ನಡೆಸುತ್ತಿರುವವರ ವಿರುದ್ಧ ದೂರು ದಾಖಲಿಸುವಂತೆ ಹಾಗೂ ನೀಡಿರುವ ಪರವಾನಗಿಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ ಅವರು, ಅರಣ್ಯ ವೀಕ್ಷಕರು ಹಾಗೂ ಸಿಬ್ಬಂಧಿಗಳಿಗೆ ದ್ವಿಚಕ್ರವಾಹನ ಹಾಗೂ ಅಗತ್ಯ ಸಲಕರಣೆಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನಶಿಸಿ ಹೋಗುತ್ತಿರುವು ನಾಟಿ ವೈದ್ಯ ಪದ್ಧತಿಯನ್ನು ಮುಂದುವರೆಯುವಂತೆ ಮಾಡಲು ಉತ್ತರಕನ್ನಡ ಜಿಲ್ಲೆಯಲ್ಲಿ ಸ್ವರ್ಣವಲ್ಲಿಶ್ರೀಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿಯೂ ಅಂತಹ ಪಾರಂಪರಿಕ ವೈದ್ಯರನ್ನು ಗುರುತಿಸಿ, ಗೌರವಿಸಿ ಪ್ರೋತ್ಸಾಹ ನೀಡುವಂತೆ ಉದ್ದೇಶಿಸಲಾಗಿದೆ. ಇದರಿಂದಾಗಿ ಜನಪದ ವೈದ್ಯ ಪದ್ದತಿ ಮುಂದಿನ ಪೀಳಿಗೆಗೆ ಹಸ್ತಾಂತರಗೊಳ್ಳಲಿದೆ ಎಂದವರು ನುಡಿದರು.
- ಇಲ್ಲಿನ ಪ್ರಸಿದ್ಧವಾದ ಜನಪದ ವೈದ್ಯಪದ್ಧತಿಯನ್ನು ತಿಳಿದು ವಿದೇಶಿಯರು, ವಿಸ್ತøತ ಅಧ್ಯಯನ ನಡೆಸಿ, ಅವುಗಳಿಗೆ ಹೊಸ ರೂಪ ನೀಡಿ, ಅದರ ಮೇಲೆ ಪೇಟೆಂಟ್ ಹೊಂದುತ್ತಿದ್ದಾರೆ. ಇಲ್ಲಿನ ಅಮೂಲ್ಯ ಜ್ಞಾನ ಅನಾಯಾಸವಾಗಿ ವಿದೇಶಿಯರ ಕೈಸೇರುತ್ತಿದೆ. ಇದು ಕೊನೆಗೊಳ್ಳುವಂತಾಗಬೇಕು. ವನ್ಯ ಮೃಗದಾಳಿ, ಜೇನುಕಡಿತ, ಹಾವು ಕಡಿತ ಇವುಗಳನ್ನು ವಿಮೆ ವ್ಯಾಪ್ತಿಗೊಳಪಡಿಸಬೇಕು.
_ ಪ್ರವೀಣ್ಕುಮಾರ್. - ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವನ್ಯಜೀವಿಗಳಿಂದ ಜೀವಹಾನಿಯಾಗಿರುವ ಸುಮಾರು 74 ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ಥರಿಗೆ 27ಲಕ್ಷ ರೂ.ಗಳ ಪರಿಹಾರ ಧನ ನೀಡಲಾಗಿದೆ.
- ಶಿವಶಂಕರ್, ಡಿ.ಎಫ್.ಓ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ, ಡಿ.ಎಫ್.ಒ. ಶಿವಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.