ಶಿವಮೊಗ್ಗ, ಜನವರಿ 19 : ತನ್ನ ಹೆಂಡತಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ತವರು ಮನೆಯಿಂದ ಹಣ, ಒಡವೆ ತರಲು ಹಿಂಸೆ ನೀಡುತ್ತಿದ್ದು, 2015ರ ಫೆಬ್ರವರಿಯಲ್ಲಿ ಗಂಡ, ಅತ್ತೆ-ಮಾವ, ನಾದಿನಿ ಸೇರಿ ಆಕೆಯ ಸೀರೆಯಿಂದ ಕುತ್ತಿಗೆ ನೇಣು ಬಿಗಿದು ಕೊಲೆ ಮಾಡಿದ್ದ ಶಿವಮೊಗ್ಗ ನಗರದ ಗಾಂಧಿಬಜಾರ್ ಉಪ್ಪಾರಕೇರಿ ವಾಸಿ ಉಮೇಶ್, ಅತ್ತೆ ಸುಮಿತ್ರಾಬಾಯಿ, ಮಾವ ನಾರಾಯಣ ಶೇಟ್ ಹಾಗೂ ನಾದಿನಿ ರೂಪ ಎಂಬ ಆರೋಪಿಗಳಿಗೆ ತಪ್ಪಿತಸ್ಥರೆಂದು ತೀರ್ಮಾನಿಸಿ ಗಂಡನಿಗೆ ಕಲಂ 498 (ಎ), 304 (ಬಿ) ಭಾ.ದಂ.ಸಂಹಿತೆ ಹಾಗೂ ಕಲಂ:3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆ ಆಪರಾಧಗಳಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 17,000/-ರೂ.ಗಳ ದಂಡ ಹಾಗೂ ಅತ್ತೆ, ಮಾವ, ನಾದಿನಿ ಇವರುಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 12,000/- ರೂಗಳ ದಂಡವಿಧಿಸಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪ್ರಭಾವತಿ ಎಂ. ಹಿರೇಮಠ್ ಅವರು ಜ. 17ರಂದು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ಆರೋಪಿಯು 7 ವರ್ಷಗಳ ಹಿಂದೆ ಭಟ್ಕಳದ ಸದಾನಂದ ರಾಮಯ್ಯ ರಾಯ್ಕರ್ ಎಂಬುವವರ ಮಗಳು ಆಶಾಳೊಂದಿಗೆ ವಿವಾಹವಾಗಿದ್ದು, ಆಗಿನಿಂದಲೂ ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡು ದಿನಾ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದು, ತವರು ಮನೆಯಿಂದ ಹಣ, ಒಡವೆ ತರಲು ಪೀಡಿಸುತ್ತಿದ್ದು, 2015ರ ಫೆಬ್ರವರಿಯಲ್ಲಿ ಮನೆಮಂದಿ ಜೋತೆ ಸೇರಿ ಮಗು ಮಲಗಿಸುವ ಜೋಲಿಯ ಸೀರೆಯಿಂದಲೇ ಆಶಾಳ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಿದ್ದರು. ಈ ಬಗ್ಗೆ ಶಿವಮೊಗ್ಗ ಮಹಿಳಾ ಪೊಲೀಸ್ರು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖಾಧಿಕಾರಿ ಎಂ.ಎಸ್.ದೀಪಕ್ ತನಿಖೆ ಮಾಡಿ ಆರೋಪವು ವಿಚಾರಣೆಯ ವೇಳೆ ಸಾಕ್ಷಿ ಸಮೇತ ದೃಢಪಟ್ಟಿದ್ದರಿಂದ ಆರೋಪಿಗಳಿಗೆ ಕಲಂ 498 (ಎ), 304(ಬಿ), 114 ಸಹಿತಿ 34 ಹಾಗೂ ಕಲಂ:3ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಯಳಗೇರಿ ಅವರು ವಿಚಾರಣೆ ಮಾಡಿ ವಾದ ಮಂಡಿಸಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,