ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಕುಂಭದ್ರೋಣ ಮಳೆಯಿಂದ ಹಾನಿಗೊಳಗಾಗಿರುವ ಸರ್ಕಾರಿ ಶಾಲೆಗಳ ದುರಸ್ತಿಗೊಳಿಸಲು ಹಾಗೂ ಅನುಪಯುಕ್ತ ಮತ್ತು ಉಪಯೋಗಿಸಲು ಬಾರದಾಗಿರುವ ಶಾಲಾ ಕೊಠಡಿಗಳಿಗೆ ಪರ್ಯಾಯವಾಗಿ ನೂತನ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಾಗೂ ಮಳೆಯಿಂದ ಸಂಪೂರ್ಣ ಹಾನಿಗೊಳಗಾಗಿರುವ ಶಾಲೆಗಳ ವಸ್ತುಸ್ಥಿತಿ ಕುರಿತು ಮಾಹಿತಿ ಪಡೆಯಲು ಏರ್ಪಡಿಸಲಾಗಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಾಗೂ ಸಂಪೂರ್ಣ ಮಳೆಯಿಂದ ಹಾನಿಗೊಳಗಾಗಿರುವ ಶಾಲೆ ಕಟ್ಟಡಗಳ ಸ್ಥಿತಿಗತಿಗಳನ್ನು ಕರಾರುವಾಕ್ಕಾಗಿ ತಿಳಿಯದೇ ಮಕ್ಕಳನ್ನು ಕೊಠಡಿಯೊಳಗೆ ಕೂರಿಸದಂತೆ ಜಿಲ್ಲೆಯ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ. ಅಂತೆಯೇ ಅಂತಹ ಶಾಲೆಗಳಿಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಹಲವು ತಂಡಗಳನ್ನು ರಚಿಸಲಾಗಿದ್ದು, ಅವರುಗಳು ನೀಡುವ ಪ್ರತ್ಯಕ್ಷ ಹಾಗೂ ತಾಂತ್ರಿಕ ವರದಿಯನ್ನಾಧರಿಸಿ, ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಶಿಥಿಲಾವಸ್ಥೆಯಲ್ಲಿರುವ ಕೊಠಡಿ ಇರುವ ಶಾಲೆಗಳ ಮುಖ್ಯೋಪಾದ್ಯಾಯರು ಮುಂದಿನ ಸೂಚನೆ ನೀಡುವವರೆಗೆ ದೇವಸ್ಥಾನ, ಸಮುದಾಯ ಭವನದಂತಹ ಪರ್ಯಾಯ ಕಟ್ಟಡಗಳನ್ನು ಗುರುತಿಸಿಕೊಂಡು ಶಾಲೆಗಳನ್ನು ನಡೆಸುವುದು. ಅಗತ್ಯವಿದ್ದಲ್ಲಿ ಬಾಡಿಗೆ ಕಟ್ಟಡವನ್ನು ಪಡೆದು ಶಾಲೆ ನಡೆಸಲು ಸೂಚಿಸಲಾಗಿದೆ. ಶಾಲೆಗಳಿಗೆ ಮಕ್ಕಳು ಬರಲು ರಸ್ತೆ ಸಂಪರ್ಕ ಕಡಿತಗೊಂಡಿದ್ದಲ್ಲಿ, ಬಸ್ ಸೌಲಭ್ಯವನ್ನು ಕಲ್ಪಿಸಿಕೊಳ್ಳಲು ಕೂಡ ಸೂಚಿಸಲಾಗಿದೆ ಎಂದವರು ನುಡಿದರು.
ಶಾಲಾ ಮುಖ್ಯೋಪಾಧ್ಯಾಯರು ಇಂಜಿನಿಯರರ ವರದಿ ಪಡೆದು ಕ್ರಿಯಾಯೋಜನೆ ತಯಾರಿಸಿ, ಅನುಮೋದನೆ ಹಾಗೂ ಮಂಜೂರಾತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ನಾಳೆಯಿಂದ ಶಾಲೆಗಳ ಪುನರಾರಂಭಗೊಳಿಸಲು ಸೂಚಿಸಲಾಗಿದೆ. ಆದರೆ ಮಳೆಯಿಂದ ಸಾಕಷ್ಟು ವಿದ್ಯಾರ್ಥಿಗಳ ಪಠ್ಯಪುಸ್ತಕ, ನೋಟ್‍ಪುಸ್ತಕ, ಪೆನ್ನು, ಸಮವಸ್ತ್ರ ಹಾಗೂ ಲೇಖನಸಾಮಗ್ರಿಗಳೆಲ್ಲ ನಾಶಗೊಂಡಿರುವ ಸಾಧ್ಯತೆ ಇದೆ. ಅವುಗಳನ್ನು ಸಾಧ್ಯವಿರುವಲ್ಲಿ ತಮ್ಮ ಹಂತದಲ್ಲಿಯೇ ಒದಗಿಸಲು ಯತ್ನಿಸುವುದು. ಅಗತ್ಯವಿದ್ದಲ್ಲಿ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು ಹಾಗೂ ದಾನಿಗಳ ನೆರವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಅವರು, 4-6ದಿನಗಳಲ್ಲಿ ತಾವು ನೀಡುವ ವರದಿಯನ್ನಾಧರಿಸಿ, ಅವುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಹಾನಿಗೊಳಗಾದ ಶಾಲೆಗಳ ಸಮೀಕ್ಷೆ ನಡೆಸಿ ಕೂಡಲೇ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಇಂಜಿನಿಯರರಿಗೆ ಸೂಚಿಸಲಾಗಿದೆ. ಕೂಡಲೇ ವರದಿ ಪಡೆದು, ಪರ್ಯಾಯ ಕ್ರಮಗಳ ಬಗ್ಗೆ ಯೋಜನೆ ಸಿದ್ಧಪಡಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ಸೂಚಿಸಲಾಗಿದೆ ಎಂದ ಅವರು, ಶಾಲಾ ಕಟ್ಟಡಗಳ ವಸ್ತುಸ್ಥಿತಿಯನ್ನು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದರು.
ಶಾಲಾ ಮುಖ್ಯೋಪಾಧ್ಯಾಯರು ಶಿಥಿಲಾವಸ್ತೆಯಲ್ಲಿರುವ ಕೊಠಡಿಯೊಳಗೆ ಮಕ್ಕಳನ್ನು ಕೂರಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಸುಮಂಗಳ ಪಿ.ಕುಚಿನಾಡ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೇ ಶಾಲಾ ಮಕ್ಕಳನ್ನು ಶಾಲಾ ಸ್ವಚ್ಛತೆ ಹಾಗೂ ದುರಸ್ತಿ, ಸ್ವಚ್ಚತೆಯಂತಹ ಕೆಲಸಗಳಿಗೆ ಬಳಸಿಕೊಳ್ಳದಂತೆ ಮುಖ್ಯೋಪಾಧ್ಯಾಯರಿಗೆ ಸೂಚಿಸಿರುವ ಅವರು, ಮಕ್ಕಳ ಆರೋಗ್ಯ ತಪಾಸಣೆ ನಡೆಸುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಜಿಲ್ಲೆಯಲ್ಲಿ 1841ಪ್ರಾಥಮಿಕ ಶಾಲೆಗಳ 7972ಕೊಠಡಿಗಳ ಪೈಕಿ 1551ಕೊಠಡಿಗಳು ಶಿಥಿಲಾವಸ್ತೆಯಲ್ಲಿದ್ದು, 612ಕೊಠಡಿಗಳು ಸಂಪೂರ್ಣ ನಾಶಗೊಂಡಿವೆ. 163ಪ್ರೌಢಶಾಲೆಗಳ 1598ಕೊಠಡಿಗಳ ಪೈಕಿ 259ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, 57ಕೊಠಡಿಗಳು ಸಂಪೂರ್ಣ ನಾಶವಾಗಿದ್ದು, ಬಳಸಲು ಬಾರದಂತಾಗಿವೆ. ಅವುಗಳಲ್ಲಿ ಶಿಕಾರಿಪುರ ಮತ್ತು ಸೊರಬ ತಾಲೂಕಿನ ಅತಿ ಹೆಚ್ಚು ಶಾಲಾ ಕಟ್ಟಡಗಳು ಹಾನಿಗೊಳಗಾಗಿವೆ ಎಂದ ಅವರು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿ ಹಾಗೂ ಸಂಪೂರ್ಣ ಹಾಳಾಗಿರುವ ಕಟ್ಟಡಗಳಿಗೆ ಬದಲಾಗಿ ಹೊಸ ಕಟ್ಟಡಗಳ ನಿರ್ಮಾಣ ಮಾಡಲು ಸರ್ಕಾರಕ್ಕೆ ಕ್ರಿಯಾಯೋಜನೆಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

error: Content is protected !!