ಶಿವಮೊಗ್ಗ : ಕಣಾದ ಯೋಗ ಮತ್ತು ರಿಸರ್ಚ್‌ ಫೌಂಡೇಶನ್‌, ಸರ್ಜಿಫೌಂಡೇಶನ್‌ ಹಾಗೂ ಪರೋಪಕಾರಂ, ಯೋಗಶಿಕ್ಷಣ ಸಮಿತಿ, ಆದಿಚುಂಚನಗಿರಿ ಶಾಲೆ ಸಹಕಾರದೊಂದಿಗೆ ಆದಿಚುಂಚನಗಿರಿ ಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ 8ನೇ ಆವೃತ್ತಿಯ ಬೃಹತ್‌ ಸೂರ್ಯಥಾನ್‌, ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.

ಸೂರ್ಯಥಾನ್‌ ಕಾರ್ಯಕ್ರಮವನ್ನು ಗಣ್ಯರು ಸೂರ್ಯನಮಸ್ಕಾರ ಮಾಡುವ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು. 9 ಮಂಡಲಗಳ ನಡೆದ 108 ಸೂರ್ಯ ನಮಸ್ಕಾರವನ್ನು ಕೇವಲ ಆಸನ- ಪ್ರಾಣಾಯಾಮಗಳ ಹೆಸರುಗಳನ್ನು ಹೇಳುವುದಕ್ಕೆ ಸೀಮಿತಗೊಳಿಸದೇ ಶಿವಮೊಗ್ಗ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳ, ಪ್ರವಾಸಿಗಳ ತಾಣಗಳ ಮಾಹಿತಿ, ಪ್ರಾಣಿ, ಪಕ್ಷಿ ಸಂಕುಲ, ಪರಿಸರ ಕಾಳಜಿ, ಕೌಟುಂಬಿಕ, ಸಾಮಾಜಿಕ ಸಂಬಂಧಗಳ ಅರಿವು, ಸಂಸ್ಕಾರ, ಋಷಿಮುನಿಗಳು, ಮಾತೃ ದೇವತೆಗಳ ಬಗ್ಗೆ ಮಾಹಿತಿ, ಆರೋಗ್ಯಕರ ತಂಪುಪಾನೀಯ, ದೇಶದ,ಜಿಲ್ಲೆಯ ನದಿಗಳ ಮಾಹಿತಿ, ತರಕಾರಿಗಳ ಮಾಹಿತಿ, ಯೋಗದ ಬಗೆಗಳು ಹಾಗೂ ಯೋಗದಿಂದ ಆಗುವ ಪ್ರಯೋಜನಗಳನ್ನು ಮಕ್ಕಳಿಗೆ “ಕೇಳಿ- ಹೇಳಿ” ಚಟುವಟಿಕೆಗಳ ಮೂಲಕ ಸೂರ್ಯ ನಮಸ್ಕಾರಗಳನ್ನು ಮಾಡಿಸುತ್ತಾ, ಮಾಹಿತಿ ನೀಡಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದ್ದಲ್ಲದೇ,ಯೋಗಪಟುಗಳ ಆಯಾಸ ಅರಿವಿಗೆ ಬಾರದಂತೆ ಮುನ್ನಡೆಸಿದ ಕ್ರಿಯಾಶೀಲತೆ ಯೋಗಪಟುಗಳ ಮೆಚ್ಚುಗೆ ಗಳಿಸಿತು. ಯುವ ನೃತ್ಯ ಕಲಾವಿದ ಎನ್‌.ಶಶಿಕುಮಾರ್‌ ಅವರು ವಿವಿಧ ಚಲನಚಿತ್ರ ಗೀತೆಗಳ ತುಣುಕುಗಳಿಗೆ ಯೋಗ ನೃತ್ಯ ಮಾಡಿಸಿ, ಮನರಂಜಿಸಿ, ಎಲ್ಲರಿಗೂ ಹೆಜ್ಜೆ ಹಾಕಿಸಿದರು.

ಯುವ ಜನರಲ್ಲಿ ಯೋಗ-ಆರೋಗ್ಯ, ದೇಹಭಕ್ತಿ -ದೇಶಭಕ್ತಿ ಜಾಗೃತಿಗಾಗಿ ರಥಸಪ್ತಮಿ, ಗಣರಾಜ್ಯೋತರ‍ಸವ ಮತ್ತು ಸ್ವಾತಂತ್ರ್ಯ ಅಮೃತೋತ್ಸವ, ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಲೆ, ಭಾರತೀಯ ವಿದ್ಯಾಭವನ, ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಸ್ಯಾನ್‌ ಜೋಸೆಫ್‌ ಅಕ್ಷರ ಧಾಮ, ಜ್ಞಾನದೀಪ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ಸೂರ್ಯ ನನ್ನು ಹೋಲುವ ವೃತ್ತಾಕಾರದ ವೇದಿಕೆಯ ನಿರ್ಮಾಣ ಅತ್ಯಂತ ವಿಶಿಷ್ಟವಾಗಿತ್ತು.ದ್ವಾದ ಶ ಆದಿತ್ಯರನ್ನು ಪ್ರತಿನಿಧಿಸುವ 12 ಪರಿಣಿತ ಯೋಗಪಟುಗಳು ವೃತ್ತಾಕಾರದ ಸುತ್ತಲೂ ಎಲ್ಲಾ ದಿಕ್ಕುಗಳಿಗೆ ಮುಖ ಮಾಡಿ ನಿಂತಿದ್ದರೆ,ಸೂರ್ಯ ನ ಮೂಲ 7 ಬಣ್ಣಗಳನ್ನು, ವಾರಗಳನ್ನು,ಛಂದಸ್ಸುಗಳನ್ನು ಸೂಚಿಸುವ 7 ಬಣ್ಣಗಳ ಕಿರಣಗಳನ್ನು ಸೂಚಿಸುವ 7 ಬಣ್ಣಗಳ ಬಟ್ಟೆಗಳು, ಸೂರ್ಯ ಮಂತ್ರದಲ್ಲಿ ಬರುವ 12 ಸೂರ್ಯ ನ ಹೆಸರುಗಳನ್ನು ಬರೆದು ಹಾಕಿದ್ದು, ಮಕ್ಕಳಿಗೆ ಮನಮುಟ್ಟುವಂತೆ ಪಾಠವನ್ನು ಮಾಡಿದಂತಿತ್ತು.
ಸೂರ್ಯಥಾನ್‌ 2023 ಅಂಗವಾಗಿ ನಡೆದ ವಿವಿಧ ಯೋಗ ಸ್ಪರ್ಧೆಗಳ ವಿಜೇತರಿಗೆ ಗಣ್ಯರಿಂದ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌, ಮಹಾಪೌರ ಶಿವಕುಮಾರ್‌, ಮಾಜಿ ಮೇಯರ್‌ ಸುವರ್ಣ ಶಂಕರ್‌, ಕರ್ನಾಟಕ ಕ್ರೀಡಾರತ್ನ ಪುರಸ್ಕೃತ ಯೋಗಾಚಾರ್ಯ ಅನಿಲ್‌ ಕುಮಾರ್‌ ಹೆಚ್‌ ಶೆಟ್ಟರ್ ಸೂರ್ಯ ನಮಸ್ಕಾರಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪರೋಪಕಾರಂ ಮುಖ್ಯಸ್ಥರಾದ ಎನ್‌.ಎಂ.ಶ್ರೀಧರ್‌, ಕಣಾದ ಯೋಗ ಮತ್ತು ರಿಸರ್ಚ್‌ ಸೆಂಟರ್‌ನ ಅಧ್ಯಕ್ಷರಾದ ಬೆಲಗೂರು ಮಂಜುನಾಥ್‌, ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ, ಯೋಗ ಶಿಕ್ಷಣ ಸಮಿತಿಯ ಡಾ.ಸಂಜಯ್‌, ಯೋಗಗುರು ಬಾ.ಸು.ಅರವಿಂದ್‌, ಯೋಗಗುರು ಭ.ಮ.ಶ್ರೀಕಂಠ ಮತ್ತಿತರರು ಹಾಜರಿದ್ದರು. ಎಲ್ಲರಿಗೂ ಫಲಾಹಾರ ವ್ಯವಸ್ಥೆ ಮಾಡಲಾಗಿತ್ತು. ಮಂಜು ಕಾರ್ನಳ್ಳಿ ಸ್ವಾಗತಿಸಿದರು, ತ್ಯಾಗರಾಜ್‌ ಮಿತ್ಯಾಂತ ವಂದಿಸಿದರು. ಶ್ರೀಮತಿ ರಾಧಿಕಾ ಮಾಲತೇಶ್‌ ನಿರೂಪಿಸಿದರು.

error: Content is protected !!