ಶಿವಮೊಗ್ಗ : ಜೂನ್ 26 : ತೀರ್ಥಹಳ್ಳಿಯಲ್ಲಿ ಶಿಥಿಲಾವಸ್ತೆಯಲ್ಲಿರುವ ಹಾಗೂ ದುರಸ್ತಿಯಲ್ಲಿರುವ ಗ್ರಾಮೀಣ ಶಾಲಾ ಕಟ್ಟಡದ ರಿಪೇರಿಗಾಗಿ ನಾಲ್ಕು ತಿಂಗಳುಗಳ ಹಿಂದೆಯೇ ಅನುದಾನ ಬಿಡುಗಡೆಗೊಳಿಸಲಾಗಿದೆ. ಆದರೂ ಸಕಾಲದಲ್ಲಿ ಶಾಲಾ ಕಟ್ಟಡವನ್ನು ಪೂರ್ಣಗೊಳಿಸದಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಅಗತ್ಯ ಅನುದಾನ ಬಿಡುಗಡೆಯಾದ ನಂತರವೂ ಸೂಚಿತ ಕಾಮಗಾರಿ ಪೂರ್ನಗೊಳಿಸದೇ ಇದ್ದು, ಒಂದು ಪಕ್ಷ ಆಕಸ್ಮಿಕ ಅವಘಡಗಳು ಸಂಭವಿಸಿದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ಹೊಸನಗರದ ಬ್ರಾಹ್ಮಣ ಮಹಾಸಭಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಂದಾಯಾಧಿಕಾರಿಗಳ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಗುಡ್ಡೇಕೇರಿ ಸರ್ಕಾರಿ ಶಾಲೆಗೆ ಹೆಚ್ಚುವರಿಯಾಗಿ ನಿರ್ಮಿಸಿರುವ ನೂತನ ಶಾಲಾ ಕಟ್ಟಡದ ಕಿಟಕಿ ಬಾಗಿಲುಗಳನ್ನು ಅವೈಜ್ಞಾನಿಕವಾಗಿ ಅಳವಡಿಸಲಾಗಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಹಾಗೂ ತರಗತಿಗಳಿಗೆ ತೀವ್ರತರಹದ ಅಡಚಣೆ ಉಂಟುಮಾಡಿದೆ. ಕಟ್ಟಡ ನಿರ್ಮಿಸುವ ಗುತ್ತಿಗೆದಾರರು ಹಾಗೂ ಇಂಜಿನಿಯರ್‍ಗಳು ಇಂತಹ ಸೂಕ್ಷ್ಮಗಳನ್ನು ಗಮನಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗುವಂತೆ ಸೂಚಿಸಿದರು.
ಕಳೆದ ಬಾರಿ ತೀರ್ಥಹಳ್ಳಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಸ್ವೀಕರಿಸಲಾದ ಅರ್ಜಿಗಳಲ್ಲಿ ಇನ್ನು ಕೆಲವು ಅರ್ಜಿಗಳು ವಿಲೇ ಆಗದೆ ಬಾಕಿ ಉಳಿದಿವೆ. ಅವುಗಳನ್ನು ಕೂಡಲೇ ವಿಲೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನ ಮಂತ್ರಿ ಕಿಸಾನ್‍ಸಮ್ಮಾನ್ ಯೋಜನೆಯಡಿ ಜಿಲ್ಲೆಯ ರೈತರ ಸಮೀಕ್ಷೆ ನಡೆಸಿ ಆನ್‍ಲೈನ್‍ನಲ್ಲಿ ಅಪ್‍ಡೇಟ್ ಮಾಡಲು ಸೂಚಿಸಲಾಗಿತ್ತು. ಆದರೆ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲಿಯೂ ನಿರೀಕ್ಷಿತ ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ವಹಿಸಿದ ಜವಾಬ್ದಾರಿಯ ಕೆಲಸವನ್ನು ಮಾಡದೆ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದ ಅವರು, ಮುಂದಿನ 2-3ದಿನಗಳೊಳಗಾಗಿ ಸಮೀಕ್ಷೆಯ ವರದಿಯನ್ನು ಗಣಕೀಕರಣಗೊಳಿಸಿ ಮಾಹಿತಿ ನೀಡುವಂತೆ ಅವರು ತಹಶೀಲ್ದಾರರಿಗೆ ಸೂಚಿಸಿದರು.
ನಿಗಧಿತ ನಮೂನೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಈ ವಿಷಯದ ಕುರಿತು ಉಪವಿಭಾಗಾಧಿಕಾರಿಗಳು ಕಂದಾಯಾಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿದರು. ಈ ಹಿಂದೆ ಅರಣ್ಯ ಹಕ್ಕಿಗೆ ಸಂಬಂಧಿಸಿದಂತೆ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಅರ್ಜಿಗಳನ್ನು ಕೂಡಲೇ ವಿಲೇ ಮಾಡಬೇಕು. ತಿರಸ್ಕರಿಸಿದ ಅರ್ಜಿಗಳನ್ನು ಅರಣ್ಯ ಹಕ್ಕು ಸಮಿತಿಯಲ್ಲಿ ಪುನರ್ ಪರಿಶೀಲನೆ ಮಂಡಿಸುವಂತೆ ಸೂಚಿಸಿದರು.
ಪಿಂಚಣಿ-ಆಧಾರ್‍ನೊಂದಿಗೆ ಜೋಡಿಸುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೂಡಲೇ ಆಧಾರ್ ಜೋಡಣೆ ಕಾರ್ಯ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದರು.
ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆಯಾಗದಿರುವ ಬಗೆ ಚುನಾಯಿತ ಜನಪ್ರತಿಗಳು ಹಕ್ಕುಬಾಧ್ಯತಾ ಸಮಿತಿಗೆ ದೂರುಗಳನ್ನು ಸಲ್ಲಿಸಲಿದ್ದಾರೆ. ಅಧಿಕಾರಿಗಳು ಕಡ್ಡಾಯವಾಗಿ ಶಿಷ್ಠಾಚಾರ ಪಾಲನೆ ಮಾಡಬೇಕು. ತಪ್ಪಿದಲ್ಲಿ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡುವುದು ಅನಿವಾರ್ಯವಾಗಲಿದೆ ಎಂದರು.
ಆಶ್ರಯ ಯೋಜನೆಯಡಿ ನಿರ್ವಸತಿಗರಿಗೆ ನಿವೇಶನ ವಿತರಿಸಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಟ 2ಎಕರೆ ಜಮೀನನ್ನು ಗುರುತಿಸಿ ಕಾಯ್ದಿರಿಸಲು ಹಾಗೂ ಪ್ರತಿ ತಾಲೂಕಿನ ಆಯ್ದ 5ಸ್ಥಳಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಲು ಜಾಗ ಗುರುತಿಸಿ ವರದಿ ನೀಡುವಂತೆಯೂ ಸೂಚಿಸಲಾಗಿತ್ತು. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿದರು.
ಸಮಸ್ಯಾತ್ಮಕ ಸರ್ವೇ ನಂಬರ್‍ಗಳ ಮಾಹಿತಿ ಪಡೆದು ಕಂದಾಯ ಹಾಗೂ ಅರಣ್ಯಭೂಮಿಗಳ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಬೇಕು. ತಹಶೀಲ್ದಾರರು ನಿರ್ಲಕ್ಷ್ಯ ತೋರದೇ 2-3ತಿಂಗಳ ಅವಧಿಯೊಳಗಾಗಿ ಸರ್ವೇ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿದರು.
ನಗರ ಆಶ್ರಯ ಯೋಜನೆಯಡಿ ಪ್ರತಿ ತಾಲೂಕಿನಲ್ಲಿ ಕನಿಷ್ಟ 50ಎಕರೆ ಭೂಮಿಯನ್ನು ನಿಗಧಿಪಡಿಸಿ ವರದಿ ನೀಡಲು ಸೂಚಿಸಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಉಪವಿಭಾಗಾಧಿಕಾರಿಗಳಾದ ಟಿ.ವಿ.ಕೃಷ್ಣಮೂರ್ತಿ ಮತ್ತು ದರ್ಶನ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!