ಶಿವಮೊಗ್ಗ, ಮಾರ್ಚ್ 17 : ಶಿವಮೊಗ್ಗ ನಗರದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ಹೆಚ್ಚಳವಾಗಿದ್ದು, ಸಾರ್ವಜನಿಕರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ನೀಡಿದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದೆ ನಿಯಂತ್ರಣಕ್ಕೆ ಮುಂದಾಗಿದೆ.
ಮಹಾನಗರಪಾಲಿಕೆ ಆಯುಕ್ತರು ಹಾಗೂ ಲೋಕೋಪಯೋಗಿ ಇಂಜಿನಿಯರರ ಸಲಹೆಯಂತೆ ಹಾಗೂ ಮೋಟಾರು ವಾಹನ ಕಾಯ್ದೆಯನ್ವಯ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿನ ಅಡತಡೆಗಳನ್ನು ನಿವಾರಿಸಿ ವಾಹನ ಸುಗಮಗೊಳಿಸಲು ಹಾಗೂ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದರ ಜೊತೆಗೆ ಎಲ್ಲೆಂದರಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ, ವಾಹನ ನಿಲುಗಡೆಗೆ ಸೂಕ್ತ ಸ್ಥಳ ಗುರುತಿಸಿ, ಸಾರ್ವಜನಿಕರು ನಿಗಧಿಪಡಿಸಿದ ಸ್ಥಳದಲ್ಲೆ ವಾಹನಗಳನ್ನು ನಿಲ್ಲಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಎ.ಎ.ಸರ್ಕಲ್(ಸಿಟಿ ಸೆಂಟರ್ ಮಾಲ್)ನಿಂದ ಗೋಪಿ ಸರ್ಕಲ್ವರೆಗಿನ ನೆಹರೂ ರಸ್ತೆಯ ಎಡಭಾಗದಲ್ಲಿ ವಾಹನಗಳ ನಿಲುಗಡೆ ಸ್ಥಳ ನಿಗಧಿಪಡಿಸಿದೆ. ಎ.ಎ.ಸರ್ಕಲ್ನ ಹತ್ತಿರವಿರುವ ಸಿಟಿ ಸೆಂಟರ್ ಮಾಲ್ನಿಂದ ಗಾರ್ಡನ್ ಏರಿಯಾ 1ನೇ ಕ್ರಾಸ್ವರೆಗೆ ದ್ವಿಚಕ್ರ ವಾಹನ ನಿಲುಗಡೆಗೊಳಿಸಲು, ಗಾರ್ಡನ್ ಏರಿಯಾ 2ನೇ ಕ್ರಾಸ್ನ ಬಲಭಾಗದಿಂದ ಪೀಟರ್ ಇಂಗ್ಲೆಂಡ್ ಬಟ್ಟೆ ಅಂಗಡಿಯವರಗೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೊಳಿಸಲು ಹಾಗೂ ಪೀಟರ್ ಇಂಗ್ಲೇಂಡ್ ಬಟ್ಟೆ ಅಂಗಡಿಯಿಂದ ಆಶೀಸ್ ಮೆನ್ಸ್ವೇರ್ ದ್ವಿಚಕ್ರ ವಾಹನಗಳನ್ನು ನಿಲುಗಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಎ.ಎ.ಸರ್ಕಲ್(ಸಿಟಿ ಸೆಂಟರ್ ಮಾಲ್)ನಿಂದ ಗೋಪಿ ಸರ್ಕಲ್ವರೆಗಿನ ನೆಹರೂ ರಸ್ತೆಯ ಬಲಭಾಗದಲ್ಲಿ ವಾಹನಗಳ ನಿಲುಗಡೆ ಸ್ಥಳ ನಿಗಧಿಪಡಿಸಿದೆ. ಜ್ಯೋತಿ ಟವರ್ನಿಂದ ಕಲ್ಯಾಣ್ ಜ್ಯುವೆಲರ್ಸ್ನ ಪಾರ್ಕಿಂಗ್ ಗೇಟ್ವರೆಗೆ ದ್ವಿಚಕ್ರವಾಹನಗಳ ನಿಲುಗಡೆಗೊಳಿಸಲು, ಕಲ್ಯಾಣ್ ಜ್ಯುವೆಲರ್ಸ್ನಿಂದ ಹಾರ್ನಳ್ಳಿ ಮಂಜಪ್ಪ ಜ್ಯುವೆಲರ್ಸ್ವರೆಗೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೊಳಿಸಲು, ಹಾರ್ನಳ್ಳಿ ಮಂಜಪ್ಪ ಜ್ಯುವೆಲರ್ಸ್ನಿಂದ ಭರತ್ ಟಿ.ವಿ.ಶೊ ರೂಮ್ವರೆಗೆ ದ್ವಿಚಕ್ರ ವಾಹನಗಳ ನಿಲುಗಡೆಗೊಳಿಸಲು ಹಾಗೂ ಭರತ್ ಟಿ.ವಿ. ಶೋ ರೂಂನಿಂದ ಗೀತಾಂಜಲಿ ಗಾರ್ಮೆಂಟ್ಸ್ವರೆಗೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೊಳಿಸಲು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.