ಶಿವಮೊಗ್ಗ : ನವೆಂಬರ್ 23 : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ನವೆಂಬರ್ 25ರಂದು ಬೆಳಿಗ್ಗೆ 11ಗಂಟೆಗೆ ನವಿಲೆಯ ಮುಖ್ಯ ಆವರಣದಲ್ಲಿ ಆರನೆಯ ಘಟಿಕೋತ್ಸವವನ್ನು ಆಯೋಜಿಸಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ|| ಎಂ.ಕೆ.ನಾಯ್ಕ್ ಅವರು ಹೇಳಿದರು.
ಅವರಿ ಇಂದು ತಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಈ ಘಟಿಕೋತ್ಸವದಲ್ಲಿ ರಾಜ್ಯದ ರಾಜ್ಯಪಾಲರು ಹಾಗೂ ನಮ್ಮ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ಚಂದ್ ಗೆಹ್ಲೋಟ್ರವರು ಉಪಸ್ಥಿತರಿದ್ದು, ಪದವಿ ಪ್ರದಾನ ಮಾಡುವರು. ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು ಹಾಗೂ ರಾಜ್ಯ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ರವರು ಉಪಸ್ಥಿತರಿರುವರು. ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪಮಹಾನಿರ್ದೇಶಕರು (ಕೃಷಿ ಶಿಕ್ಷಣ) ಡಾ. ಆರ್. ಸಿ. ಅಗರ್ವಾಲ್ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಘಟಿಕೋತ್ಸವದ ಪ್ರಧಾನ ಭಾಷಣ ಮಾಡಲಿರುವರು.
ಇದೇ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ವತಿಯಿಂದ ಪ್ರಪ್ರಥಮ ಬಾರಿಗೆ ಚೊಚ್ಚಲ ಗೌರವ ಡಾಕ್ಟರೇಟ್ ಪದವಿಯನ್ನು ಹೈದ್ರಾಬಾದ್ನ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಎಲ್ಲಾ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಪದವಿ ಪುರಸ್ಕøತ ಕೃಷ್ಣಮೂರ್ತಿ ಎಲ್ಲಾ ಅವರು ತಮ್ಮ ಸಂಸ್ಥೆಯ ಮೂಲಕ ರೋಟವೈರಸ್, ಟೈಫಾಯಿಡ್ ಕಾಂಜುಗೇಟ್, ಚಿಕೂನ್ಗುನ್ಯಾ ಮತ್ತು ಜಿಕಾ ಮುಂತಾದ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಕೈಗೆಟುಕುವ ದರದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ಪ್ರಸಿದ್ಧರಾಗಿದ್ದಾರೆ. ಅಲ್ಲದೇ ಕರೋನ ವೈರಸ್ ನಿಯಂತ್ರಿಸಲು ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಿ ಮಾನವ ಕುಲಕ್ಕೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಘಟಿಕೋತ್ಸವ ಸಮಾರಂಭಕ್ಕೆ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಶೈಕ್ಷಣಿಕ ಪರಿಷತ್ತಿನ ಸದಸ್ಯರುಗಳು, ವಿಶ್ರಾಂತ ಕುಲಪತಿಗಳು, ಡೀನ್ಗಳು ಮತ್ತು ನಿರ್ದೇಶಕರು, ವಿಶ್ರಾಂತ ಅಧಿಕಾರಿಗಳು ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಆಹ್ವಾನಿತ ಗಣ್ಯರು, ಗೌರವಾನ್ವಿತ ಪದಕಗಳ ದಾನಿಗಳು, ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಲಿದ್ದಾರೆ ಎಂದರು.
ಈ ಘಟಿಕೋತ್ಸವದಲ್ಲಿ ಸ್ನಾತಕ ಪದವಿಯಲ್ಲಿ 238 ವಿದ್ಯಾರ್ಥಿಗಳಿಗೆ (ಬಿ.ಎಸ್ಸಿ.ಕೃಷಿ, ತೋಟಗಾರಿಕೆ ಮತ್ತು ಅರಣ್ಯ), ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ 105 ಎಂ.ಎಸ್ಸಿ. ವಿದ್ಯಾರ್ಥಿಗಳಿಗೆ ಹಾಗೂ 15 ಪಿಹೆಚ್.ಡಿ.ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ 9 ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕಗಳನ್ನು, 14 ಎಂ.ಎಸ್ಸಿ. ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕಗಳನ್ನು ಮತ್ತು 5 ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ 5 ಚಿನ್ನದ ಪದಕಗಳನ್ನು, ಒಟ್ಟಾರೆ 35 ಚಿನ್ನದ ಪದಕಗಳನ್ನು 28 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದರು.
2020-21ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಐ.ಸಿ.ಎ.ಆರ್. ಜೆ.ಆರ್.ಎಫ್. ಪರೀಕ್ಷೆಯಲ್ಲಿ ನಮ್ಮ ವಿಶ್ವವಿದ್ಯಾಲಯದ ಒಟ್ಟು 14 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ ಹಾಗೂ ಅಖಿಲ ಭಾರತ ಐ.ಸಿ.ಎ.ಆರ್. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 2 ವಿದ್ಯಾರ್ಥಿಗಳು ಎಸ್.ಆರ್.ಎಫ್.ಗಳಾಗಿ ಆಯ್ಕೆಯಾಗಿರುತ್ತಾರೆ ಹಾಗೂ 15 ವಿದ್ಯಾರ್ಥಿಗಳು ಎನ್.ಟಿ.ಎಸ್. (ಸ್ನಾತಕೋತ್ತರ) ಪ್ರವೇಶ ಪಡೆದುಕೊಂಡಿರುತ್ತಾರೆ. 2020-21ರ ಸಾಲಿನಲ್ಲಿ ಸ್ನಾತಕ ಪದವಿ ಕಾರ್ಯಕ್ರಮಗಳಿಗೆ ಒಟ್ಟು 399 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಜೊತೆಗೆ ಶಿವಮೊಗ್ಗ, ಮೂಡಿಗೆರೆ ಮತ್ತು ಪೊನ್ನಂಪೇಟೆ ಕಾಲೇಜುಗಳಲ್ಲಿ 122 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಹಾಗೂ ಕತ್ತಲಗೆರೆ ಮತ್ತು ಬ್ರಹ್ಮಾವರದಲ್ಲಿ 45 ವಿದ್ಯಾರ್ಥಿಗಳು ಡಿಪ್ಲೊಮಾ ಕೃಷಿಗೆ ಪ್ರವೇಶ ಪಡೆದಿರುತ್ತಾರೆ. ಅಲ್ಲದೆ ಇರುವಕ್ಕಿಯ ವಿಶ್ವವಿದ್ಯಾಲಯದ ಆವರಣದಲ್ಲಿ ್ಲ 57 ವಿದ್ಯಾರ್ಥಿಗಳಿಗೆ ಕೃಷಿ ಪದವಿ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಕೃಷಿ ವಿಸ್ತರಣಾ ವಿಭಾಗದ ವಿದ್ಯಾರ್ಥಿ ಎಂ. ಸಿ. ವಿವೇಕ್ ಅವರಿಗೆ ಹೈದರಾಬಾದ್ನ ಮ್ಯಾನೇಜ್ ವತಿಯಿಂದ ರಾಷ್ಟ್ರಮಟ್ಟದ ಅತ್ಯುತ್ತಮ ಎಂ.ಎಸ್ಸಿ. ಪ್ರಬಂಧ ಪ್ರಶಸ್ತಿ ನೀಡಿ ಗೌರವಿಸಿದೆ. ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಿಂದ ಪದವಿ ಪಡೆದಿರುವ ಕು. ಪಲ್ಲವಿ ಪೂಜಾರ್ ಇವರು ಜರ್ಮನಿಯ ನೇತಾಜಿ ಸುಭಾಸ್-ಐಸಿಎಆರ್ ಇಂಟರ್ನಾಷನಲ್ ಫೆಲೋಶಿಪ್ಗೆ ಬಾಜನರಾಗಿದ್ದಾರೆ. ಶಶಿಭೂಷಣ್ ಮಿಶ್ರಾ ಮತ್ತು ಝೆಂಕಾರ್ ಎಂ.ಜೆ. ಅವರು ಕ್ರಮವಾಗಿ ಕೋಪನ್ ಹೇಗನ್ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಗೊಟ್ಟಿಂಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ.ಗೆ ಪ್ರವೇಶ ಪಡೆದಿರುವುದು ಹರ್ಷವೆನಿಸಿದೆ ಎಂದರು.
ನಮ್ಮ ವಿಶ್ವವಿದ್ಯಾಲಯದ ಸಸ್ಯ ತಳಿ ವಿಭಾಗದಿಂದ ನವದೆಹಲಿಯಲ್ಲಿರುವ ಭಾರತ ಸರ್ಕಾರದ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಶಿವಮೊಗ್ಗದ ವಿಭಾಗೀಯ ಕಛೇರಿಯಿಂದ ಪ್ರಸಕ್ತ ಸಾಲಿನಲ್ಲಿ ಹಲವು ತಳಿಗಳನ್ನು ನೋಂದಣಿಗೆ ಶಿಫಾರಸ್ಸು ಮಾಡಲಾಗಿದ್ದು ಅವುಗಳು ಸಮಿತಿಯಲ್ಲಿ ನೊಂದಾಯಿಸಲ್ಪಟಿರುತ್ತವೆ. ಅವುಗಳಲ್ಲಿ ಭತ್ತದ ತಳಿಗಳಾದ ಕೆಹೆಚ್ಪಿ-10(ಕೆಂಪು ಅಕ್ಕಿ), ಕೆಹೆಚ್ಪಿ-9, ಕೆಹೆಚ್ಪಿ-13, ತುಂಗಾ ತಳಿಗಳನ್ನು ವಿಶೇಷವಾಗಿ ವಲಯ-9ಕ್ಕೆ ಶಿಫಾರಸ್ಸು ಮಾಡಲಾಗಿದೆ. ವಿಶ್ವವಿದ್ಯಾಲಯದ ವತಿಯಿಂದ ಅಭಿವೃದ್ಧಿಪಡಿಸಲಾದ ಅಲಸಂದೆ “ಸಹ್ಯಾದ್ರಿ ಯುಕ್ತಿ” ತಳಿ ಹಾಗೂ ಶೇಂಗಾದಲ್ಲಿ, ವಲಯ 4ಕ್ಕೆ “ಡಿ.ಹೆಚ್-256” ತಳಿಗಳನ್ನು ರಾಜ್ಯ ತಳಿ ಬಿಡುಗಡೆ ಸಮಿತಿಯು(Sಗಿಖಅ) ಸ್ವೀಕರಿಸಿದೆ. ಪ್ರಸಕ್ತ ವರ್ಷದಲ್ಲಿ ವಿಶ್ವವಿದ್ಯಾಲಯದಿಂದ ಭತ್ತದ ತಳಿ ಸಹ್ಯಾದ್ರಿ ಕಾವೇರಿ (ಐ.ಇ.ಟಿ-24451)ಯನ್ನು ಕರ್ನಾಟಕದ ಗುಡ್ಡಗಾಡು ವಲಯಕ್ಕೆ (ವಲಯ-9) ಮುಂಗಾರಿನಲ್ಲಿ ಮಜಲು ಭೂಮಿಯಲ್ಲಿ ಬೆಳೆಯಲು ಹಾಗೂ ನೆಲಗಡಲೆಯಲ್ಲಿ ಅಧಿಕ ಇಳುವರಿ ಕೊಡುವ ತಳಿಯಾದ ಡಿ.ಹೆಚ್-256ಯನ್ನು ಮುಂಗಾರಿನಲ್ಲಿ ಬೆಳೆಯಲು ಹಾಗೂ ರಾಜ್ಯದ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಮತ್ತು ಬೇಸಿಗೆ ಬೆಳೆಯಾಗಿ ಮತ್ತು ಗುಡ್ಡಗಾಡು ಪ್ರದೇಶಕ್ಕೆ ಮುಂಗಾರಿನಲ್ಲಿ ಬೆಳೆಯಲು ಸಹ್ಯಾದ್ರಿ ಕೆಂಪುಮುಕ್ತಿ ಎಂಬ ಭತ್ತದ ತಳಿಯನ್ನು ಶಿಫಾರಸ್ಸು ಮಾಡಲಾಗಿದೆ. ಈ ತಳಿಯು ಬೆಂಕಿರೋಗಕ್ಕೆ ನಿರೋಧಕ ಶಕ್ತಿ, ಕಾಂಡಕೊರಕ ಹುಳು ಮತ್ತು ಕೋರಿಡ್ ಬಗ್ ಕೀಟಗಳಿಗೆ ನಿವಾರಣಾ ಶಕ್ತಿಯನ್ನು ಹೊಂದಿದ್ದು, 125-130 ದಿನಗಳ ಅಲ್ಪಾವಧಿ ತಳಿಯಾಗಿದೆ. ಕರಾವಳಿ ವಲಯದ ಮಜಲು ಗದ್ದೆಗಳಲ್ಲಿ ಮಧ್ಯ ಭಾಗಕ್ಕೆ ಮುಂಗಾರು ಬೆಳೆಯಾಗಿ ಬೆಳೆಯಲು ಭತ್ತದ ಕೆಂಪು ಅಕ್ಕಿ ತಳಿ ಸಹ್ಯಾದ್ರಿ ಬ್ರಹ್ಮ (ಬಿಎಂಆರ್-ಎಂಎಸ್-1-2-1)ವನ್ನು ಶಿಫಾರಸ್ಸು ಮಾಡಲಾಗಿದೆ.
ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ವಿಶ್ವವಿದ್ಯಾಲಯಕ್ಕೆ ಸುಮಾರು ರೂ. 843.95 ಲಕ್ಷಗಳ ಅನುದಾನ ದೊರೆತಿದ್ದು, 154 ಯೋಜನೆಗಳು ಅನುಷ್ಠಾನದಲ್ಲಿವೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಕರ್ನಾಟಕ ರಾಜ್ಯ ಕೃಷಿ ಇಲಾಖೆ (ಸಂಶೋಧನೆ ಮತ್ತು ಅಭಿವೃದ್ಧಿ), ಕರ್ನಾಟಕ ರಾಜ್ಯ ಕೃಷಿ ಇಲಾಖೆ (ಯೋಜನಾ ಅನುದಾನ) ಹಾಗೂ ಸಾಂಸ್ಥಿಕ ಅನುದಾನದಡಿ ಹೊಸ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ (2021-22) ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಸುಮಾರು ರೂ. 667.60 ಲಕ್ಷಗಳ ಅನುದಾನ ದೊರೆತಿದ್ದು 63 ಯೋಜನೆಗಳು ಅನುಷ್ಠಾನದಲ್ಲಿವೆ ಎಂದರು.
ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರಾಫ್ತಾರ್ ಅನುದಾನದಿಂದ ರೂ.1.25 ಕೋಟಿ ಮೊತ್ತದಿಂದ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರಿಗೆ ಉದ್ಯಮಶೀಲತೆ ಕೌಶಲ್ಯವನ್ನು ಬೆಳೆಸಲು ಕ್ರಮ ಕೈಗೊಂಡಿದೆ. ರಾಷ್ಟ್ರೀಯ ಬಿದಿರಿನ ಮಿಷನ್ 95ಲಕ್ಷ ದ ಆರ್ಥಿಕ ನೆರವಿನೊಂದಿಗೆ, ಬಿದಿರಿನ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಸರ್ಕಾರದ ಹೊಸ ಕೃಷಿ ನೀತಿಯ “ಒಂದು ಜಿಲ್ಲೆ ಒಂದು ಉತ್ಪನ್ನ” ದಂತೆ ಶಿವಮೊಗ್ಗಕ್ಕೆ ಅನಾನಸ್, ಮೂಡಿಗೆರೆಗೆ ಸಾಂಬಾರು ಪದಾರ್ಥಗಳು ಮತ್ತು ಹಿರಿಯೂರಿಗೆ ನೆಲಗಡಲೆ ಬೆಳೆಗಳ ಸಂಶೋಧನೆ ಮತ್ತು ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಮೂಲಭೂತ ಸೌಕರ್ಯ ನಿರ್ಮಿಸಿ, ಮೌಲ್ಯಾಧಾರಿತ ಉತ್ಪನ್ನಗಳನ್ನು ತಯಾರಿಸಲು ರೈತರಿಗೆ ಸಹಕಾರಿಯಾಗುವಂತೆ ಈ ಯೋಜನೆಗಳನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ. ವಿಶ್ವವಿದ್ಯಾಲಯದ ಬೀಜ ಘಟಕದಿಂದ ಪ್ರಸಕ್ತ ಸಾಲಿನಲ್ಲಿ ಸುಮಾರು ರೂ.4887 ಕ್ವಿಂಟಾಲ್ಗಳಷ್ಟು ಬೀಜೋತ್ಪಾದನೆ ಮಾಡಲಾಗಿದೆ. 2020-21 ಸಾಲಿನಲ್ಲಿ ಸುಮಾರು 8,68,825 ಗುಣಮಟ್ಟದ ತೋಟಗಾರಿಕೆ ಬೆಳೆಗಳ ಸಸಿಗಳನ್ನು ಉತ್ಪಾದನೆ ಮಾಡಲಾಗಿದೆ.
ಇರುವಕ್ಕಿಯ ಕೃಷಿ ವಿವಿ ಆವರಣದಲ್ಲಿ ರೈತರಿಗೆ ಅನುಕೂಲವಾಗುವಂತೆ ಜೀವವೈವಿಧ್ಯತೆ ಸಂರಕ್ಷಣಾ ಘಟಕ, ಜೈವಿಕ ಇಂಧನ ಉದ್ಯಾನ, ಕೃಷಿ ಅರಣ್ಯ ಸಂಶೋಧನಾ ಘಟಕ, ತಳಿಗಳ ಸಂರಕ್ಷಣಾ ವಿಭಾಗ, ತೋಟಗಾರಿಕೆ ಬೆಳೆಗಳ ಸಂರಕ್ಷಣಾ ಘಟಕ, ತಾಯಿಗಿಡ ಘಟಕ, ಆಹಾರ ಬೆಳೆಗಳ ಘಟಕ, ತೋಟಗಾರಿಕೆ ಬೆಳೆಗಳ ಘಟಕ, ಪಶುಸಂಗೋಪನಾ ಘಟಕ, ಮೀನುಗಾರಿಕೆ ವಿಭಾಗ, ಜಲಾನಯನ ಅಭಿವೃದ್ಧಿಘಟಕ ಮತ್ತು ಸಮಗ್ರ ಕೃಷಿ ಪದ್ಧತಿಯನ್ನೊಳಗೊಂಡಂತೆ 787.03 ಎಕರೆಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇವುಗಳ ಜೊತೆಗೆ ಕಟ್ಟಡಗಳನ್ನು ಸರಿ ಸುಮಾರು 4,95,000 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಇವುಗಳಲ್ಲಿ ಆಡಳಿತ ಭವನ, ಬೆಳೆ ಉತ್ಪಾದನೆ ಮತ್ತು ಬೆಳೆ ಸಂರಕ್ಷಣೆ ವಿಭಾಗ, ಬೆಳೆ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ ವಿಭಾಗ, ಸಮಾಜ ಮತ್ತು ಮೂಲ ವಿಜ್ಞಾನಗಳ ವಿಭಾಗ, ತೋಟಗಾರಿಕೆ ಮತ್ತು ಅರಣ್ಯವಿಭಾಗ, ಗ್ರಂಥಾಲಯ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಿಲಯಗಳನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಕೊಳಚೆ ನೀರನ್ನು ಶುದ್ಧೀಕರಿಸಿ ಪುನರ್ಬಳಕೆ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಈಗಾಗಲೇ ಸಂರಕ್ಷಿತ ಕಾಫಿತೋಟ, ನೆರಳುಮನೆ, ಪಾಲಿಹೌಸ್ ಇತ್ಯಾದಿ ಸವಲತ್ತುಗಳನ್ನೂ ಅಭಿವೃದ್ಧಿಪಡಿಸಲಾಗಿದೆ ಎಂದರು.
ವಿಶ್ವವಿದ್ಯಾಲಯದಲ್ಲಿ ಬಾಳೆ ಅಂಗಾಂಶ ಕೃಷಿ, ಜೈವಿಕ ಗೊಬ್ಬರ ಮತ್ತು ಜೈವಿಕ ಪೀಡೆನಾಶಕಗಳ ಉತ್ಪಾದನೆ, ಅಡಿಕೆ ಉಪ ಉತ್ಪನ್ನಗಳ ತಯಾರಿಕೆ, ಅಡಿಕೆ ನ್ಯಾನೋ ಉತ್ಪನ್ನ, ಅನಾನಸ್ ಸಂಸ್ಕರಣೆ ಇನ್ಕ್ಯುಬೇಶನ್ ಸೌಲಭ್ಯ, ಸಾಂಬಾರು ಪದಾರ್ಥ ಸಂಸ್ಕರಣೆ, ಶೇಂಗಾ ಸಂಸ್ಕರಣೆ, ಮೌಲ್ಯವರ್ಧನೆ ಕುರಿತ ನವೋದ್ಯಮ ಸೌಲಭ್ಯ ಆರಂಭಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ|| ಹನುಮಂತಪ್ಪ, ಡಾ|| ಆರ್.ಲೋಕೇಶ್, ಡಾ|| ಮೃತ್ಯುಂಜಯವಾಲಿ, ಡಾ|| ದಿನೇಶ್ ಮುಂತಾದವರು ಉಪಸ್ಥಿತರಿದ್ದರು.