ಶಿವಮೊಗ್ಗ, ಮಾರ್ಚ್ 01 : ನೌಕರರು ತಮ್ಮ ಕಾರ್ಯಕ್ಷೇತ್ರದಲ್ಲಿ ಸುಲಭ-ಸರಳವಾಗಿ ಶಾಂತಚಿತ್ತರಾಗಿ ಕಾರ್ಯನಿರ್ವಹಿಸಲು ನಕಾರಾತ್ಮಕ ಭಾವನೆಯಿಂದ ಹೊರಬಂದು ಸಕಾರಾತ್ಮಕ ಗುಣಗಳನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಸರ್ಕಾರಿ ನೌಕರರಿಗೆ ಕರೆ ನೀಡಿದರು.
ಅವರು ಇಂದು ರಾಜ್ಯ ಸರ್ಕಾರಿ ನೌಕರರ ಸಂಘವು ಜಿಲ್ಲಾಡಳಿತದ ಸಭಾಂಗಣದಲ್ಲಿ ನೌಕರರಿಗಾಗಿ ಏರ್ಪಡಿಸಲಾಗಿದ್ದ ಮಾಹಿತಿ ಹಕ್ಕು ಕಾಯಿದೆ, ಆದಾಯ ತೆರಿಗೆ ಸಲ್ಲಿಸುವ ಮಾಹಿತಿ ಹಾಗೂ ಖಜಾನೆ-2 ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಚೇರಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಬರುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇಮಾಡಬೇಕು. ವಿಳಂಬವಾದಲ್ಲಿ ಅರ್ಜಿದಾರರಿಗೆ ನೌಕರರ ಕರ್ತವ್ಯದ ಬಗ್ಗೆ ಆಕ್ರೋಶ ಉಂಟಾಗಿ, ನಿಮ್ಮ ಮೇಲಿನ ಅನುಮಾನ ಉಲ್ಬಣಗೊಂಡು ಸಮಸ್ಯೆಯಾಗಿ ಸೃಷ್ಠಿಯಾಗಲಿದೆ ಎಂದ ಅವರು ಮಾಡುವ ಕೆಲಸವನ್ನು ನಿರ್ಲಕ್ಷಿಸದೆ ಶ್ರದ್ಧೆಯಿಂದ ಮಾಡುವಂತೆ ಅವರು ಸಲಹೆ ನೀಡಿದರು.
ಮಾಹಿತಿ ಹಕ್ಕು ಅಧಿನಿಯಮ ಕಾಯಿದೆ ಜಾರಿಯಾಗಿ ದಶಕಗಳೇ ಉರುಳಿದರೂ ನೌಕರರಲ್ಲಿ ಈಕುರಿತಾದ ಸಮಸ್ಯೆ, ಗೊಂದಲಗಳಿಗೆ ಇನ್ನೂ ಪರಿಹಾರವಾಗಿಲ್ಲ. ನಮ್ಮಲ್ಲಿನ ನಕಾರಾತ್ಮಕ ಧೋರಣೆ ಈ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೆ ನಮ್ಮಷ್ಟಕ್ಕೆ ನಾವೇ ಸಮಸ್ಯೆಯನ್ನು ಸೃಷ್ಠಿಸಿಕೊಳ್ಳುತ್ತಿದ್ದೇವೆ ಎಂದವರು ನುಡಿದರು.
ಮಾಹಿತಿ ಹಕ್ಕು ಅಧಿನಿಯಮವನ್ನು ಅರ್ಥೈಸಿಕೊಳ್ಳುವುದು ಸುಲಭ. ಅರ್ಜಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರ ಕೊಡುವ ನಿಟ್ಟಿನಲ್ಲಿ ಯೋಚಿಸದೇ ಉಳಿದೆಲ್ಲ ವಿಚಾರಗಳ ಬಗ್ಗೆ ತರ್ಕಕ್ಕೆ ಇಳಿದು ಬಿಡುತ್ತಿದ್ದೇವೆ. ಅರ್ಜಿ ಸ್ವೀಕರಿಸಿದ ನಂತರ ಕ್ರಮ ಕೈಗೊಳ್ಳುವ ವಿಷಯಗಳ ಬಗೆಗೆ ಮಾತ್ರವೇ ಅಧಿಕಾರಿಗಳು ಗಮನಹರಿಸಬೇಕು. ಸಕಾಲಿಕವಾಗಿ ಅಧಿಕಾರಿಗಳು ಅರ್ಜಿಗಳನ್ನು ವಿಲೇ ಮಾಡದಿರುವುದರಿಂದ ಸಾರ್ವಜನಿಕರು ಅಧಿಕಾರಿ-ನೌಕರರ ಕರ್ತವ್ಯನಿಷ್ಠೆಯನ್ನು ಪ್ರಶ್ನಿಸುವಂತಾಗಿದೆ ಎಂದವರು ನುಡಿದರು.
ಅರ್ಜಿ ಸ್ವೀಕರಿಸಿದ ನಂತರ ತಮ್ಮದಲ್ಲದಾಗಿದ್ದರೆ, ಅದನ್ನು ನಿಯಮಾನುಸಾರ ಸಂಬಂಧಿಸಿದವರಿಗೆ ವರ್ಗಾಯಿಸಿ. ಕಚೇರಿಯ ಕಡತಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ. ಆಡಳಿತದಲ್ಲಿ ಸುಧಾರಣೆ ತರಲು ಪ್ರಯತ್ನಿಸಿ. ತಪ್ಪಿದಲ್ಲಿ ನೌಕರರು ದೈಹಿಕ ಮತ್ತು ಮಾನಸಿಕ ಒತ್ತಡಗಳಿಂದ ಬಳಲುವಂತಾಗಲಿದೆ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಅವರು ಮಾತನಾಡಿ, ನೌಕರರು ತಮ್ಮ ದೈನಂದಿನ ಕೆಲಸಗಳ ಒತ್ತಡದಿಂದಾಗಿ ತಮ್ಮ ಖಾಸಗಿ ಬದುಕು ಮತ್ತು ಕೆಲಸಗಳ ಬಗ್ಗೆ ನಿರ್ಲಕ್ಷ ಹೊಂದಿದ್ದಾರೆ. ಇಂದು ಮಾಹಿತಿಹಕ್ಕು ಅಧಿನಿಯಮಗಳ ಬಗ್ಗೆ ಎಲ್ಲ ಹಂತದ ಅಧಿಕಾರಿಗಳು ತಿಳಿದಿರುವುದು ಅತ್ಯಗತ್ಯವಾಗಿದೆ ಎಂದರು.
ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದಿರುವುದರಿಂದ ಭಷ್ಟಾಚಾರ ಮುಂತಾದ ನ್ಯೂನತೆಗಳು ಕಂಡುಬರುತ್ತಿವೆ ಎಂಬ ಕಾರಣದಿಂದಾಗಿ ಮಾಹಿತಿ ಹಕ್ಕು ಕಾಯಿದೆಯನ್ನು ಅನುಷ್ಟಾನಗೊಳಿಸಲಾಗಿದೆ. ಈ ಕಾಯಿದೆಯ ಬಗ್ಗೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುವ ಯಾವುದೇ ನೌಕರರು ಭಯ, ಆತಂಕಪಡುವ ಅಗತ್ಯವಿಲ್ಲ ಎಂದವರು ನುಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತ ಟಿ.ರಾಮಾನಾಯ್ಕ್ ಅವರು ಮಾತನಾಡಿ, ಯಾವುದೇ ದೇಶದ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯುವಂತಾಗಲು ಕಾನೂನು, ನಿಯಮಗಳು ಅಗತ್ಯವಾಗಿವೆ ಎಂದ ಅವರು, ಸಂವಿಧಾನಾತ್ಮಕವಾಗಿ ಹಕ್ಕು ಮತ್ತು ಕರ್ತವ್ಯಗಳಿರುವಂತೆ ರಕ್ಷಣೆಯೂ ಇದೆ ಎಂದರು.
ನೌಕರರು ನಿರ್ವಹಿಸುವ ಕಾನೂನು ಬದ್ಧ ಕಾರ್ಯಗಳಿಗೆ ಆತಂಕ ಭಯ ಬೇಡ ಎಂದ ಅವರು, ಉದ್ಯೋ ಖಾತ್ರಿ, ಆರ್.ಟಿ.ಇ. ಮತ್ತು ಮಾಹಿತಿಹಕ್ಕು ಕಾಯ್ದೆಯಂತಹ ಕಾನೂನುಗಳು ಇತ್ತೀಚಿನ ಕೆಲವೇ ವರ್ಷಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿವೆ ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ನೌಕರರ ಸಂಘವು ಕಾಲಕಾಲಕ್ಕೆ ನೌಕರರ ಅಗತ್ಯಗಳಿಗೆ ಸಹಕಾರಿಯಾಗುವ ತರಬೇತಿ, ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಸೇವಾ ತೆರಿಗೆ, ಆದಾಯ ತೆರಿಗೆ, ಆಡಳಿತದಲ್ಲಿ ಸುವ್ಯವಸ್ಥೆ ಕಂಡುಕೊಳ್ಳಲು ಮಾಹಿತಿಹಕ್ಕು ಅಧಿನಿಯಮ ಮತ್ತು ಖಜಾನೆ ಇಲಾಖೆಯು ಇತ್ತೀಚಿಗೆ ಜಾರಿಗೆ ತಂದಿರುವ ಕೆ-2ತಂತ್ರಾಂಶದ ಬಗ್ಗೆ ಮಾಹಿತಿ ನೀಡಬೇಕಾಗಿರುವುದನ್ನು ಮನವರಿಕೆ ಮಾಡಿಕೊಂಡಿದ್ದು ಅದರ ವ್ಯವಸ್ಥಿತ ಅನುಷ್ಠಾನಕ್ಕಾಗಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಖಜಾನೆ-2, ಆದಾಯ ತೆರಿಗೆ ಸಲ್ಲಿಕೆ ವಿಧಾನಗಳ ಕುರಿತು ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು. ಜಿಲ್ಲೆಯ ವಿವಿಧ ಇಲಾಖೆಗಳ ಅಸಂಖ್ಯಾತ ನೌಕರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ಗೌರವಾಧ್ಯಕ್ಷ ಎಸ್.ವೈ.ರಮೇಶ್, ಕೋಶಾಧ್ಯಕ್ಷ ಐ.ಪಿ.ಶಾಂತರಾಜ್, ಸಿದ್ಧಬಸಪ್ಪ, ಎಂ.ರವಿ, ಸತೀಶ್, ಅಶೋಕ ಮುಂತಾದವರು ಉಪಸ್ಥಿತರಿದ್ದರು.

error: Content is protected !!