ಶಿವಮೊಗ್ಗ, ಜುಲೈ 25 : ಯಾವುದೇ ಒಂದು ದೇಶದ ಉನ್ನತಿ, ಆರ್ಥಿಕ ಪ್ರಗತಿ ಹಾಗೂ ಸರ್ವಾಂಗೀಣ ವಿಕಾಸ ಆ ದೇಶದ ಆದಾಯ ತೆರಿಗೆಯನ್ನು ಅವಲಂಬಿಸಿದೆ ಎಂದು ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಎಸ್.ಎನ್.ಸುರೇಶ್ ಅವರು ಹೇಳಿದರು.
ಅವರು ನಿನ್ನೆ ನಗರದ ಗೋಪಾಳ ಬಡಾವಣೆಯಲ್ಲಿರುವ ಆದಾಯ ತೆರಿಗೆ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾ ಚಾರ್ಟೆಡ್ ಅಕೌಂಟೆಂಟ್ಸ್ ಅಸೋಷಿಯೇಶನ್, ಟ್ಯಾಕ್ಸ್ ಬಾರ್ ಅಸೋಷಿಯೇಶನ್, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಘ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿದ್ದ ಆದಾಯ ತೆರಿಗೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂಗ್ರಹವಾಗುವ ತೆರಿಗೆ ದೇಶದ ಶಕ್ತಿ-ಸಾಮಥ್ರ್ಯವನ್ನು ಹೆಚ್ಚಿಸಲಿದೆ. ಅಲ್ಲದೇ ಜಾಗತಿಕ ಮಟ್ಟದಲ್ಲಿ ತಲೆ ಎತ್ತಿ ನಿಲ್ಲಲು ಇದು ಸಹಕಾರಿಯಾಗಿದೆ ಎಂದವರು ನುಡಿದರು.
ದೇಶದಲ್ಲಿ ವಾಸಿಸುವ ಪ್ರತಿ ಪ್ರಜೆಯೂ ತನ್ನ ಆದಾಯವನ್ನು ಪ್ರಾಮಾಣಿಕವಾಗಿ ಘೋಷಿಸಿಕೊಂಡು ನಿಯಮಾನುಸಾರ ತೆರಿಗೆ ಸಲ್ಲಿಸುವ ಮೂಲಕ ಸಹಕರಿಸಬೇಕಲ್ಲದೇ ತನ್ನ ವೈಯಕ್ತಿಕ ಹಾಗೂ ನೆಮ್ಮದಿಯ ಬದುಕಿಗೆ ಮುನ್ನುಡಿಯಾಗಲಿದೆ ಎಂದ ಅವರು, ಆರ್ಥಿಕ ವ್ಯವಸ್ಥೆಯಲ್ಲಿ ಸ್ವಾಯತ್ತೆ ಸಾಧಿಸಲು ಹಾಗೂ ತ್ವರಿತಗತಿಯ ವಿಕಾಸ ಹೊಂದಲು ದೇಶ ತೆರಿಗೆಯನ್ನೆ ಪ್ರಮುಖವಾಗಿ ಅವಲಂಬಿಸಿದೆ ಎಂದವರು ನುಡಿದರು.
ದೇಶದ ಜನಸಂಖ್ಯೆಯನ್ನು ಅವಲೋಕಿಸಿದಾಗ ನಿರೀಕ್ಷೆಯ ಪ್ರಮಾಣದ ಜನ ತೆರಿಗೆ ವ್ಯವಸ್ಥೆಯಿಂದ ದೂರ ಉಳಿದಿದ್ದಾರೆ. ನ್ಯಾಯೋಚಿತವಾಗಿ ಅರ್ಹರೆಲ್ಲರೂ ತೆರಿಗೆ ಪಾವತಿಗೆ ಮುಂದಾಗಬೇಕು. ಅದಕ್ಕಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಧುಸೂದನ ಐತಾಳ್ ಅವರು ಮಾತನಾಡಿ, ದೇಶದ ನಾಗರೀಕರು ತಮ್ಮ ಆದಾಯವನ್ನು ಘೋಷಿಸಿಕೊಂಡು ತೆರಿಗೆ ಕಟ್ಟಲು ಸಾರ್ವಜನಿಕರಿಗೆ ಮಾಹಿತಿಯ ಕೊರತೆ ಇದೆ. ಇಲಾಖೆಯು ಸಾರ್ವಜನಿಕರು, ಉದ್ಯಮಿಗಳು ಹಾಗೂ ವ್ಯವಹಾರಸ್ಥರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಾದ ತುರ್ತು ಅಗತ್ಯವಿದೆ ಎಂದವರು ನುಡಿದರು.
ಈ ಕುರಿತಂತೆ ಹಿಂದೆಯೂ ಇಲಾಖೆಯ ಅಧಿಕಾರಿಗಳಿಗೆ ಲಿಖಿತವಾಗಿ ಹಾಗೂ ಖುದ್ಧಾಗಿಯೂ ಮನವಿ ಮಾಡಲಾಗಿತ್ತು. ಈ ರೀತಿಯ ಜನಜಾಗೃತಿ ಕಾರ್ಯಕ್ರಮಗಳು ಜನರಲ್ಲಿ ಅರಿವು ಮೂಡಿಸಲಿವೆ. ಅಲ್ಲದೇ ಅವರ ಸುಖ ಜೀವನಕ್ಕೆ ಸಹಕಾರಿಯಾಗಲಿದೆ. ಇಲಾಖೆಯು ಕೈಗೊಳ್ಳುವ ನಿರ್ಣಯಗಳಿಗೆ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರ ದೊರೆಯಲಿದೆ ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ತೆರಿಗೆ ಪಾವತಿಸುವವರನ್ನು ಗುರುತಿಸಿ ಗೌರವಿಸುವ ಕಾರ್ಯವೂ ಇಲಾಖೆ ವತಿಯಿಂದ ನಡೆಯುವಂತಾಗಬೇಕು. ಆ ಮೂಲಕವೂ ಜನರನ್ನು ಇಲಾಖೆಯ ಸಮೀಪ ಕರೆತರುವ ಪರೋಕ್ಷ ಪ್ರಯತ್ನವಾಗಲಿದೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಮಾನಸಿಕ ತಜ್ಞೆ ಡಾ||ರಜಿನಿ ಪೈ, ಶಿವಮೊಗ್ಗ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಸಿ.ಆರ್.ವಸಂತಕುಮಾರ್, ಟ್ಯಾಕ್ಸ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಜಿ.ಗೋಪಾಲ್, ಆದಾಯ ತೆರಿಗೆ ಅಧಿಕಾರಿ ಪ್ರಭಾ, ಕೆ.ಮುರಳಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

error: Content is protected !!