ಎಲ್ಲರೂ ಸರ್ಕಾರಿ ಉದ್ಯೋಗವನ್ನೇ ಪಡೆಯಲು ಸಾಧ್ಯವಿಲ್ಲ. ಯುವ ಜನರು ಕೇವಲ ಸರ್ಕಾರಿ ಹಾಗೂ ಕಂಪನಿಗಳ ಕೆಲಸಗಳಿಗೆ ಆಸಕ್ತಿ ತೋರದೆ ತಮ್ಮಲ್ಲಿರುವ ವಿಶಿಷ್ಟ ಕೌಶಲ್ಯಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಈ ಮೂಲಕ ದೇಶದ ಅಭಿವೃದ್ಧಿಯಲ್ಲಿ ಕೌಶಲ್ಯ ಹಾಗೂ ಸ್ವಯಂ ಉದ್ಯೋಗದ ಪಾತ್ರವನ್ನು ಸಾರಬೇಕು ಎಂದು ಉಪಮೇಯರ್ ಎಸ್.ಎನ್ ಚೆನ್ನಬಸಪ್ಪ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ, ಮಹನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಕೌಶಲ್ಯಾಭಿವೃದ್ಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೌಶಲ್ಯ ದಿನಾಚರಣೆ ಆಚರಿಸಿ ಮುಗಿಸುವುದಾಗದೆ, ಇಲ್ಲಿಂದಲೇ ನೂತನ ಪ್ರಯೋಗಗಳ ಚಾಲನೆಗೆ ಯುವಕರಿಗೆ ಪ್ರೇರಣೆಯಾಗುವಂತಹ ಕಾರ್ಯಕ್ರಮವಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಪ್ರೋತ್ಸಾಹಿಸಬೇಕು. ಜೊತೆಯಲ್ಲಿ ವಿದ್ಯಾರ್ಥಿಗಳು ಪೂರಕ ಆಸಕ್ತಿ ಹಾಗೂ ಬೆಳೆಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಅವರು ಹೇಳಿದರು.
ಇಂದಿನ ಯುವ ಜನರ ಕೌಶಲ್ಯದ ಆಧಾರದ ಮೇಲೆ ದೇಶದ ಭವಿಷ್ಯ ನಿಂತಿದೆ. ಹಾಗೂ ವಿಶ್ವವೇ ನಮ್ಮ ದೇಶದ ಯುವಕರ ಕೌಶಲ್ಯದ ಮೇಲೆ ಕುತೂಹಲವನ್ನಿರಿಸಿದೆ. ಇದನ್ನು ಸಾಧಿಸಿ ತೋರಿಸುವತ್ತ ನಮ್ಮ ಯುವಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶೇಷವಾದ ಕೌಶಲ್ಯಗಳಿರುತ್ತವೆ. ಅವುಗಳನ್ನು ಬಳಸಿಕೊಂಡು ಬೆಳೆಯುವುದು ವ್ಯಕ್ತಿಯ ಬೌದ್ಧಿಕ ಶಕ್ತಿಯ ಮೇಲೆ ನಿಂತಿರುತ್ತದೆ. ಸ್ವಲ್ಪ ವಿಭಿನ್ನವಾಗಿ ಆಲೋಚಿಸಿದರೆ ಅಸಾಧ್ಯ ಏನಿಸಿದ್ದು ಸಹ ಸಾಧ್ಯವಾಗಲಿದೆ ಎಂದರು.
ಪ್ರಪಂಚದ ಯಾವುದೇ ಮೊದಲ ಸಂಶೋಧನೆಗಳು ಸಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಾದದ್ದಲ್ಲ. ಸಾಮಾನ್ಯರ ಅಸಾಮಾನ್ಯ ಆಲೋಚನೆಗಳಿಂದ ಮಾತ್ರ ಸಾಧ್ಯವಾಗಿದ್ದು. ಶ್ರದ್ಧೆ, ಶ್ರಮ, ಸಮಯಪ್ರಜ್ಞೆ ಹಾಗೂ ಪ್ರಯತ್ನ ವ್ಯಕ್ತಿಯನ್ನು ಸಾಮಾನ್ಯನಿಂದ ಅಸಾಮಾನ್ಯನನ್ನಾಗಿ ರೂಪಿಸುತ್ತದೆ ಎಂದು ಅವರು ಹೇಳಿದರು.
ನಗರದ ವಿವಿಧ ಕಾಲೇಜುಗಳಲ್ಲಿ ಸ್ವಯಂ ಉದ್ಯೋಗ ಕ್ಲಬ್ಗಳನ್ನು ರಚಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ಸ್ವಯಂ ಉದ್ಯೋಗದ ಕುರಿತಾದ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಯಾವುದೇ ಕ್ಷೇತ್ರದ ಸಮಸ್ಯೆಗಳ ಕುರಿತಾಗಿ ಆಲೋಚಿಸಿ ಅದನ್ನು ಪರಿಹರಿಸುವ ಆಲೋಚನೆಯೆ ನಮ್ಮನ್ನು ಸಂಶೋಧನೆಗೆ ತಳ್ಳುತ್ತದೆ. ಈ ಆಲೋಚನೆ ಹಾಗೂ ಕುತುಹಲವನ್ನು ನಾವು ಯಾವುದೇ ಕ್ಷೇತ್ರದಲ್ಲಾದರು ಪ್ರಯೋಗಿಸಿದಾಗ ಯಶಸ್ಸು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ದೇಶದಲ್ಲಿ ಕೃಷಿಯ ಕುರಿತಾಗಿ ಆಸಕ್ತಿ ಕ್ಷೀಣಿಸುತ್ತಿದ್ದು ಮುಂದೊಂದು ದಿನ ಕೃಷಿ ಕ್ಷೇತ್ರ ಮಹತ್ತರವಾದ ಕ್ಷೇತ್ರವಾಗಿ ಬೆಳೆಯಲಿದೆ. ಈ ಕ್ಷೇತ್ರದಲ್ಲಿ ನಡೆಸುವ ಸಂಶೋಧನೆಗಳು ವ್ಯಕ್ತಿಯನ್ನು ತೃಪ್ತ ಹಾಗೂ ಶ್ರೀಮಂತನನ್ನಾಗಿಸುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಶಿವರಾಮೇಗೌಡ, ಜಿಟಿಟಿಸಿಯ ಪ್ರಾಂಶುಪಾಲ ಸುರೇಶ್, ವಾಣಿಜ್ಯ ಮಂಡಳಿ ಅಧ್ಯಕ್ಷ್ಯ ವಾಸುದೇವ್ ಹಾಗೂ ಮುಂತಾದ ಗಣ್ಯರು ಹಾಜರಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯ್ಕುಮಾರ್ ಅಧ್ಯಕ್ಬತೆ ವಹಿಸಿದ್ದರು. ಯುವ ಉದ್ಯಮಿ ಮಂಡಗದ್ದೆ ನಿವೇದನ್. ಎಂ.ಪಿ ಉಪನ್ಯಾಸ ನೀಡಿದರು.