ಶಿವಮೊಗ್ಗ : ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಸೋಮವಾರ ಮಲೆನಾಡಿನ ವಿಶಿಷ್ಟ ಕಲೆಯಾದ ಅಂಟಿಗೆ ಪಿಂಟಿಗೆಯ ಜ್ಯೋತಿಯು ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ತೆರಳಿ ದೀಪ ನೀಡಿ ಶುಭ ಹಾರೈಸಿತು.

ಆದಿಚುಂಚನಗಿರಿಯ ಕಾಲಭೈರವೇಶ್ವರ ದೇವಸ್ಥಾನದಿಂದ‌ ಸಂಜೆ ಹೊರಟ ಅಂಟಿಕೆ ಪಿಂಟಿಕೆ ಎರಡು ತಂಡಗಳನ್ನು ವಿವಿಧ ಬಡಾವಣೆಗಳಲ್ಲಿ ಸಂಭ್ರಮದಿಂದ ಬರಮಾಡಿಕೊಂಡರು. ನಗರದ ಸುಮಾರು 80 ಕ್ಕು ಹೆಚ್ಚು ಮೆನೆಗಳಿಗೆ ಅಂಟಿಕೆ ಪಿಂಟಿಕೆ ತಂಡ ತೆರಳಿತು.

‘ದೀಪೋಳಿ ಎನ್ನಿರಣ್ಣಾ ..ಈ ಊರ ದೇವ್ರಿಗೆ’ , ‘ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ನೆಲಿ ಕಣ್ನಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ’ ಎನ್ನುತ್ತಾ ಶುಭಹಾರೈಸಿದರು. ಅಂಟಿಕೆ ಪಿಂಟಿಗೆ ತಂಡ ತರುವ ಜ್ಯೋತಿ ಮನೆ ಪ್ರವೇಶಿಸಿದಾಗ ಮನೆಯವರು ದೀಪಕ್ಕೆ ಎಣ್ಣೆ ಎರೆದು ಪೂಜೆ ಸಲ್ಲಿಸುತ್ತಾರೆ. ಹೀಗೆ ದೀಪ ಬೆಳಗಿದ ಮನೆಯಲ್ಲಿ ಮುಂದಿನ ವರ್ಷದವರೆಗೆ ಯಾವುದೇ ಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆಯಿದೆ.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ, ಪದಾಧಿಕಾರಿಗಳಾದ ಎಂ.ಎಂ.ಸ್ವಾಮಿ, ಭೈರಾಪುರ ಶಿವಪ್ಪಮೇಷ್ಟು, ದೇವರಾಜ್, ಬಿ.ಟಿ.ಅಂಬಿಕಾ, ಮಹಾದೇವಿ, ಪಿ.ಕೆ.ಸತೀಶ್, ಭಾರತಿ ರಾಮಕೃಷ್ಣ, ಶ್ರೀನಿವಾಸ ನಗಲಾಪುರ, ಸುಶೀಲ‌ ಷಣ್ಮುಗಂ, ಸಿ.ಎಂ.ನೃಪತುಂಗ, ಲಲಿತಮ್ಮ, ವಾಸಪ್ಪಗೌಡ, ಯೋಗೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!