Newsದಮನಿತ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಗೆ ನೆರವು: ಎಸ್ಪಿ ಕೆ.ಎಂ.ಶಾಂತರಾಜು

ಶಿವಮೊಗ್ಗ,ಡಿಸೆಂಬರ್-2: ದಮನಿತ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನೀಡುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸಲು ಹಲವಾರು ಯೋಜನೆಗಳಿದ್ದು, ಅದರ ಸದುಪಯೋಗಪಡೆದುಕೊಳ್ಳಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಅವರು ಹೇಳಿದರು.
ದಮನಿತ ಮಹಿಳೆಯರಿಗೆ ಲಭ್ಯವಿರುವ ಸರ್ಕಾರಿ ಸೌಲಭ್ಯಗಳ ಕುರಿತು ಸೋಮವಾರ ಐಎಂಎ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಮನಿತ ಮಹಿಳೆಯರು ನೆಮ್ಮದಿಯ ಬದುಕನ್ನು ಕಟ್ಟಲು ಪ್ರೋತ್ಸಾಹ ಧನ ಹಾಗೂ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ, ವಸತಿ ಸೌಲಭ್ಯ ಸೇರಿದಂತೆ ಹಲವಾರು ಸವಲತ್ತುಗಳನ್ನು ಒದಗಿಸಿದೆ. ದಮನಿತ ಮಹಿಳೆಯರು ಹಾಗೂ ತೃತೀಯ ಲಿಂಗಿಗಳು ಸ್ವಾವಲಂಬನೆಯಿಂದ ಬದುಕಲು ಎಲ್ಲರೂ ನೆರವು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.
ದಮನಿತ ಹಾಗೂ ಶೋಷಿತ ಮಹಿಳೆಯರಿಗೆ ಎಲ್ಲಾ ರೀತಿಯ ಕಾನೂನು ನೆರವನ್ನು ಪೊಲೀಸ್ ಇಲಾಖೆ ಮೂಲಕ ಒದಗಿಸಲಾಗುವುದು. ಅವರ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಕಾರ್ಯದರ್ಶಿ ಅಕ್ಷತಾ ಕೆ.ಸಿ ಅವರು ಲೈಂಗಿಕ ಅಲ್ಪಸಂಖ್ಯಾತರಿಗೆ ಇರುವ ಸರ್ಕಾರಿ ಸೌಲಭ್ಯಗಳು ಹಾಗೂ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಮಾಹಿತಿ ನೀಡಿದರು. ದಮನಿತ ಮಹಿಳೆಯರಿಗೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 25ಸಾವಿರ ರೂ. ಸಹಾಯ ಧನ ಹಾಗೂ 25ಸಾವಿರ ರೂ. ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಮಾನವ ಹಕ್ಕುಗಳು ಎಂಬುವುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಕಾನೂನು ಸೇವಾ ಪ್ರಾಧಿಕಾರ ಮತ್ತಿತರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶ ಸರಸ್ವತಿ ಕೆ.ಎನ್, ನ್ಯಾಯವಾದಿ ಡಿ.ಎನ್.ಹಾಲಸಿದ್ದಪ್ಪ, ವಿಕಲ ಚೇತನ ಕಲ್ಯಾಣ ಇಲಾಖೆ ಅಧಿಕಾರಿ ಶಿಲ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!