ಶಿರಾಳಕೊಪ್ಪ:
ಮಕ್ಕಳು ಹಾಗೂ ಗ್ರಾಮಸ್ಥರು ಯುನೈಟೆಡ್ ಇಂಡಿಯಾ ಸಂಸ್ಥೆ ನೀಡುವ ಸೌಲಭ್ಯ ಬಳಸಿಕೊಂಡು ಸಾಧನೆ ಮಾಡಿದಾಗ ತಮ್ಮ ಕಾರ್ಯ ಸಾರ್ಥಕವಾಗುತ್ತದೆ ಎಂದೂ ಯುನೈಟೆಡ್ ಇಂಡಿಯಾ ಸಂಸ್ಥೆಯ ವಿಭಾಗೀಯ ಪ್ರಭಂಧಕರಾದ ಸುಧಾಮಣಿ ಹೇಳಿದರು.
ಹತ್ತಿರದ ತಾಳಗುಂದ ಗ್ರಾಮದಲ್ಲಿ ಸೋಮವಾರ ಯುನೈಟೆಡ್ ಇಂಡಿಯಾ ಸಂಸ್ಥೆಯ ವಾರ್ಷಿಕ ದತ್ತು ಗ್ರಾಮ ಯೋಜನೆಯ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು.
ಕನ್ನಡ ನಾಡಿನ ಪ್ರಾಚೀನ ಪರಂಪರೆ ಹಾಗೂ 2 ಸಾವಿರ ವರ್ಷಗಳ ಚರಿತ್ರೆಯನ್ನು ತನ್ನ ಒಡಲಲ್ಲಿಯಿಟ್ಟು ಕೊಂಡಿರುವ ತಾಳಗುಂದ ಗ್ರಾಮದ ಜನರ ಬದುಕು ಹಸನಾಗಬೇಕು. ಈ ಧ್ಯೇಯದೊಂದಿಗೆ ತಮ್ಮ ಸಂಸ್ಥೆ ತಾಳಗುಂದ ಗ್ರಾಮವನ್ನು ದತ್ತು ಪಡೆದಿದೆ. ಈ ಯೋಜನೆಯ ಅಡಿಯಲ್ಲಿ ಸುಮಾರು ರೂ 25 ಲಕ್ಷ ವೆಚ್ಚದ ವಿವಿಧ ಕಾರ್ಯಗಳನ್ನು ಗ್ರಾಮದ ಅಭಿವೃದ್ಧಿಗೆ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಶಾಲೆಯನ್ನು ಮೇಲ್ರ್ದಜೆಗೆ ಏರಿಸುವ ಮೂಲಕ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಹಂಬಲಹೊಂದಿದ್ದು, ಯುವಕ,ಯುವತಿಯರನ್ನು ಸ್ವಾವಲಂಭಿಗಳನ್ನಾಗಿ ಮಾಡಲು ಕಂಪ್ಯೂಟರ್ ಕೌಶಲ್ಯ ತರಬೇತಿ ಕೇಂದ್ರ, ಹೊಲಿಗೆ ತರಬೇತಿ ಕೇಂದ್ರ ಸ್ಥಾಪಿಸಿ ಉಚಿತವಾಗಿ ತರಬೇತಿ ನೀಡುತ್ತಿರುವುದಾಗಿ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ||ಪ್ರಭು ಸಾಹುಕಾರ್ ಮಾತನಾಡಿ, ಎಲ್ಲಾ ಸಂಸ್ಥೆಗಳು ಕೂಡ ಸಿ ಎಸ್ ಆರ್ ನಿಧಿಯಲ್ಲಿ ಸಮಾಜ ಸೇವೆ ಮಾಡುತ್ತಿವೆ, ಆದರೆ, ತಳಮಟ್ಟದ ಜನಸಾಮಾನ್ಯರಿಗೆ ಯೋಜನೆಯ ಫಲ ತಲುಪುವುದು ಅಪರೂಪವಾಗಿದೆ. ಇಂತಹ ಕಾಲಘಟ್ಟದಲ್ಲಿ ಯುನೈಟೆಡ್ ಇಂಡಿಯಾ ಸಂಸ್ಥೆಯ ಅಧಿಕಾರಿಗಳು ನೈಜ ಕಾಳಜಿಯಿಂದ ಈ ಗ್ರಾಮ ಆಯ್ಕೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.
ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಆನಂದಪ್ಪ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್ ಮಾತನಾಡಿ, ಭಾರತ ದೇಶದಲ್ಲಿಯೆ ದೊಡ್ಡದಾದ ಯುನೈಟೆಡ್ ಇಂಡಿಯಾ ಸಂಸ್ಥೆ ತಾಳಗುಂದ ಗ್ರಾಮವನ್ನು ಆಯ್ಕೆ ಮಾಡಿರುವುದೇ ತಮ್ಮೆಲ್ಲರ ಹೆಮ್ಮೆಯಾಗಿದ್ದು.ಸಂಸ್ಥೆ ನೀಡುವ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ತರಬೇತಿ ಪಡೆಯುವ ಯುವಕ,ಯುವತಿಯರಿಗೆ ಉದ್ಯೋಗ ಕೊಡಿಸುವ ಕಾರ್ಯವನ್ನು ಮಾಡುವುದಾಗಿ ಭರವಸೆ ನೀಡಿದರು.
ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿ ಪ್ರತಿಷ್ಠಾನದ ಅಧ್ಯಕ್ಷ ಎಂ.ನವೀನ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು.
ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಕುಡಿಯುವ ನೀರಿಗಾಗಿ 3 ಕೊಳವಿ ಬಾವಿಗಳನ್ನು ಕೊರಸಲಾಯಿತು.
ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ಯುನೈಟೆಡ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಅಭಿವೃದ್ಧಿ ಅಧಿಕಾರಿಗಾಳದ ಸತೀಶ್, ಸಾಗರದ ಕಲ್ಯಾಣ ಸುಂದರಂ, ರೈತ ಸಂಘದ ತಾಲ್ಲೂಕು ಸಂಚಾಲಕರು ನೀಲಕಂಠಪ್ಪ, ಗ್ರಾಮಭಿವೃದ್ಧಿ ಸಂಸ್ಥೆ ಗೌರವಾಧ್ಯಕ್ಷ ಗುಳೆಪ್ಪ, ನಿವೃತ್ತ ಮುಖ್ಯಶಿಕ್ಷಕ ಮಳೂರು ಬಸವರಾಜಪ್ಪ, ಪ್ರಭಾರ ಮುಖ್ಯಶಿಕ್ಷಕ ಉಮೇಶಯ್ಯ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಊರಿನ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.