ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು : ಡಾ.ನಾರಾಯಣಗೌಡ
ಶಿವಮೊಗ್ಗ ಏಪ್ರಿಲ್ 18: ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ನಿಯಮಿತವಾಗಿ ಆರೋಗ್ಯ ಮೇಳಗಳನ್ನು ಆಯೋಜಿಸಬೇಕು. ಅದರಲ್ಲೂ ತಮ್ಮ ಆರೋಗ್ಯ ವಿಷಯದಲ್ಲಿ ಹಿಂಜರಿಯುವ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂದು ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾಗಿದ್ದ ‘ತಾಲ್ಲೂಕು ಮಟ್ಟದ ಉಚಿತ ಆರೋಗ್ಯ ಮೇಳ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಗರ್ಭಕೋಶದ ಸಮಸ್ಯೆ ಬಗ್ಗೆ ವೈದ್ಯರಲ್ಲಿ ತೋರಿಸಿಕೊಳ್ಳಲು ಹಿಂಜರಿಯುತ್ತಾರೆ. ಮಂಡ್ಯದಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳ ಒಂದರಲ್ಲಿ 900 ಗರ್ಭಕೋಶದ ಸಮಸ್ಯೆಗಳು ವರದಿಯಾಗಿವೆ. ಆದ್ದರಿಂದ ಹೆಣ್ಣುಮಕ್ಕಳ ಗರ್ಭಕೋಶದ ಸಮಸ್ಯೆಗಳು ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಇಂತಹ ಮೇಳಗಳು ಮತ್ತು ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಹಾಗೂ ಎಲ್ಲೆಡೆ ಕಣ್ಣಿನ ದೃಷ್ಟಿ ಸಮಸ್ಯೆ ಹೆಚ್ಚಾಗಿದ್ದು, ಹೋಬಳಿ ಮಟ್ಟದಲ್ಲಿ ಈ ಸಮಸ್ಯೆಗಳ ತಪಾಸಣೆ ನಡೆಯಬೇಕು. ನಮ್ಮ ಪ್ರಧಾನಿಯವರು ಉತ್ತಮ ಆರೋಗ್ಯಕ್ಕೆ ಪೂರಕವಾಗಿರುವ ಯೋಗಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕ್ರೀಡಾ ವಲಯದಲ್ಲಿ, ಹಳ್ಳಿ ಹಳ್ಳಿಯಲ್ಲಿ ಯೋಗಾ ಕೇಂದ್ರ ತೆರೆಯುವ ಬಗ್ಗೆ ಚಿಂತಿಸಲಾಗುತ್ತಿದೆ.
ಕೋವಿಡ್ನಂತಹ ಸಂಕಷ್ಟ ಮತ್ತೊಮ್ಮೆ ಬರಬಾರದೆಂದು ನಮ್ಮ ಪ್ರಧಾನಿಯವರು ಮನೆ ಮನೆಗೆ ತೆರಳಿ ಲಸಿಕೆ ನೀಡುವಂತಹ ವ್ಯವಸ್ಥೆ ಮಾಡಿದ್ದಾರೆ. ಆರೋಗ್ಯ ಸೇವೆ ನೀಡುತ್ತಿರುವ ವೈದ್ಯರು, ಕಾರ್ಯಕರ್ತರು ರಾಜ್ಯಕ್ಕೆ ಗೌರವ ತರುವ ಕಾರ್ಯ ಮಾಡಿದ್ದಾರೆಂದು ಶ್ಲಾಘಿಸಿದ ಅವರು ಶಿವಮೊಗ್ಗ ಅಭಿವೃದ್ದಿ ಕಾರ್ಯಗಳಲ್ಲಿ ಹಾಗೂ ಕೋವಿಡ್ ಲಸಿಕಾಕರಣ ಮತ್ತು ಇತರ ಸೇವೆಗಳಲ್ಲಿ ಸಹ ಮೊದಲನೇ ಸ್ಥಾನದಲ್ಲಿದೆ ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ,ಆರೋಗ್ಯವಿದ್ದರೆ ಅಭಿವೃದ್ದಿ ಸಾಧ್ಯ, ಆದ್ದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಒಂದೇ ಸೂರಿನಡಿ ಎಲ್ಲ ರೀತಿಯ ಆರೋಗ್ಯ ಸೇವೆಗಳು ಲಭಿಸುವಂತಹ ಆರೋಗ್ಯ ಮೇಳಗಳನ್ನು ಭಾರತ ಸರ್ಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ದೇಶಾದ್ಯಂತ ಹಮ್ಮಿಕೊಂಡಿದ್ದು, ಸಾರ್ವಜನಿಕರು ಈ ಆರೋಗ್ಯ ಮೇಳವನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು. ವಿಶೇಷವಾಗಿ ಮಹಿಳೆಯರು ಆರೋಗ್ಯ ಸೇವೆ ಪಡೆಯಲು ಮುಂದೆ ಬರಬೇಕೆಂದರು.
ಕೋವಿಡ್ನಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಸ್ವಚ್ಚ ಮತ್ತು ಶಿಸ್ತಿನ ಬದುಕಿನ ನಡವಳಿಕೆಯನ್ನು ಎಂದಿಗೂ ಪಾಲಿಸಬೇಕು. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ನಡೆದುಕೊಳ್ಳಬೇಕು. ಕೆಲಸದ ಒತ್ತಡಗಳ ನಡುವೆಯೂ ಒಂದು ಗಂಟೆಯಾದರೂ ಯೋಗಾಭ್ಯಾಸ, ವ್ಯಾಯಾಮಗಳಿಗೆ ಮೀಸಲಿಡಬೇಕು.
ಪ್ರಕೃತಿದತ್ತವಾಗಿ ಬರುವಂತಹ ಸೋಂಕು, ಖಾಯಿಲೆಗಳನ್ನು ನಾವೆಲ್ಲ ಎದುರಿಸಲೇಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯನ್ನು 1450 ಹಾಸಿಗೆಗಳುಳ್ಳ ಸಾಮಥ್ರ್ಯಕ್ಕೆ ಉನ್ನತೀಕರಿಸಿರುವುದು ಹೆಮ್ಮೆಯ ವಿಷಯ. ಶಿಕಾರಿಪುರದಲ್ಲೂ 150 ರಿಂದ 400 ಹಾಸಿಗೆ ಸಾಮಥ್ರ್ಯಕ್ಕೆ ಆಸ್ಪತ್ರೆಯನ್ನು ಉನ್ನತೀಕರಿಸಲಾಗುತ್ತಿದೆ. ಅನುಪಾತದ ಪ್ರಕಾರ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲೇಬೇಕು.
ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣಕ್ಕಾಗಿ ರೂ.40 ಕೋಟಿ ಮಂಜೂರಾಗಿದೆ. ಇನ್ನೂ ರೂ.20 ಕೋಟಿ ಕೊರತೆ ಇದ್ದು, ಇದು ಮಂಜೂರಾದ ಕೂಡಲೇ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಬಹುದು. ಈ ಆಸ್ಪತ್ರೆ ಕಟ್ಟಡವನ್ನು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಅಥವಾ ಬೇರೆಡೆ ಜಾಗ ನೋಡಿ ಮಾಡಬೇಕೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಸಲಹೆಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ದಾಖಲೆ ದಿಕ್ಕಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಯಾಗುತ್ತಿದೆ. ಮೂಲಭೂತ ಸೌಕರ್ಯಗಳ ಜೊತೆಗೆ ಉತ್ತಮ ಸೇವೆ ಕೂಡ ಅಷ್ಟೇ ಮುಖ್ಯ. ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಎಲ್ಲರ ಸಹಕಾರ ಅಗತ್ಯ. ಆರೋಗ್ಯ ಕಾರ್ಯಕರ್ತರ ಸೇವೆಗೆ ನಾನು ಚಿರಋಣಿ. ಮುಂದೆಯೂ ಕೂಡ ಎಲ್ಲರೂ ಪರಿಶ್ರಮದಿಂದ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಪ್ರಯತ್ನಿಸುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು. ಮೆಗ್ಗಾನ್ ಆಸ್ಪತ್ರೆಯು ಉತ್ತಮ ಸೇವೆಯನ್ನು ಒದಗಿಸುತ್ತಿದ್ದು ಹೆಮ್ಮೆ ಪಡುವ ರೀತಿಯಲ್ಲಿ ಅಭಿವೃದ್ದಿಹೊಂದುತ್ತಿದೆ. ಸಚಿವರು, ಸಂಸದರು ಮತ್ತು ಶಾಸಕರ ಸಹಕಾರದಿಂದ ಉನ್ನತಿ ಹೊಂದುತ್ತಿದೆ.
185 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ ನಮ್ಮ ದೇಶ ಲಸಿಕಾಕರಣದಲ್ಲಿ ನಂ.1 ಸ್ಥಾನದಲ್ಲಿದ್ದು, ಆರೋಗ್ಯ ಕಾರ್ಡ್, ಕೋವಿಡ್ ಲಸಿಕಾಕರಣದಲ್ಲಿ ಮುಂಚೂಣಿಯಲ್ಲಿರುವ ನಮ್ಮ ಜಿಲ್ಲೆಯ ವೈದ್ಯರು, ಸಿಬ್ಬಂದಿಗಳ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದ ಅವರು ಈ ಆರೋಗ್ಯ ಮೇಳಗಳು ನಿರಂತರವಾಗಿ ನಡೆದು ಎಲ್ಲರಿಗೆ ಉಪಯುಕ್ತವಾಗಲಿ ಎಂದು ಆಶಿಸಿದರು.
ಸಿಮ್ಸ್ನ ನಿರ್ದೇಶಕ ಡಾ.ಸಿದ್ದಪ್ಪ ಸ್ವಾಗತಿಸಿದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ, ಡಿಹೆಚ್ಓ ಡಾ.ರಾಜೇಶ್ ಸುರಗಿಹಳ್ಳಿ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್, ಎಲ್ಲ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು ಹಾಜರಿದ್ದರು.