ಸಾಗರ: ತವರು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಮಾರಿಕಾಂಬಾ ವಿಗ್ರಹವನ್ನು ಮಂಗಳವಾರ ರಾತ್ರಿ ಅದ್ಧೂರಿಯಾದ ರಾಜಬೀದಿ ಉತ್ಸವದ ಮೂಲಕ ಗಂಡನ ಮನೆಗೆ ತರಲಾಯಿತು.
ಮಂಗಳವಾರ ರಾತ್ರಿ 10ಕ್ಕೆ ಮಹಾಮಂಗಳಾರತಿ ನಂತರ ಪೋತರಾಜನಿಂದ ಚಾವಟಿ ಸೇವೆ ಹಾಗೂ ಹೆಣ್ಣು ಒಪ್ಪಿಸುವ ವಿಧಿವಿಧಾನಗಳು ನಡೆದವು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉತ್ಸವದಲ್ಲಿ ಭಾಗಿಯಾದರು. ಶ್ರೀ ದೇವಿಯ ದಂಡಿನ ಮೆರವಣಿಗೆ ಹಾಗೂ ರಾಜಬೀದಿ ಉತ್ಸವ ಜನರನ್ನು ಆಕರ್ಷಿಸಿತು.
ಉಡುಪಿಯ ಕಲಾವಿದರ ಹುಲಿವೇಷ ಕುಣಿತವು ರೋಮಾಂಚನಕಾರಿಯಾಗಿತ್ತು. ಕೇರಳದ ಚಂಡೆವಾದನ, ತಮಿಳುನಾಡಿನ ಪೆಂಪೆ, ಚಿಕ್ಕಮಗಳೂರಿನ ವೀರಗಾಸೆ, ಹಲಗೆ ಮೇಳ, ಡೊಳ್ಳು ಕುಣಿತ ಇನ್ನೂ ಸೇರಿದಂತೆ ಮುಂತಾದ ಕಲಾತಂಡಗಳ ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ದೇವಿಯನ್ನು ಭವ್ಯರಥದಲ್ಲಿರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಬುಧವಾರ ಬೆಳಗಿನ ಜಾವ ಗಂಡನಮನೆಗೆ ತರಲಾಯಿತು. ಧಾರ್ಮಿಕ ಆಚರಣೆಗಳ ಮೂಲಕ ಪೂಜಾ ಕಾರ್ಯಕ್ರಮಗಳು ನಡೆದವು. ಗಂಡನ ಮನೆಯಲ್ಲಿ ದೇವರ ದರ್ಶನಕ್ಕೆ ಜನರಿಗೆ ಅವಕಾಶ ಕಲ್ಪಿಸಲಾಯಿತು. ಫೆ. 26ರವರೆಗೂ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಾರಿಕಾಂಬ ಜಾತ್ರೆಯ ಎರಡನೇ ದಿನವೂ ದೇವಿಯ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿ ಪೂಜೆ ಸಲ್ಲಿಸಿದರು. ಕುಂಕುಮಾರ್ಚನೆ, ಉಡಿ ಸೇವೆ ಸೇರಿದಂತೆ ಇತರೆ ಸೇವೆಗಳಿಗೆ ಪ್ರತ್ಯೇಕ ಕೌಂಟರ್ಗಳಿದ್ದವು. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಜನರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಶ್ರೀ ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪೂಜಾ ಸಮಿತಿ ಸಂಚಾಲಕ ಗಂಗಾಧರ ಜಂಬಿಗೆ, ಜಯರಾಂ, ಬಸವರಾಜ್, ಜಯಂತಿ, ವಸ್ತು ಪ್ರದರ್ಶನ ಸಮಿತಿ ಸಂಚಾಲಕ ತಾರಾಮೂರ್ತಿ, ಪ್ರಚಾರ ಸಮಿತಿ ಸಂಚಾಲಕ ರವಿ ನಾಯ್ಡು ಸೇರಿದಂತೆ ಎಲ್ಲ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ವ್ಯವಸ್ಥಿತ ಸಿದ್ಧತೆ ಆಯೋಜಿಸಲಾಗಿತ್ತು.
——
ಸಾಗರದ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ಏರ್ಪಡಿಸಿದ್ದ ವಸ್ತು ಪ್ರದರ್ಶನಕ್ಕೆ ಸಾಗರ ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್ ಚಾಲನೆ ನೀಡಿದರು. ಜಾತ್ರೆ ಅತ್ಯಂತ ವ್ಯವಸ್ಥಿತವಾಗಿ ನಡೆಯಲು ಸ್ಥಳೀಯ ಆಡಳಿತದಿಂದ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಮತ್ತು ಆರೋಗ್ಯ ದೃಷ್ಠಿಯಿಂದ ಮುಂಜಾಗೃತ ಕ್ರಮ ವಹಿಸಲಾಗಿದ್ದು, ಹೆಚ್ಚಿನ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಜಾತ್ರಾ ಸಮಿತಿಯ ಸಹಯೋಗದಲ್ಲಿ ಉತ್ತಮ ರೀತಿಯಲ್ಲಿ ಜಾತ್ರೆ ಪೂರ್ಣಗೊಳ್ಳಲು ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಅವರು ಜಾತ್ರಾ ವ್ಯವಸ್ಥೆ ಬಗ್ಗೆ ಉಪವಿಭಾಗಾಧಿಕಾರಿಯೊಂದಿಗೆ ಚರ್ಚಿಸಿದರು. ವಸ್ತು ಪ್ರದರ್ಶನ ಸಮಿತಿ ಸಂಚಾಲಕ ತಾರಾಮೂರ್ತಿ, ಬಾಲಕೃಷ್ಣ ಗುಳೇದ್, ಜಿ.ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
——
ಆಕರ್ಷಣೀಯ ಸರ್ಕಸ್
ಸಾಗರ ನಗರದ ಗಣಪತಿಕೆರೆ ಸಮೀಪ ಅಪೊಲೋ ಸರ್ಕಸ್ಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾರಿಕಾಂಬ ಜಾತ್ರೆ ಸಾಗರದಲ್ಲಿ ಹಲವು ವಿಶೇಷತೆಗಳಿಂದ ನಡೆದುಕೊಂಡು ಬಂದಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಾರೆ. ಸಮಾಜಗಳಲ್ಲಿ ಜಾತ್ರೆಗಳು ಸಾಮರಸ್ಯ ಮೂಡಿಸುತ್ತವೆ. ಸರ್ಕಸ್ನ ಕಸರತ್ತು ಜನರಿಗೆ ಮನೋರಂಜನೆ ನೀಡುತ್ತವೆ. ಜಾತ್ರೆಗೆ ಬರುವ ಜನರು ಇಂತಹ ಸರ್ಕಸ್ ವೀಕ್ಷಣೆಯಿಂದ ಸಂಭ್ರಮ ಪಡುತ್ತಾರೆ. ಶ್ರೀ ಮಾರಿಕಾಂಬೆ ದೇವಿಯು ಎಲ್ಲರಿಗೂ ಒಳಿತನ್ನು ತರಲಿ ಎಂದು ಆಶಿಸಿದರು. ಸರ್ಕಸ್ ಮುಖ್ಯಸ್ಥ ಜಾರ್ಜ್, ಜಾತ್ರಾ ಸಮಿತಿಯ ಕೆ.ಎನ್.ನಾಗೇಂದ್ರ, ಯು.ಎಲ್.ಮಂಜಪ್ಪ, ರವಿ ನಾಯ್ಡು, ನಗರಸಭಾ ಸದಸ್ಯ ಅರವಿಂದ ರಾಯ್ಕರ್ ಇತರರು ಹಾಜರಿದ್ದರು. ಸರ್ಕಸ್ನಲ್ಲಿ ಜಗ್ಲಿಂಗ್, ವೃತ್ತದೊಳಗೆ ಬೈಕ್ ರೈಡಿಂಗ್, 40 ಅಡಿ ಎತ್ತರದಲ್ಲಿ ಪರಿಣಿತರು ನಡೆಸುವ ಹಗ್ಗದ ಕಸರತ್ತು, ಜೋಕರ್ಸ್ಗಳ ಹಾಸ್ಯ ಅಭಿನಯ, 20ಕ್ಕೂ ಹೆಚ್ಚು ಮಹಿಳೆಯರ ವಿಶೇಷ ಕಸರತ್ತು, ರಿಂಗ್ ಡ್ಯಾನ್ಸ್, ಸೀರೆ ಬ್ಯಾಲೆನ್ಸ್ ಸೇರಿದಂತೆ ಸರ್ಕಸ್ ಆಕರ್ಷಣೆಯ ಚಟುವಟಿಕೆಗಳಿಂದ ಒಳಗೊಂಡಿದೆ.
——
ಫೆ. 20ರ ಕಾರ್ಯಕ್ರಮ
ಸಾಗರದ ತಿಲಕ್ ರಸ್ತೆಯಲ್ಲಿರುವ ಶ್ರೀ ಮಾರಿಕಾಂಬ ಕಲಾವೇದಿಕೆಯಲ್ಲಿ ಫೆ. 20ರ ಸಂಜೆ 5.30ಕ್ಕೆ ಹೊಸನಗರದ ಸಾನಿಕಾ ಬಿ.ಎಸ್.ಬಾಸ್ತಿ ಅವರಿಂದ ನೃತ್ಯ, 6ರಿಂದ ಸಾರಾ ಸಂಸ್ಥೆ ದೊಂಬೆಯಿಂದ ಪರಿಸರ ಗೀತೆ, ಸಂಜೆ 6.15ಕ್ಕೆ ಹುಲಿದೇವರಬನ ತಂಡದಿಂದ ಮಲ್ಲಗಂಬ ಪ್ರದರ್ಶನ, ರಾತ್ರಿ 7ಕ್ಕೆ ತೀರ್ಥಹಳ್ಳಿ ಸುಮುಖ ಸಂಗೀತ ಶಾಲೆಯಿಂದ ನೃತ್ಯ, 7.30ಕ್ಕೆ ಸಾಗರದ ತೇಜಸ್ವಿ ತಬಲಾ ವಿದ್ಯಾಲಯದಿಂದ ತಬಲ ವಾದನ, 8.15ಕ್ಕೆ ಸಾಗರದ ಗಜೇಂದ್ರ ಅವರಿಂದ ರಸಮಂಜರಿ, ರಾತ್ರಿ 9ಕ್ಕೆ ಸಿಕೆಡಿಸಿ ಬೆಂಗಳೂರು ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ.
——