ಶಿವಮೊಗ್ಗ, ಮಾರ್ಚ್-12 : ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಕರೋನಾ ವೈರಸ್ ಪ್ರಕರಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಸ್ಪಷ್ಟೀಕರಣ ನೀಡಿದ್ದಾರೆ.
ಸಾಗರ ತಾಲೂಕಿನ ನಿವಾಸಿಯೊಬ್ಬರು ಮಾರ್ಚ್ 3ರಂದು ಸೌದಿ ಅರೇಬಿಯಾದ ಮಕ್ಕಾದಿಂದ ಬೆಂಗಳೂರಿಗೆ ವಾಪಾಸಾಗಿ ಅಲ್ಲಿಂದ ಶಿವಮೊಗ್ಗ ನಗರಕ್ಕೆ ಬಂದಿರುತ್ತಾರೆ. ಇವರು ಬಹಳ ವರ್ಷಗಳಿಂದ ಉಸಿರಾಟ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು, ವೈದ್ಯರ ಸಲಹೆ ಮೇರೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರೋಗಿಯು ವಿದೇಸ ಪ್ರವಾಸ ಕೈಗೊಂಡ ಮಾಹಿತಿ ಹಿನ್ನೆಲೆಯಲ್ಲಿ ಕೆಎಂಸಿ ವೈದ್ಯರು, ಸದರಿ ವ್ಯಕ್ತಿಯ ಗಂಟಲು ಮಾದರಿ ದ್ರವವನ್ನು ಮಾರ್ಚ್ 11ರಂದು ಸಂಗ್ರಹಿಸಿ ಪರೀಕ್ಷೆಗಾಗಿ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿರುವ ವಿ.ಆರ್.ಡಿ.ಎಲ್ ಲ್ಯಾಬ್ಗೆ ಕಳುಹಿಸಿದ್ದು ಮಾ.12ರಂದು ಮುಂಜಾನೆ ಕೋವಿಡ್-19 ಪರೀಕ್ಷೆ ಫಲಿತಾಂಶ ನೆಗೆಟಿವ್ ಎಂದು ಬಂದಿದೆ ಎಂದು ವರದಿ ನೀಡಿದ್ದಾರೆ. ಈ ಕುರಿತು ಸಾರ್ವಜನಿಕರು ಅನಾವಶ್ಯಕ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.