ಶಿವಮೊಗ್ಗ, ನವೆಂಬರ್ 12 (ಕರ್ನಾಟಕ ವಾರ್ತೆ) : ಮಾರಣಾಂತಿಕ ಕಾಯಿಲೆಗಳ ವಿರುದ್ಧ 0-2ವರ್ಷದೊಳಗಿನ ಮಕ್ಕಳಲ್ಲಿ ಹಾಗೂ ಗರ್ಭಿಣಿ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಿಷನ್ ಇಂದ್ರಧನುಷ್ ಯೋಜನೆಯಡಿಯಲ್ಲಿ ಧನುರ್ವಾಯು, ಬಾಲಕ್ಷಯ, ಗಂಟಲುಮಾರಿ, ಮುಂತಾದ ಮಾರಕ ಕಾಯಿಲೆಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಲಸಿಕಾ ಅಭಿಯಾನ ನಿರೀಕ್ಷೆಯಂತೆ ಅನುಷ್ಠಾನಗೊಳ್ಳಲಿದೆ. ಆದರೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಈ ಹಿಂದಿನ ಲಸಿಕಾ ಅಭಿಯಾನದಲ್ಲಿ ಹಾಗೂ ಈವರೆಗೆ ಲಸಿಕೆಯನ್ನು ಹಾಕಿಸದೆ ಕೈಬಿಟ್ಟು ಹೋಗಿರುವ ಕುಟುಂಬಗಳು, ಲಸಿಕೆಯನ್ನು ಹಾಕಿಸಿಕೊಳ್ಳದಿರುವ, ಕೆಲವು ಲಸಿಕೆಗಳನ್ನು ಹಾಕಿಸಿಕೊಂಡು ಮತ್ತೆ ಕೆಲವು ಲಸಿಕೆಗಳಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲು ಉದ್ದೇಶಿಸಿದ್ದು, ನಗರದ ಕೊಳಚೆ ಪ್ರದೇಶಗಳು, ವಲಸಿಗರು ನೆಲೆಸಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಇದರಿಂದಾಗಿ ಮಾರಣಾಂತಿಕ ಕಾಯಿಲೆಗಳಿಗೆ ಲಸಿಕೆ ಪಡೆಯದಿರುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಲು ಸಾಧ್ಯವಾಗಲಿದೆ ಎಂದರು.
ಮಕ್ಕಳು ಮತ್ತು ಗರ್ಭಿಣಿಯರಿಗೆ ಕಾಲಕಾಲಕ್ಕೆ ಕೆಲವು ಚುಚ್ಚುಮದ್ದುಗಳನ್ನು ನೀಡುವ ಅಗತ್ಯವಿದೆ. ಲಸಿಕೆಗಳನ್ನು ಪಡೆಯದಿರುವವರು ಮುಂದಿನ ದಿನಗಳಲ್ಲಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಸಂಭವವಿದೆ ಆದ್ದರಿಂದ ಆರಂಭದ ಹಂತವಾಗಿ ಡಿಸೆಂಬರ್ 02ರಂದು ಈ ಲಸಿಕೆ ಆಂದೋಲನವನ್ನು ಜಿಲ್ಲೆಯಾದ್ಯಂತ ಆಯೋಜಿಸಲಾಗಿದೆ. ಡಿಸೆಂಬರ್, ಜನವರಿ, ಫೆಬ್ರವರಿ ಮತ್ತು ಮಾರ್ಚ್ ಮಾಹೆಗಳಲ್ಲಿ ತಲಾ ಹತ್ತು ದಿನಗಳಲ್ಲಿ ಲಸಿಕೆ ಹಾಕಲಾಗುವುದು ಎಂದವರು ನುಡಿದರು.
ಶಾಲೆಗಳಲ್ಲಿ ಲಸಿಕೆ ಕಾರ್ಯಕ್ರಮ : 5ಮತ್ತು 6ವರ್ಷದ ಮಕ್ಕಳಿಗೆ ಡಿಪಿಟಿ ಲಸಿಕೆ ಹಾಗೂ 10ಮತ್ತು 16ವರ್ಷದ ಮಕ್ಕಳಿಗೆ ಟಿ.ಡಿ.ಲಸಿಕೆಯನ್ನು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲಾ ಮಕ್ಕಳಿಗೆ ಡಿಸೆಂಬರ್ 11 ರಿಂದ 31ರವರೆಗೆ ಲಸಿಕೆ ಹಾಕಲು ಉದ್ದೇಶಿಸಲಾಗಿದ್ದು, ಪೋಷಕರು ನಿಗಧಿಪಡಿಸಿದ ಅವಧಿಯಲ್ಲಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಸೂಚಿಸಿದ ಅವರು, ಖಾಸಗಿ ಶಾಲೆಗಳ ಮುಖ್ಯಸ್ಥರು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಅವರು ಸೂಚಿಸಿದರು.
ಇದೇ ತಿಂಗಳ 25ರಿಂದ ಡಿಸೆಂಬರ್ 10ರವರೆಗೆ ಜಿಲ್ಲೆಯಲ್ಲಿ ಕುಷ್ಟರೋಗ ಮತ್ತು ಕ್ಷಯರೋಗ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಸಮೀಕ್ಷೆಗೆ ಮನೆಮನೆಗೆ ಬರುವ ಅಧಿಕಾರಿ ಸಿಬ್ಬಂಧಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸುವಂತೆ ಅವರ ಮನವಿ ಮಾಡಿದ ಅವರು, ಈ ಕಾರ್ಯಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂಧಿಗಳು, ಆಶಾ ಹಾಗೂ ಅಂಗನವಾಗಿ ಕಾರ್ಯಕರ್ತೆಯರು ಹಾಗೂ ನರ್ಸಿಂಗ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು.
ಲಸಿಕೆ ಆಂದೋಲನದ ಯಶಸ್ಸು ಹಾಗೂ ಸಮೀಕ್ಷೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಡಿಸೆಂಬರ್ 28ರೊಳಗಾಗಿ ಮಾಹಿತಿ ನೀಡುವಂತೆ ಹಾಗೂ ಈಗಾಗಲೇ ನಿಗಧಿಪಡಿಸಿದ ದಿನಾಂಕಗಳಂದೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಅವರು ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ಇಲಾಖೆಯ ಅನುಷ್ಠಾನಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಆರ್.ಸಿ.ಹೆಚ್.ಅಧಿಕಾರಿ ಡಾ||ನಾಗರಾಜನಾಯ್ಕ್, ಡಾ||ಶಂಕರಪ್ಪ, ಡಾ|| ಶಮಾ, ಡಾ|| ಹನುಮಂತಪ್ಪ, ಡಾ||ನಟರಾಜ್, ಡಾ|| ಸತ್ಯನಾರಾಯಣ ಮುಂತಾದವರು ಉಪಸ್ಥಿತರಿದ್ದರು.
