ಅನಂತ ಹೆಗಡೆ ಅಶೀಸರ
ಶಿವಮೊಗ್ಗ, ಸೆಪ್ಟೆಂಬರ್ 07:
ಸೊರಬ ತಾಲ್ಲೂಕಿನ ಪಿಳಲಿ ಪಾರಂಪರಿಕ ವೃಕ್ಷಕ್ಕೆ ರಾಜ್ಯ ಮಟ್ಟದ ಮಾನ್ಯತೆ ಇದೆ. ಇಲ್ಲಿರುವ ದೇವರು ಕಾಡುಗಳಿಗೆ ಜಾಗತಿಕ ಮನ್ನಣೆ ಇದೆ. ಇತಿಹಾಸ ಪ್ರಸಿದ್ದ ಕೆರೆಗಳು ಇದ್ದು ಜೀವವೈವಿಧ್ಯ ಸಂರಕ್ಷಕರನ್ನು ಅಭಿನಂದಿಸುವ ಕೆಲಸ ಆಗಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಭಿಪ್ರಾಯಪಟ್ಟರು.
ಜೀವವೈವಿಧ್ಯ ತಜ್ಞರ ತಂಡದೊಂದಿಗೆ ಸೊರಬ ತಾಲ್ಲೂಕಿನ ಅರಣ್ಯ, ಕಾನುಪ್ರದೇಶಗಳು, ಹೊಸಬಾಳೆ ಸಮೀಪ ಮೊಡಗೋಡದ ಶ್ರೀಗಂಧವನ ನಿರ್ಮಾಣವನ್ನು ವೀಕ್ಷಿಸಿ ಅವರು ಮಾತನಾಡಿದರು.
ಅರಣ್ಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಭೇಟಿ ಮಾಡಿ ವನ ಸಂರಕ್ಷಣೆ, ಬೆಟ್ಟ ಅಭಿವೃದ್ದಿ ಬಗ್ಗೆ ಮಾತುಕತೆ ನಡೆಸಿದ ಅವರು ಕದಂಬ ವೃಕ್ಷವನ್ನು ನೆಟ್ಟು ಕಾನುಗಳ ರಕ್ಷಣೆಯಿಂದ ರೈತರು ಸಮೃದ್ದಿ ಹೊಂದುತ್ತಾರೆಂದು ಹೇಳಿದರು.
ಭೇಟಿಗೂ ಮುನ್ನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಮತ್ತು ತಾಲ್ಲೂಕು ಜೀವ ವೈವಿಧ್ಯ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಜನಪದ ವೈದ್ಯರ ಸಮಾವೇಶ, ಹಸಿರು ಶಾಲೆಗಳಿಗೆ ಪ್ರೋತ್ಸಾಹ, ಕೆರೆ-ಕಾನು-ಕೃಷಿ ವೈವಿಧ್ಯ ರಕ್ಷಣೆಗೆ ಮುಂದಾದವರನ್ನು ಅಭಿನಂದಿಸುವ ಕಾರ್ಯ ನಡೆಯಬೇಕು ಎಂದು ಸೂಚಿಸಿದರು.
ಸಾಂಪ್ರದಾಯಿಕ ಭತ್ತದ ತಳಿ, ವಿನಾಶದ ಅಂಚಿನಲ್ಲಿರುವ ಮಾವು, ಹಲಸು ತಳಿಗಳ ಉಳಿವಿನ ಕುರಿತು ರೈತರೊಂದಿಗೆ ಸಂವಾದ ನಡೆಸಬೇಕು. ಜೀವ ವೈವಿಧ್ಯ ಕಾಯ್ದೆ ಬಗ್ಗೆ ವಕೀಲರ ತಂಡಕ್ಕೆ ಜಾಗೃತಿ ಮಾಹಿತಿ ನೀಡಬೇಕು ಎಂದರು.
ಈ ವೇಳೆ ಮಂಡಳಿ ಸದಸ್ಯ ವೆಂಕಟೇಶ, ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಹೊಸಬಾಳೆ ಗ್ರಾ.ಪಂ ಅಧ್ಯಕ್ಷ ಸತ್ಯನಾರಾಯಣ್, ಜೀವವೈವಿಧ್ಯ ಸಮಿತಿ ಅಧ್ಯಕ್ಷ ರಾಮಪ್ರಸಾದ್, ಕಂಚಿ ಶಿವರಾಂ, ಗ್ರಾಮದ ಹಿರಿಯ ಮುಖಂಡರು, ಅರಣ್ಯ ಅಧಿಕಾರಿಗಳು ಇದ್ದರು.
(ಫೋಟೊ ಇದೆ)