ಶಿವಮೊಗ್ಗ, ಆ.07 : ಜಿಲ್ಲೆಯ ಹಲವು ತಾಲೂಕುಗಳಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲು 24×7 ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿಡಿಒ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಅತಿವೃಷ್ಟಿ ಪರಿಸ್ಥಿತಿ ಬಗ್ಗೆ ಮಾಹಿತಿಯನ್ನು ಪಡೆದು, ಪರಿಹಾರ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸೂಚನೆ ನೀಡಿದರು.
ಪ್ರವಾಹದಿಂದ ಸಂಪರ್ಕ ಕಡಿದುಕೊಂಡಿರುವ ಗ್ರಾಮಗಳಿಗೆ ತಕ್ಷಣ ಪರ್ಯಾಯ ಸಂಪರ್ಕ ಕಲ್ಪಿಸಬೇಕು. ಇನ್ನು ಒಂದೆರಡು ದಿನಗಳ ಕಾಲ ಇದೇ ರೀತಿ ಮಳೆಯಾದರೆ ಸಂಪರ್ಕ ಕಡಿದುಕೊಳ್ಳಬಹುದಾದ ಗ್ರಾಮಗಳ ಪಟ್ಟಿಯನ್ನು ಸಲ್ಲಿಸಬೇಕು. ನೀರು ತುಂಬಿ ಕೆರೆ ಕಟ್ಟೆ ಒಡೆಯುವ ಸಾಧ್ಯತೆಯಿರುವ ಕೆರೆಗಳ ಬಗ್ಗೆ ಮಾಹಿತಿ ನೀಡಿ, ಮುಂಜಾಗರೂಕತಾ ಕ್ರಮ ಜರುಗಿಸಬೇಕು. ಮನೆ, ಆಸ್ತಿಪಾಸ್ತಿ ಹಾನಿ, ಜೀವಹಾನಿ ಹಾಗೂ ಜಾನುವಾರು ಹಾನಿ ಪ್ರಕರಣಗಳಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹಾನಿ ಅಂದಾಜು ಮಾಡಿ ಒಂದೆರಡು ದಿನಗಳಲ್ಲಿ ಪರಿಹಾರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರವಾಹ ಪರಿಸ್ಥಿತಿ ಬಗ್ಗೆ ನದಿಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ನೀಡಬೇಕು. ಅಗತ್ಯ ಬಿದ್ದರೆ ಅವರನ್ನು ಅಲ್ಲಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಅಂತಹ ಕಡೆಗಳಲ್ಲಿ ಗಂಜಿ ಕೇಂದ್ರ ಸ್ಥಾಪನೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಬೇಕು. ಬೋಟ್‍ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಬೇಕು. ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗಿದ್ದು, ಅದನ್ನು ಸರಿಪಡಿಸಲು ಯುದ್ಧೋಪಾಧಿಯಲ್ಲಿ ಕೆಲಸ ಮಾಡಬೇಕು. ಮರ ಕಟ್ಟಿಂಗ್ ಮೆಷಿನ್, ಸೇರಿದಂತೆ ಅಗತ್ಯ ಸಾಮಾಗ್ರಿಗಳ ಖರೀದಿ ಕುರಿತು ತಹಶೀಲ್ದಾರ ಮುಖಾಂತರ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂಟ್ರೋಲ್ ರೂಂ: ಎಲ್ಲಾ ತಾಲೂಕುಗಳಲ್ಲಿ 24×7 ಕಂಟ್ರೋಲ್ ರೂಂ ಆರಂಭಿಸಬೇಕು. ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಪ್ರವಾಹ ಹಾನಿ ಇತ್ಯಾದಿ ಕುರಿತು ಮಾಹಿತಿ ಬಂದ ತಕ್ಷಣ ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು. ಪಂಚಾಯತ್‍ನಲ್ಲಿ ಎಲ್ಲಾ ಸಿಬ್ಬಂದಿ ಸದಾ ಲಭ್ಯವಿರಬೇಕು ಎಂದರು.
ಕೇಂದ್ರಸ್ಥಾನ ಬಿಟ್ಟು ತೆರಳಬಾರದು: ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು. ರಜೆಯಲ್ಲಿ ತೆರಳಿದವರು ಕರ್ತವ್ಯಕ್ಕೆ ಹಿಂತಿರುಗಬೇಕು. ಅನಧಿಕೃತವಾಗಿ ರಜೆಯಲ್ಲಿರುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಹಾನಿ ವಿವರ: ಅತಿವೃಷ್ಟಿಯಿಂದಾಗಿ ಶಿವಮೊಗ್ಗ ತಾಲೂಕಿನಲ್ಲಿ 26 ಮನೆಗಳಿಗೆ ನೀರು ನುಗ್ಗಿದ್ದು, ಶಿಕಾರಿಪುರದಲ್ಲಿ 32 ಹಾಗೂ ಹೊಸನಗರದಲ್ಲಿ 10 ಮನೆಗಳು ಸೇರಿದಂತೆ 150ಕ್ಕೂ ಅಧಿಕ ಮನೆಗಳಿಗೆ ಹಾನಿ ಉಂಟಾಗಿವೆ. ಸಾಗರದಲ್ಲಿ 502 ಹೆ. ಭತ್ತದ ಗದ್ದೆಗೆ ನೀರು ನುಗ್ಗಿದ್ದು, 386ಹೆ. ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟಾಗಿದೆ. ತೀರ್ಥಹಳ್ಳಿಯಲ್ಲಿ 150ಹೆ. ಗದ್ದೆ ಹಾಗೂ 260ಹೆ. ಅಡಿಕೆ ತೋಟಗಳಿಗೆ ನೀರು ನುಗ್ಗಿದ್ದು ಬೆಳೆ ಹಾನಿ ಸಂಭವಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಅಪರ ಜಿಲ್ಲಾಧಿಕಾರಿ ಅನುರಾಧ, ಉಪವಿಭಾಗಾಧಿಕಾರಿ ಪ್ರಕಾಶ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.