ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಸ್ಥಳೀಯ ರೈತರಿಗೆ ನೆರವಾಗುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಬದಲು ಆರ್ಥಿಕವಾಗಿ ನಷ್ಟದಲ್ಲಿರುವ ರಾಜ್ಯದ ಹೊರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ 95ಕೋಟಿಗಳಿಗೂ ಹೆಚ್ಚಿನ ಸಾಲ ನೀಡಿರುವುದು ಸೇರಿದಂತೆ ಅನೇಕ ಅಕ್ರಮಗಳನ್ನು ಎಸಗಿರುವ ಬ್ಯಾಂಕಿನ ವ್ಯವಹಾರವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಿ.ಬಿ.ಐ.ತನಿಖೆಗೆ ಒತ್ತಾಯಿಸಿ ಸರ್ಕಾರದ ಗಮನಸೆಳೆಯಲು ಇಂದು ನಡೆದ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ 2020ರ ಮಾರ್ಚ್ ಅಂತ್ಯದವರೆಗಿನ ಕೆ.ಡಿ.ಪಿ.ಪ್ರಗತಿ ಪರಿಶೀಲನಾ ಸಭೆಯನ್ನು ಏರ್ಪಡಿಸಲಾಗಿತ್ತು. ಶಾಸಕ ಆರಗ ಜ್ಞಾನೇಂದ್ರ ಅವರ ವಿಷಯ ಮಂಡನೆಯ ನಂತರ ಈ ನಿರ್ಣಯವನ್ನು ಕೈಗೊಳ್ಳಲಾಯಿತು.
ಜಿಲ್ಲೆಯ ಬುಳ್ಳಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳು ಅಪೂರ್ಣಗೊಂಡಿರುವುದು ಬೇಸರದ ಸಂಗತಿ. ತಾಂತ್ರಿಕವಾಗಿರುವ ಸಮಸ್ಯಗಳನ್ನು ಇತ್ಯರ್ಥಪಡಿಸಿಕೊಂಡು ಯೋಜನೆಯ ತ್ವರಿತ ಅನುಷ್ಠಾನಕ್ಕೆ ಮುಂದಾಗುವಂತೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಯೋಜನೆಯಡಿ ಶಾಸಕ ಕೆ.ಬಿ.ಅಶೋಕನಾಯ್ಕ್ ಮತ್ತು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಅವರು ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ದೀರ್ಘಾವಧಿಯ ನಂತರವೂ ಕಾಮಗಾರಿ ಅಪೂರ್ಣವಾಗಿರುವ ಹಾಗೂ ನಿಗಧಿಪಡಿಸಿದ ಗ್ರಾಮಗಳಿಗೆ ಈವರೆಗೂ ಕುಡಿಯುವ ನೀರು ನೀಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸಂಬಂಧಿತ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಒತ್ತಾಯಿಸಿದರು. ಈ ಎಲ್ಲಾ ವಿಷಯದ ಕುರಿತು ವಾಸ್ತವ ಸ್ಥಿತಿಯನ್ನರಿತು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚಿಸಿದರು.
ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ಗ್ರಾಮೀಣ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು, ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.
ತುಂಗಾ ಮತ್ತು ಮಾಲತಿ ನದಿ ದಂಡೆಯ ಇಕ್ಕೆಲಗಳಲ್ಲಿ ಬರುವ ಗ್ರಾಮಗಳಿಗೆ ನದಿಯಿಂದ ನೇರವಾಗಿ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ನದಿಯ ನೀರನ್ನು ಸಂಸ್ಕರಿಸಿ ಒದಗಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಅಭಿಯಂತರರಿಗೆ ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ ತೀವ್ರ ಹಾನಿಗೊಳಗಾದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿಗಳನ್ನು ನೆಲಸಮಗೊಳಿಸಿ ಮರುನಿರ್ಮಾಣಕ್ಕಾಗಿ ಸರ್ಕಾರವು ಈಗಾಗಲೇ 10ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 52ಶಾಲೆಗಳ 92ಕೊಠಡಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿತ್ತು. ಪ್ರಸ್ತುತ ಕೆಲವು ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಅವರು ಸೂಚಿಸಿದರು.
ಜಿಲ್ಲೆಯ ವಿವಿಧ ನಿಗಮ-ಮಂಡಳಿಗಳಲ್ಲಿ ಅನುಷ್ಠಾನಗೊಳಿಸಲಾಗಿರುವ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬವಾಗುತ್ತಿದ್ದು, ನಿರೀಕ್ಷಿತ ಕೆಲಸ-ಕಾರ್ಯಗಳು ನಿಗಧಿತ ಅವಧಿಯೊಳಗಾಗಿ ಪೂರ್ಣಗೊಳ್ಳುತ್ತಿಲ್ಲ ಅದಕ್ಕಾಗಿ ನಿಗಮ-ಮಂಡಳಿಯ ಅಧಿಕಾರಿಗಳ ಸಭೆಯನ್ನು ಕರೆದು ಈವರೆಗೆ ಆಗಿರುವ ಪ್ರಗತಿ ಮಾಹಿತಿಯನ್ನು ಪಡೆಯುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಆಯ್ದ 120ಸ್ಥಳಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದಕ್ಕೆ ಅಗತ್ಯವಾಗಿರುವ ಸ್ಥಳಾವಕಾಶವನ್ನು ಒಂದು ವಾರದೊಳಗಾಗಿ ಒದಗಿಸಿ, ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದವರು ನುಡಿದರು.
ಎಸ್.ಎಸ್.ಎಲ್.ಸಿ.ಪರೀಕ್ಷೆ ನಡೆಸಲು ಈಗಾಗಲೇ ದಿನಾಂಕ ನಿಗಧಿಪಡಿಸಲಾಗಿದ್ದು, ಹೊರ ಊರುಗಳಿಂದ ಊರಿಗೆ ಹಿಂದುರಿಗಿ ಪರೀಕ್ಷೆಗೆ ಹಾಜರಾಗುವ ಹಾಗೂ ಸ್ಥಳೀಯವಾಗಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಶಾಸಕ ಕುಮಾರ್ ಬಂಗಾರಪ್ಪ ಅವರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಅಲ್ಲದೇ ಪ್ರತಿ ವಿದ್ಯಾರ್ಥಿಗಳ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಉದ್ದೇಶಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗೆ 2ಮಾಸ್ಕ್ ಹಾಗೂ ಸ್ಯಾನಿಟೈಜರ್‍ನ್ನು ಒದಗಿಸಲಾಗುವುದು ಎಂದರು.
ಆಗುಂಬೆಯಲ್ಲಿ ಅನೇಕ ವರ್ಷಗಳಿಂದ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಅಪೂರ್ಣಗೊಂಡು ಹಾಳುಬಿದ್ದಿರುವ ಆಶಾಕಿರಣ ವಸತಿಶಾಲೆ ಕಟ್ಟಡವನ್ನು ಪೂರ್ಣಗೊಳಿಸುವಂತೆ ಸಚಿವರಲ್ಲಿ ಮನವಿ ಮಾಡಿದ ಶಾಸಕ ಆರಗಜ್ಞಾನೇಂದ್ರ ಅವರು, ಈ ಶಾಲಾ ಕಟ್ಟಡ ತೀರಾ ಕಳಪೆಗುಣಮಟ್ಟದ್ದಾಗಿದ್ದು, ಖರೀದಿಸಿದ ಪೀಠೋಪಕರಣಗಳೆಲ್ಲವೂ ಕಾಣೆಯಾಗಿವೆ. ಈ ಸಂಬಂಧ ತಪ್ಪಿತಸ್ತ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಬೇಕು ಅಲ್ಲದೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದವರು ಒತ್ತಾಯಿಸಿದರು.
ಆರೋಗ್ಯ ಇಲಾಖೆಯು ನಗರದ ಮೆಟ್ರೋ, ಸಹ್ಯಾದ್ರಿ ನಾರಾಯಣ, ಸುಬ್ಬಯ್ಯ ಆಸ್ಪತ್ರೆ ಸೇರಿದಂತೆ ನಾಲ್ಕು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಮಾಡುವಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರೋಗಿಗಳು ಈ ಯೋಜನೆಯ ಲಾಭಪಡೆದುಕೊಳ್ಳುವಂತೆ ಸಚಿವರು ತಿಳಿಸಿದರು.
ಅಲ್ಲದೇ ವಿವಿಧ ಇಲಾಖೆಗಳಲ್ಲಿ ಅನುಷ್ಠಾನದಲ್ಲಿರುವ ಹಲವು ಯೋಜನೆಗಳ ಪ್ರಗತಿ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ಶ್ರೀಮತಿ ವೇದಾವಿಜಯಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ. ಸಿ.ಇ.ಒ. ಶ್ರೀಮತಿ ಎಂ.ಎಲ್.ವೈಶಾಲಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.