ಶಿವಮೊಗ್ಗ: ರಕ್ತದಾನಿ, ಸಮಾಜಸೇವಕ ಜಿ.ಎಸ್.ಯಜ್ಞನಾರಾಯಣ ಅವರಿಗೆ ಗುಡ್ಲಕ್ ಆರೈಕೆ ಕೇಂದ್ರದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. 100 ಬಾರಿ ರಕ್ತದಾನ ಮಾಡಿರುವ ಹೆಗ್ಗಳಿಕೆ ಜಿ.ಎಸ್.ಯಜ್ಞನಾರಾಯಣ ಅವರದ್ದಾಗಿದೆ.
ಶಿವಮೊಗ್ಗದಲ್ಲಿ ರಕ್ತದಾನ ಮಾಡುವ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಜತೆಯಲ್ಲಿ 100 ಬಾರಿ ರಕ್ತದಾನ ಮಾಡಿದ್ದಾರೆ. ರಕ್ತದಾನ ಮಾಡಲು ಸಾರ್ವಜನಿಕರಿಗೆ ಪ್ರೇರಣೆ ಆಗಿದ್ದಾರೆ. ರಕ್ತದ ಕೊರತೆ ನೀಗಿಸುವ ಕಾಯಕದಲ್ಲಿ ಮಹತ್ತರ ಪಾತ್ರ ವಹಿಸುವ ಜತೆಯಲ್ಲಿ ಸಮಾಜಮುಖಿಯಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಜಿ.ಎಸ್.ಯಜ್ಞನಾರಾಯಣ ಅವರು ಬಂದಿದ್ದಾರೆ.
ಶಿವಮೊಗ್ಗ ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿರುವ ಅನಾಥರ, ಬುದ್ದಿಮಾಂದ್ಯರಿಗೆ ಇರುವ “ಗುಡ್ಲಕ್ ಆರೈಕೆ ಕೇಂದ್ರ”ಕ್ಕೆ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನೇಕ ನೊಂದ ಜೀವಿಗಳಿಗೆ ಆಶ್ರಯದಾತರಾಗಿರುವ ರಕ್ತದಾನಿ ಜಿ.ಎಸ್.ನಾರಾಯಣ ಅವರ 83ನೇ ಜನ್ಮದಿನ ಹಾಗೂ 53ನೇ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.
ಗುಡ್ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ್ ಐತಾಳ್ ಮಾತನಾಡಿ, ಯಜ್ಞನಾರಾಯಣ ಅವರು ಯುವಪೀಳಿಗೆಗೆ ಸ್ಫೂರ್ತಿ ಆಗಿದ್ದು, ರಕ್ತದಾನದ ಮಹತ್ವದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಸ್ವತಃ ನೂರು ಬಾರಿ ರಕ್ತದಾನ ಮಾಡಿದ್ದಾರೆ. ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ನಿವೃತ್ತ ಕಮಾಂಡೆಂಟ್ ಆನಂದ್ರಾವ್, ನಿರ್ದೇಶಕ ಮತ್ತು ರಕ್ತದಾನಿ ಜಿ.ವಿಜಯ್ಕುಮಾರ್, ಕಿರುತೆರೆ ಕಲಾವಿದ, ಸಂಗೀತ ವಿದ್ಯಾಂಸ, ಕರ್ನಾಟಕ ಸಂಘದ ನಿರ್ದೇಶಕ ವಿನಯ, ಯಜ್ಞನಾರಾಯಣ ಪತ್ನಿ ವಿಜಯಾ, ಗುಡ್ಲಕ್ ಆರೈಕೆ ಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.