ಐಐಟಿ ಪುಣೆಯ ಸಹಯೋಗದೊಂದಿಗೆ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಶಿವಮೊಗ್ಗ ಇವರು ಅಭಿವೃದ್ಧಿ ಪಡಿಸಿದ ಜಾನುವಾರು ಎತ್ತುವ ಉಪಕರಣ

ಆಂಗ್ಲ ಭಾಷೆಯಲ್ಲಿ (Downers Cow Syndrome) ಎಂದು ಕರೆಯಲ್ಪಡುವ ಜಾನುವಾರುಗಳು ನೆಲಹಿಡಿಯುವ ಪೀಡೆಗೆ ಕಾರಣಗಳು ಹಲವಾರು. ಅದರಲ್ಲೂ 7-9 ತಿಂಗಳ ಅವಧಿಯ ಗರ್ಭದ ಜಾನುವಾರುಗಳು ನೆಲ ಹಿಡಿದವು ಎಂದರೆ ಬಹುತೇಕ ಲೆಕ್ಕದ ಹೊರಗೆ ಎಂದೇ ಲೆಕ್ಕ. ಜಾನುವಾರುಗಳ ಪ್ರಾಣ ಹಿಂಡುವ ಮತ್ತು ರೈತರ ಜೀವ ಹಿಂಡಿ ಪಶುವೈದ್ಯರಿಗೆ ಈ ಕಾಯಿಲೆ ಇಂದಿಗೂ ಅತ್ಯಂತ ಪರಿಣಾಮಕಾರಿಯಾದ ಸೂಕ್ತ ಚಿಕಿತ್ಸೆಯಿಲ್ಲದೇ ಸವಾಲಾಗೇ ಇದೆ.
ಏನಿದು ನೆಲ ಹಿಡಿಯುವ ಕಾಯಿಲೆ?? ಸ್ವಲ್ಪ ತಿಳಿದುಕೊಳ್ಳೋಣ. ಕೆಲವು ಜಾನುವಾರುಗಳು ಅದರಲ್ಲೂ ಕರು ಹಾಕಿದ ನಂತರ, ತುಂಬಿದ ಗರ್ಭದ, ಪೌಷ್ಟಿಕಾಂಶಗಳ ಕೊರತೆಯಿಂದ ಬಳಲಿದ ಮತ್ತು ಕೆಲವೊಮ್ಮೆ ಸುಮ್ಮನೇ ಜಾನುವಾರುಗಳು ನೆಲ ಹಿಡಿಯುತ್ತವೆ. ಇದಕ್ಕೆ ಎತ್ತುಗಳು, ಎಮ್ಮೆಗಳು, ಕರುಗಳು ಮತ್ತು ಮಣಕಗಳೂ ಹೊರತಾಗಿಲ್ಲ. ಇದು ವಿವಿಧ ರೀತಿಯ ಕಾರಣಗಳ ಸಂಕೀರ್ಣದಿಂದ ಬರುವುದರಿಂದ ಇದನ್ನು “ಡೌನರ್ಸ್ ಸಿಂಡ್ರೋಂ’ ಎಂದು ಕರೆಯುತ್ತಾರೆ.
ಈ ಕಾಯಿಲೆಯಲ್ಲಿ ಇದ್ದಕ್ಕಿದ್ದಂತೆ ನಿನ್ನೆ ಸರಿ ಇದ್ದ ಜಾನುವಾರುಗಳು ಬೆಳಗಾಗುವುದರೊಳಗೆ ನೆಲ ಹಿಡಿಯುತ್ತವೆ. ಒಂದು ಸಲ ನೆಲ ಹಿಡಿದರೆ, ಜಪ್ಪಯ್ಯ ಅಂದರೂ ಏಳದೆ, ಮಲಗಿದಲ್ಲೇ ಮಲಗಿ, ಹುಳಗಳಾಗಿ ಕೊನೆಗೊಮ್ಮೆ ಅನಿವಾರ್ಯವಾಗಿ ದಯಾ ಮರಣಕ್ಕೆ ಒಳಪಡಿಸಬೇಕಾಗುತ್ತದೆ. ಈ ಕಾಯಿಲೆಯ ಪ್ರಮಾಣ ವಿವಿಧ ಮುಂದುವರೆದ ದೇಶಗಳಾದ 3-5 ಶೇಕಡಾ ಇದೆ. ಭಾರತದಲ್ಲಿಯೂ ಸಹ ಇದೇ ಪ್ರಮಾಣ ಇರಬಹುದೆಂದು ಊಹೆಯೇ ವಿನ: ಕ್ರಮಬದ್ಧ ಅಧ್ಯಯನ ನಡೆದಿಲ್ಲ.
ಸಾಮಾನ್ಯವಾಗಿ ಕರು ಹಾಕಿದ ನಂತರ ಬಹಳ ಜಾನುವಾರುಗಳಲ್ಲಿ ಈ ಕಾಯಿಲೆ ಕಾಣಿಸಿ ಕೊಳ್ಳುತ್ತದೆ. ಆದರೆ ಗರ್ಭಧರಿಸಿದ ಕೊನೆಯ ತ್ರೈಮಾಸಿಕದಲ್ಲಿ ಈ ಕಾಯಿಲೆಯು ಬಹಳ ಸಾಮಾನ್ಯ. ಕೆಲವು ಸಲ ಹಾಲು ಜ್ವರದಿಂದ ಬಲಲಿ ಕ್ಯಾಲ್ಸಿಯಂ ಕೊರತೆಯಾದ ಜಾನುವಾರುಗಳಲ್ಲಿ ಈ ಕಾಯಿಲೆ ಬಹಳ ಸಾಮಾನ್ಯ. ಪ್ರಾರಂಭಿಕ ಹಂತದಲ್ಲಿ, ಆಕಳು ನೆಲ ಹಿಡಿದರೂ ಎದ್ದೇಳಲು ಪ್ರಯತ್ನಿಸುತ್ತದೆ. ಕೆಲವೊಮ್ಮೆ ತೆವಳಿಕೊಂಡು ಮುಂದೆ ಮುಂದೆ ಹೋಗುತ್ತದೆ. ಇದನ್ನು ಕ್ರೀಪರ್ ಕೌ (Creepers Cow) ಅಂತಲೂ ಆಂಗ್ಲ ಭಾಷೆಯಲ್ಲಿ ನಂತರ, ಅದು ಸಾಧ್ಯವಾಗದೇ ಇದ್ದಾಗ, ಏಳಲು ಪ್ರಯತ್ನಿಸುವುದೇ ಇಲ್ಲ. ಎಷ್ಟೇ ಕಷ್ಠ ಪಟ್ಟರೂ ಸಹ ಅವುಗಳನ್ನು ಎದ್ದು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಇತ್ತೀಚೆಗೆ ಆಳುಗಳ ಕೊರತೆಯಿಂದ ಒಂದೆರಡು ದಿನ ಬಂದರೂ ನಂತರ ಅದನ್ನು ಎತ್ತಲು ಸಾಧ್ಯವಾಗದೇ ತಪ್ಪಿಸಿಕೊಳ್ಳುತ್ತಾರೆ.
ಕೆಲವೊಮ್ಮೆ ಆಕಳುಗಳು ಕೊಟ್ಟಿಗೆಯಲ್ಲಿ, ಕಾಲು ಜಾರಿ ಬಿದ್ದು ಪೆಟ್ಟಾದಾಗ, ಅಥವಾ ಕರು ಹಾಕಲು ತೊಂದರೆಯಾಗಿ ಕರುವನ್ನು ಎಳೆದು ತೆಗೆದಾಗ, ಬೆನ್ನು ಹುರಿಗೆ ಪೆಟ್ಟು ಬಿದ್ದಾಗಲೂ ಸಹ ಜಾನುವಾರುಗಳು ನೆಲ ಹಿಡಿಯುತ್ತವೆ. ನೆಲಹಿಡಿದ ನಂತರ ಮಾಂಸಖಂಡಗಳ ಮೇಲೆ ಬೀಳುವ ಒತ್ತಡದಿಂದಾಗಿ ಮಾಂಸಖಂಡಗಳು ಜಖಂಗೊಳ್ಳುತ್ತವೆ. ಅಲ್ಲದೇ ನರಗಳ ದೌರ್ಬಲ್ಯವೂ ಸಹ ಉಂಟಾಗುತ್ತದೆ. ಕ್ರಮೇಣ ಮಾಂಸಖಂಡಗಳು, ಅದರಲ್ಲೂ ಚಪ್ಪಡಿ ಕಲ್ಲಿನ ನೆಲದಲ್ಲಿ ಕಟ್ಟುವ ಜಾನುವಾರುಗಳಿಗೆ ಇದು ಬಹಳ ಬೇಗ ಆಗುತ್ತದೆ. ಇದಾದ ನಂತರ, ಚರ್ಮವು ಕೊಳೆತು, ಹುಳಗಳಾಗಬಹುದು. ದುರ್ವಾಸನಾಯುಕ್ತ ಕೀವು ಮನೆ ಜನರಿಗೆ ಅಸಹ್ಯ ಹುಟ್ಟಿಸುತ್ತದೆ. ಶ್ವಾಸಕೋಶದ ಸೋಂಕು ತಗಲಿ, ನ್ಯುಮೋನಿಯಾ ಅಸ ಆವರಿಸುತ್ತದೆ. ಅನಿವಾರ್ಯವಾಗಿ ಇಂತಹ ಜಾನುವಾರುಗಳಿಗೆ ದಯಾಮರಣ ನೀಡಬೇಕಾಗುತ್ತದೆ.
ಹಾಗಿದ್ದರೆ ಇದಕ್ಕೆ ಚಿಕಿತ್ಸೆಯಿಲ್ಲವೇ ಎಂಬ ಪ್ರಶ್ನೆ ಬಹಳ ಸಾಮಾನ್ಯ. ಜಾನುವಾರು ಏಳಲಿಕ್ಕೆ ಪ್ರಯತ್ನ ಮಾಡುವಾಗಲೇ ಅದಕ್ಕೆ ಅದಕ್ಕೆ ಉತ್ತಮ ಪೋಷಣೆ ಮತ್ತು ಆಸರೆ ನೀಡಿದರೆ ಬಹಳ ಬೇಗ ಸುಧಾರಿಸುತ್ತವೆ.
• ರಾಸು ಎದ್ದು ನಿಲ್ಲಲು ಪ್ರಯತ್ನ ಮಾಡುವ ಸಂದರ್ಭದಲ್ಲೇ ಅದಕ್ಕೆ ಸಾಕಷ್ಟು ಸಹಕಾರ ನೀಡಿ ಎದ್ದು ನಿಲ್ಲುವಂತೆ ಮಾಡಬೇಕು. ರಾಸು ಎದ್ದು ನಿಲ್ಲಲು ಪ್ರಯತ್ನ ಮಾಡುವಾಗಲೇ ಅದನ್ನು 4-5 ಜನ ಎತ್ತಿ ಹಿಡಿದು ನಿಲ್ಲಿಸಿ, ಕೂಡಲೇ ಮಣ್ಣಿನ ನೆಲಕ್ಕೆ ಹಾಕಬೇಕು. ಚಪ್ಪಡಿ ಕಲ್ಲು ಅಥವಾ ಸಿಮೆಂಟ್ ಕೊಟ್ಟಿಗೆಯಲ್ಲಿ ಜಾನುವಾರಿನ ಗುಣಮುಖವಾಗುವ ಪ್ರಮಾಣ ಕಡಿಮೆ. ಕೊಟ್ಟಿಗೆ ನಿರ್ಮಿಸುವಾಗಲೇ ಈ ರೀತಿಯ ಕಾಯಿಲೆಗೊಳಪಟ್ಟ ಜಾನುವಾರುಗಳ ಆರೈಕೆಗೆಂದೆ ಪ್ರತ್ಯೇಕ ಸ್ಠಳ ನಿರ್ಮಿಸಿ ಇಡುವುದು ಒಳಿತು. ಈ ರೀತಿಯ ಸ್ಥಳ ಇಲ್ಲದಿದ್ದಲ್ಲಿ, ಕೊಟ್ಟಿಗೆಯ ಹೊರಗೆ ಅಥವಾ ಒಳಗೆ ಸಾಕಷ್ಟು ಮೆತ್ತನೇ ಹುಲ್ಲು ಹಾಸಿ ಮಲಗುವ ಸ್ಥಳ ನಿರ್ಮಿಸಬಹುದು. ಇದೆಲ್ಲ ಸಾಧ್ಯವಿಲ್ಲ ಎಂದು, ಪಶುವೈದ್ಯರೇ ಔಷಧ ನೀಡಿ ಮ್ಯಾಜಿಕ್ ಮಾಡಿ ಜಾನುವಾರು ತಾನೇ ಎದ್ದು ನಿಲ್ಲುವಂತೆ ಅಪೇಕ್ಷಿಸುವುದು ಸಾಧ್ಯವಿಲ್ಲದ ಮಾತು.
• ಇತ್ತೀಚೆಗೆ ರಬ್ಬರ್ ಮ್ಯಾಟ್ ಹಾಕುವ ಪದ್ದತಿ ಇರುತ್ತಿದ್ದು ಇದನ್ನೂ ಸಹ ಬಳಸಬಹುದು. ಇದರಿಂದ ಜಾನುವಾರು ಒಂದೇ ಮಗ್ಗುಲಿಗೆ ಮಲಗಿ, ಮಲಗಿ ಅದರ ಮೈಗೆ ನೆಲ ಒತ್ತಿ ಮಾಂಸ ಖಂಡಗಳು ಮತ್ತು ನರಗಳು ದೌರ್ಬಲ್ಯಗೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.
• ಇತ್ತೀಚೆಗೆ ಎಲ್ಲಾ ರಂಗದಲ್ಲೂ ಇರುವಂತೆ ಆಳುಗಳ ಕೊರತೆ ಇರುತ್ತದೆ. ಅಕ್ಕಪಕ್ಕದ ಮನೆಯವರು ಒಂದೆರಡು ದಿನ ಬಂದರೂ, ಸಹ ನಂತರ ಬೇಸರ ಪಟ್ಟುಕೊಳ್ಳುತ್ತಾರೆ. ಕಾರಣ ಜಾನುವಾರಿನ ಮಗ್ಗುಲನ್ನು ಪದೇ, ಪದೇ ಬದಲಾಯಿಸಿ, ಅದು ಏಳಲು ಪ್ರಯತ್ನಿಸಿದಾಗ ಅದಕ್ಕೆ ಆಸರೆ ನೀಡಲು ಮಾನವ ಸಹಕಾರ ಬೇಕೇ ಬೇಕು. ಬದಲೀ ವ್ಯವಸ್ಥೆಯಾಗಿ ಇತ್ತೀಚೆಗೆ ಕೆಲವು ಗೋಪಾಲಕರಿಗೆ ಚೈನ್ ಪುಲ್ಲಿ ಮತ್ತಿ ಶೇಡ್ ನೆಟ್ ಬಳಸಿ ಜಾನುವಾರನ್ನು ಒಬ್ಬಿಬ್ಬರೇ ಎಬ್ಬಿಸಿ ನಿಲ್ಲಿಸುವ ವಿಧಾನವನ್ನು ಹೇಳಿಕೊಡಲಾಗುತ್ತಿದೆ. ಪ್ರಾರಂಭಿಕವಾಗಿ ಇದಕ್ಕೆ ಸ್ವಲ್ಪ ಶ್ರಮವಿದ್ದರೂ ಸಹ, ನಂತರ ಒಬ್ಬ ಗೋಪಾಲಕರು ಈ ವಿಧಾನವನ್ನು ಬಳಸಿ 450-500 ಕಿಲೋ ತೂಗುವ ರಾಸನ್ನು ಎತ್ತಿ ನಿಲ್ಲಿಸಬಹುದು.
• ನೆಲ ಹಿಡಿದ ಜಾನುವಾರಿಗೆ ಕ್ರಮೇಣ ಗಾಯಗಳು, ಶ್ವಾಸಕೋಶದ ತೊಂದರೆ ಇತ್ಯಾದಿ ಪ್ರಾರಂಭವಾದಾಗ ಅದಕ್ಕೆ ತಕ್ಕಂತೆ ತಕ್ಕ ಔಷಧಿಗಳನ್ನು ತಜ್ಞ ಪಶುವೈದ್ಯರ ಸಹಾಯದಿಂದ ಮಾಡಿಸಬೇಕು.
ಅಲ್ಲದೇ ಈ ಕಾಯಿಲೆ ಬರದ ಹಾಗೇ ಕ್ರಮಗಳಿಲ್ಲವೇ ಎನ್ನುವ ಪ್ರಶ್ನೆಗೂ ಸಹ ಉತ್ತರ ಇಲ್ಲಿದೆ;
• ನೆಲ ಹಿಡಿಯುವ ಲಕ್ಷಣಗಳು ಕಂಡು ಬಂದ ಕೂಡಲೇ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಚಿಕಿತ್ಸೆ ಪ್ರಾರಂಭಿಸಬೇಕು.
• ಈ ರೀತಿಯ ನೆಲ ಹಿಡಿಯುವ ಜಾನುವಾರುಗಳಿಗೆ ಕ್ಯಾಲ್ಸಿಯಂ ಅಂಶದ ಕೊರತೆ ಇರುತ್ತದೆ. ಇದಲ್ಲದೇ ಪೊಟ್ಯಾಸಿಯಂ, ರಂಜಕ,ಮ್ಯಾಗ್ನೇಸಿಯಂ ಅಂಶಗಳ ಕೊರತೆ ಇರುತ್ತದೆ. ಇವುಗಳನ್ನು ಜಾನುವಾರುಗಳಿಗೆ ಖನಿಜ ಮಿಶ್ರಣದ ಮೂಲಕವಾಗಿ ನಿರಂತರವಾಗಿ ಕೊಡುತ್ತ ಇರಬೇಕಾಗುತ್ತದೆ. ನೆಲ ಹಿಡಿದ ನಂತರ ಕೆಲವರು ಇವುಗಳನ್ನು ನೀಡಿದರೆ ಸಾಕು ಎನ್ನುವ ಅಭಿಪ್ರಾಯ ಹೊಂದಿರುತ್ತಾರೆ. ಆದರೆ ಇದು ನಿಜವಾದ ವಿಚಾರವಲ್ಲ. ಎಲ್ಲ ರೀತಿಯ ಜಾನುವಾರುಗಳಿಗೆ ಪಶುವೈದ್ಯರ ಸಲಹೆ ಪಡೆದು ನಿಗದಿತ ಪ್ರಮಾಣದಲ್ಲಿ ಉತ್ತಮ ಗುಣ ಮಟ್ಟದ ಖನಿಜ ಮಿಶ್ರಣವನ್ನು ರಾಸಿನ ಜೀವನ ಪರ್ಯಂತ ನೀಡುತ್ತಲೇ ಇರಬೇಕು.
• ನಿಗದಿತ ಪ್ರಮಾಣದಲ್ಲಿ ಸಮತೋಲ ಪಶು ಅಹಾರವನ್ನು ನೀಡುವುದೂ ಅತ್ಯಂತ ಮುಖ್ಯ. ಕೆಲವರು ಕೇವಲ ಹತ್ತಿ ಕಾಳು ಹಿಂಡಿ ಅಥವಾ ಬೂಸಾ ಇಷ್ಟೇ ನೀಡಿ ಅದೇ ಸಮತೋಲ ಪಶು ಅಹಾರ ಅಂದುಕೊಳ್ಳುತ್ತಾರೆ. ಆದರೆ ಸಮತೋಲ ಪಶುಅಹಾರ ಅಂದರೆ ಶಕ್ತಿಯ ಅಂಶ, ಪ್ರೊಟೀನ್ ಅಂಶ, ಖನಿಜಾಂಶ ಇತ್ಯಾದಿಗಳನ್ನು ಹೊಂದಿದ್ದು ಅದನ್ನು ಸೂಕ್ತ ಪ್ರಮಾಣದಲ್ಲಿ ಆಕಳಿನ ಶರೀರ ನಿರ್ವಹಣೆಗೆ ಮತ್ತು ಉತ್ಪಾದನೆಗೆ ಅವಶ್ಯವಿರುವಂತೆ ನೀಡಬೇಕು. ಸಮತೋಲ ಪಶು ಅಹಾರವನ್ನು ರೈತರೇ ತಯಾರಿಸಿಕೊಳ್ಳಬಹುದು (ಉದಾಹರಣೆಗೆ; ಜೋಳದ ಪುಡಿ: ಶೇ 45, ಶೇಂಗಾ ಹಿಂಡಿ: 20%, ಹತ್ತಿಕಾಳು ಹಿಂಡಿ: 10%; ಗೋದಿ ಬೂಸಾ: 22%, ಉತ್ತಮ ಗುಣ ಮಟ್ಟದ ಖನಿಜ ಮಿಶ್ರಣ: 2 ಕಿಲೋ, ಉಪ್ಪು: 1 ಕಿಲೋ). ಈ ಸಮತೋಲ ಪಶುಅಹಾರವನ್ನು ರೈತರೇ ತಯಾರಿಸಿಕೊಳ್ಳಬಹುದು. ಇದನ್ನು ಶರೀರ ನಿರ್ವಹಣೆಗೆ 2 ಕಿಲೋ, ಮತ್ತು ಪ್ರತಿ ಲೀಟರ್ ಹಾಲಿಗೆ ಅರ್ಧ ಕಿಲೋ ಪ್ರಮಾಣದಲ್ಲಿ ನೀಡಬಹುದು.
• ಕಣ್ಣಳತೆಯಲ್ಲಿ ಹಿಂಡಿ ನೀಡುವ ಬದಲು ನಿಗದಿತವಾಗಿ ತೂಕ ಮಾಡಿ ಶರೀರ ನಿರ್ವಹಣೆ ಮತ್ತು ಹಾಲಿನ ಉತ್ಪಾದನೆಗೆ ತಕ್ಕಂತೆ ಅಹಾರ ಮತ್ತು ಹಸಿ ಹುಲ್ಲು ಹಾಗೂ ಉತ್ತಮ ಗುಣ ಮಟ್ಟದ ಒಣ ಹುಲ್ಲು ನೀಡಿ. ಹಾಲನ್ನು ಮಾತ್ರ ನಿಖರವಾಗಿ ಅಳೆದು ಕೊಡುವಾಗ, ಆಕಳಿಗೆ ಅಹಾರ ನೀಡುವಾಗ ಕಣ್ಣಳತೆಯೇಕೆ??
• ಇತ್ತೀಚೆಗೆ ನೆಲಹಿಡಿದ ಜಾನುವಾರುಗಳನ್ನು ಎತ್ತಲು ಸಹಾಯವಾಗುವ ವಿವಿಧ ರೀತಿಯ ಚೈನ್ ಪುಲ್ಲಿ ಹೊಂದಿದ ಉಪಕರಣಗಳು ಅಭಿವೃದ್ಧಿಯಾಗುತ್ತಿದ್ದು, ಕೆಲವು ಮಾರುಕಟ್ಟೆಯಲ್ಲಿ ಈಗಾಗಲೇ ಇವೆ. ಇವುಗಳ ರೂಪುರೇಷೆ ಸುಧಾರಣೆಯಾಗುವ ಅವಶ್ಯಕತೆ ಇದ್ದರೂ ಸಹ ಸಧ್ಯಕ್ಕೆ ಇದು ಸಹಕಾರಿಯಾಗಿದೆ. ಈ ಉಪಕರಣಗಳ ಬಗ್ಗೆ ಪಶುಸಂಗೋಪನಾ ಪಾಲಿಟೆಕ್ನಿಕ್, ಶಿಗ್ಗಾವಿ, ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಲಯ, ಬೀದರ ಇಲ್ಲಿ ಹಾಗೂ ಐಐಟಿ, ಪುಣೆ ಇವರು ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ ಶಿವಮೊಗ್ಗ ಇವರ ಸಹಯೋಗದಲ್ಲಿ ವಿವಿಧ ರೀತಿಯ ಜಾನುವಾರುಗಳನ್ನು ಎತ್ತುವ ಉಪಕರಣಗಳ ಕುರಿತು ಸಂಶೋಧನೆಗಳನ್ನು ಮಾಡಿದ್ದು, ಇವು ಇನ್ನೂ ಪರೀಕ್ಷೆಯ ಹಂತದಲ್ಲಿದೆ.ಒಂದೆರಡು ಉಪಕರಣಗಳು ಉತ್ತಮ ಫಲಿತಾಂಶವನ್ನು ಸಹ ನೀಡಿವೆ. ಅಲ್ಲದೇ ರೈತರೇ ಅವರ ಅನುಭವದಂತೆ ಕೆಲವು ಉಪಕರಣಗಳನ್ನು ಅಭಿವೃದ್ಧಿ ಪಡಿಸಿರುತ್ತಾರೆ. ಈ ಉಪಕರಣಕ್ಕೆ ಸುಮಾರು 15000-25000 ರೂ ವೆಚ್ಚ ಲಗಲುತ್ತಿದ್ದು, ಹಾಲು ಉತ್ಪಾದಕರ ಸಹಕಾರ ಸಂಘ, ಸ್ವಯಂ ಸೇವಾ ಸಂಸ್ಥೆಗಳು ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಈ ಉಪಕರಣವನ್ನು ಇಟ್ಟು ರೈತರು ಇದರ ಉಪಯೋಗ ಪಡೆಯಬಹುದಾಗಿದೆ.
ರೈತರು ಜಾನುವಾರುಗಳನ್ನು ಸಾಕುವಾಗ ಉತ್ತಮ ಪೋಷಣೆ ನೀಡಿದರೆ ನಂತರ ಬರಬಹುದಾದ ತೊಂದರೆ ನೀಗಿಸಬಹುದು.

ಈ ರೀತಿ ನೆಲಹಿಡಿದ ಹಲವಾರು ಜಾನುವಾರುಗಳನ್ನು ರಕ್ಷಿಸಿ ಪ್ರಾಣ ಉಳಿಸಲು, ಜಾನುವಾರು ಎತ್ತುವ ಬಗ್ಗೆ ಕಂಡು ಹಿಡಿದ ಉಪಕರಣಗಳನ್ನು ಜಾಸ್ತಿ ಪ್ರಮಾಣದಲ್ಲಿ ತಯಾರಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ , ಗೋಶಾಲೆಗಳಿಗೆ ನೀಡುವ ಬಗ್ಗೆ ಸಂಶೋಧನೆಗೆ ಹಾಗು ಉತ್ಪಾದನೆಗೆ ಹಣಕಾಸು ಸಹಾಯ ದೊರಕಿದರೆ ರೈತರಿಗೆ ಅನುಕೂಲವಾಗಲಿದೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ

ಡಾ:ಎನ್.ಬಿ.ಶ್ರೀಧರ
ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರು
ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ
ಪಶುವೈದ್ಯಕೀಯ ಮಹಾವಿದ್ಯಾಲಯದ ಅವರಣ, ಶಿವಮೊಗ್ಗ-577204
ಮಿಂಚಂಚೆ:sridhar_vet@rediffmail.com, Phone: 9448059777

error: Content is protected !!