*ಪರಿಣಾಮಕಾರಿಯಾಗಿ ಕಾರ್ಯವೆಸಲು ತಾಂತ್ರಿಕ ಕಾರ್ಯಾಗಾರ ಸಹಕಾರಿ: ಡಿಸಿ*


ಶಿವಮೊಗ್ಗ ಮಾರ್ಚ್ 11 ಎಲ್ಲ ಕ್ಷೇತ್ರಗಳಲ್ಲಿ ನಿರಂತರವಾಗಿ ಹೊಸ ಸಂಶೋಧನೆಗಳು ಮತ್ತು ಬೆಳವಣಿಗೆಗಳು ಆಗುತ್ತಿದ್ದು ಇಂತಹ ತಾಂತ್ರಿಕ ಕಾರ್ಯಾಗಾರದ ಮೂಲಕ ಅವುಗಳ ಬಗ್ಗೆ ತಿಳಿದು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿತ್ತದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
       ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರ, ನವುಲೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇವರ ಸಹಯೋಗದಲ್ಲಿ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಪಶುಪಾಲನಾ ಇಲಾಖೆಯ  ಪಶುವೈದ್ಯಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ‘ಜಾನುವಾರುಗಳಲ್ಲಿನ ಪ್ರಚಲಿತ ಸಮಸ್ಯೆಗಳು’ ಕುರಿತಾದ ಒಂದು ದಿನದ ತಾಂತ್ರಿಕ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ವರ್ಷಕ್ಕೊಮ್ಮೆ ಈ ರೀತಿಯ ತಾಂತ್ರಿಕ ಕಾರ್ಯಾಗಾರ ಹಮ್ಮಿಕೊಂಡು ಬರುತ್ತಿರುವುದು ಒಳ್ಳೆಯ ವಿಚಾರ. ಆದರೆ ಇತ್ತೀಚೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಕ್ಷೇತ್ರದಲ್ಲಿ ಸಹ ಹೊಸ ಸಂಶೋಧನೆಗಳು ಹೆಚ್ಚಾಗಿವೆ. ಹಾಗೂ ಪಶು ವೈದ್ಯರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಹೊಸ ಬಗೆಯ ಸಮಸ್ಯೆಗಳು, ಸವಾಲುಗಳು ಎದುರಾಗುತ್ತಿರುತ್ತವೆ. ಇಂತಹ ಸಮಸ್ಯೆಗಳ ಕುರಿತು ವಿಶ್ವವಿದ್ಯಾಲಯ ಅಥವಾ ಸರ್ಕಾರಕ್ಕೆ ತಿಳಿಸಲು ಕಾರ್ಯಾಗಾರಗಳು ಉತ್ತಮ ವೇದಿಕೆಯಾಗಿದೆ. ಹಾಗೂ ಕಾರ್ಯಾಗಾರದಲ್ಲಿ ವಿವಿಧ ವಿಷಯ, ಚರ್ಚೆ, ವಿನಿಮಯ ಮಾಡಿಕೊಂಡು, ಅಪ್‍ಡೇಟ್ ಆಗಬಹುದು. ಆದ್ದರಿಂದ ಪ್ರತಿ ತಿಂಗಳಿಗೆ ಒಂದು ಸೆಮಿನಾರ್ ಏರ್ಪಡಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.
      ವೈದ್ಯರು ಸೇರಿದಂತೆ ಸಿಬ್ಬಂದಿಗಳಿಗೆ ಕೌಶಲ್ಯ ತರಬೇತಿಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳ ಬಗ್ಗೆ ಅವರಿಗೆ ತಿಳಿಸಬಹುದು. ಹಾಗೂ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರಿಂದ ವೈದ್ಯರು ತಾವು ಅಪ್‍ಡೇಟ್ ಆಗಿ ರೈತರನ್ನು ಪರಿಣಾಮಕಾರಿಯಾಗಿ ತಲುಪಬಹುದು ಎಂದ ಅವರು ಇಂದಿನ ಕಾರ್ಯಾಗಾರ ಯಶಸ್ವಿಯಾಗಲಿ ಹಾಗೂ ಪ್ರತಿ ತಿಂಗಳು ಇಂತಹ ಸೆಮಿನಾರ್ ನಡೆಯಲಿ ಎಂದು ಆಶಿಸಿದರು.
    ಅಧ್ಯಕ್ಷತೆ ವಹಿಸಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಡಾ.ಎಂ.ಕೆ.ನಾಯಕ್ ಮಾತನಾಡಿ,  ಇಡೀ ವಿಶ್ವದಲ್ಲಿ ಆಹಾರ ಭದ್ರತೆ ಖಾತ್ರಿಪಡಿಸಿರುವ ಏಕೈಕ ರಾಷ್ಟ್ರ ನಮ್ಮದು. ಡಾ.ವರ್ಗೀಸ್ ಕುರಿಯನ್‍ರವರ ಬಿಳಿ ಕ್ರಾಂತಿಯ ಪರಿಣಾಮವಾಗಿ ಇಡೀ ವಿಶ್ವದ ಹಾಲಿನ ಪ್ರಮಾಣದಲ್ಲಿ ಶೇ.22 ಕೊಡುಗೆ ನಮ್ಮ ದೇಶದ್ದಾಗಿದೆ. ಪ್ರತಿ ದಿನ 200 ಮಿಲಿಯನ್ ಲೀಟರ್ ಹಾಲಿನ ಉತ್ಪನ್ನವಿದೆ. ನಮ್ಮ ದೇಶದಲ್ಲಿ ಪ್ರತಿ ಒಬ್ಬರಿಗೆ 280 ಗ್ರಾಂ ಹಾಲಿನ ಅವಶ್ಯಕತೆ ಇದೆ. ಆದರೆ ನಮ್ಮ ಉತ್ಪನ್ನದ ಪ್ರಕಾರ ತಲಾ 480 ಗ್ರಾಂ ಲಭ್ಯವಿದೆ. (ಜಾಗತಿಕವಾಗಿ) ತತ್ತಿ ಶೇ.7.2 ಮತ್ತು ಮಾಂಸ ಶೇ. 2.5 ಉತ್ಪಾದನೆ ಇದ್ದು ಲೈವ್‍ಸ್ಟಾಕ್(ಜಾನುವಾರು)ನಲ್ಲಿ ದೇಶ ಮೊದಲನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾಲು, ಮಾಂಸದಲ್ಲಿ ಶೇ. 5 ಮತ್ತು ಮೊಟ್ಟೆ ಉತ್ಪನ್ನದಲ್ಲಿ ಶೇ.10.19 ರಷ್ಟು ಹೆಚ್ಚಳವಾಗಿದೆ.
     ಆದರೆ ನಮ್ಮ ಪಶು-ಪ್ರಾಣಿಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವಾರು ಸಮಸ್ಯೆಗಳಿವೆ. ನಮ್ಮ ಜಾನುವಾರುಗಳಿಗೆ ಸರಿಯಾದ ಸೂರಿಲ್ಲ. ಬಿಡಾಡಿಯಾಗಿ ತಿರುಗುವುದು ಸಾಮಾನ್ಯವಾಗಿದೆ. ಹಾಗೂ ಹಾಲು ಕೊಡದ, ಲಾಭವಿಲ್ಲದ ಪ್ರಾಣಿಗಳನ್ನು ಕಸಾಯಿಖಾನೆಗೆ ಕಳುಹಿಸುವುದನ್ನು ಕೂಡ ಕಾಣುತ್ತಿದ್ದೇವೆ.
     ನಮ್ಮ ಜಾನುವಾರುಗಳು ರೋಗಮುಕ್ತವಾಗಿ ಆರೋಗ್ಯವಾಗಿರಬೇಕಾದರೆ ಅವುಗಳಿಗೆ ಉತ್ತಮ ಪೌಷ್ಟಿಕ ಆಹಾರ, ಹಸಿರು ಮೇವು, ಆಶ್ರಯ ಬೇಕಿದೆ. ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಅನೇಕ ವೈರಾಣುಗಳ ಸೋಂಕು ಹರಡುವುದನ್ನು ನಾವು ಕಾಣುತ್ತಿದ್ದೇವೆ. ಜಾನುವಾರುಗಳ, ಪಕ್ಷಿಗಳ ರೋಗಗಳು, ವೈರಾಣುಗಳ ಸೋಂಕು, ಸರಪಳಿ ಕುರಿತು ಸರ್ವೇಕ್ಷಣೆ, ವಿಚಕ್ಷಣೆ, ರೋಗಪತ್ತೆ ಆಗಬೇಕು. ಜೈವಿಕ ಭದ್ರತೆ ಕಾಯ್ದೆ ಮೂಲಕ ಇದು ಸಾಧ್ಯವಾಗುತ್ತದೆ. ನಮ್ಮ ದೇಶ ಆಹಾರ ಭದ್ರತೆ ಕಾಯ್ದೆ ಜಾರಿಗೊಳಿಸುವ ಮೂಲಕ ಆಹಾರ ಭದ್ರತೆ ನೀಡಿದೆ. ಜೊತೆಗೆ ಜೈವಿಕ ಭದ್ರತೆಯನ್ನು ಸಹ ನೀಡಬೇಕು. ಜೈವಿಕ ಭದ್ರತೆ ಇಲ್ಲದೆ ಆಹಾರ ಭದ್ರತೆ ಪರಿಪೂರ್ಣವಾಗುವುದಿಲ್ಲವೆಂದು ಅಭಿಪ್ರಾಯಪಟ್ಟರು.
      ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ.ಸಿ.ಆರ್.ಜಗದೀಶ್, ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳಾದ ಡಾ.ಬಿ.ಸಿ.ಹನುಂತಸ್ವಾಮಿ ಪಾಲ್ಗೊಂಡಿದ್ದರು.
      ವಿಜ್ಞಾನಿ(ಪಶು ವಿಜ್ಞಾನ) ಡಾ.ಅಶೋಕ್.ಎಂ, ಪಶು ವೈದ್ಯಾಧಿಕಾರಿ ಡಾ.ನಿಖಿತ್ ಎಂ.ಎಸ್, ಹಿರಿಯ ಪಶು ವೈದ್ಯಾಧಿಕಾರಿ ಡಾ.ಮಂಜುನಾಥ.ಎಸ್.ಪಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಹೆಚ್.ವಿ.ದಯಾನಂದ ಇವರು ಜಾನುವಾರುಗಳಲ್ಲಿ ಕಂಡು ಬರುವ ವಿವಿಧ ರೋಗಗಳ ಕುರಿತು ಮಾತನಾಡಿದರು.
     ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಬಿ.ಯಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಗರವಳ್ಳಿಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮುರಳೀಧರ್.ಕೆ.ನಿರೂಪಿಸಿದರು. ಕೆವಿಕೆ ವಿಜ್ಞಾನಿ ಹಾಗೂ ತರಬೇತಿ ಸಂಘಟಕ ಡಾ.ಅಶೋಕ್.ಎಂ ವಂದಿಸಿದರು.

error: Content is protected !!