ಶಿವಮೊಗ್ಗ: ರೋಟರಿ ಸಂಸ್ಥೆಯು ನಿರಂತರವಾಗಿ ಸಾಮಾಜಿಕವಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ಜನಮಾನಸ ತಲುಪುತ್ತಿದೆ. ಮುಂದಿನ ವರ್ಷಗಳಲ್ಲಿ ರೋಟರಿ ಸೇವೆಯು ಮತ್ತಷ್ಟು ಹೆಚ್ಚಾಗಬೇಕು ಎಂದು ರೋಟರಿ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ರಾಜು ಸುಬ್ರಹ್ಮಣ್ಯಂ ಹೇಳಿದರು.
ಶಿವಮೊಗ್ಗ ನಗರದ ಕಾಸ್ಮೋ ಕ್ಲಬ್ ಆವರಣದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ರೋಟರಿ ಅಂತರಾಷ್ಟ್ರೀಯ ಜಿಲ್ಲಾ 3182 ಜಿಲ್ಲಾ ತರಬೇತಿ ಕಾರ್ಯಕ್ರಮ “ಜ್ಞಾನ ಸಹ್ಯಾದ್ರಿ 2023” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಟರಿ ಸಂಸ್ಥೆಯ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಜವಬ್ದಾರಿ ನಿರ್ವಹಣೆ ಅತ್ಯಂತ ಮುಖ್ಯ. ನೂತನ ಅಧ್ಯಕ್ಷರು, ಕಾರ್ಯದರ್ಶಿಗಳು ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು. ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಿದರು.
ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚುವ ಜತೆಯಲ್ಲಿ ನಾಯಕತ್ವ ಮನೋಭಾವ ವೃದ್ಧಿಸುತ್ತದೆ. ಸಾಮಾಜಿಕ ಸ್ಥಿತಿಯ ಅರಿವು ಮೂಡಿಸುತ್ತದೆ. ಸಂಸ್ಥೆಯ ಮುಖಾಂತರ ಹೆಚ್ಚಿನ ಸೇವಾ ಕಾರ್ಯಗಳನ್ನು ನಡೆಸುವ ಜತೆಯಲ್ಲಿ ಸಂಸ್ಥೆಯನ್ನು ಬೆಳೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಾದಿಗಲ್ ಮಾತನಾಡಿ, ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳು ಹಿರಿಯ ಸದಸ್ಯರ ಸಲಹೆ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಬೇಕು. ಹಿರಿಯರ ಸಲಹೆಯಿಂದ ಸಂಸ್ಥೆಯು ಪರಿಣಾಮಕಾರಿ ಸೇವೆ ಸಲ್ಲಿಸಲು ಸಾಧ್ಯವಿದೆ. ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿಯೋಜಿತ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಮಾತನಾಡಿ, ರೋಟರಿ ಸಂಸ್ಥೆ ನಡೆದುಬಂದ ದಾರಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ರೋಟರಿ ಡೈರೆಕ್ಟರಿ ಹಾಗೂ ಮುಂದಿನ ಸಾಲಿನ ಯೋಜನೆಗಳ ಪುಸ್ತಕ ಬಿಡುಗಡೆಗೊಳಿಸಲಾಯಿತು.
ರೋಟರಿ ಪಿಡಿಜಿ ಅಭಿನಂದನ್ ಶೆಟ್ಟಿ, ಸಹಾಯಕ ಗವರ್ನರ್ ರವಿ ಕೋಟೋಜಿ, ಚೂಡಾಮಣಿ ಪವಾರ್, ದೇವಾನಂದ್, ಜೆ.ಪಿ.ಚಂದ್ರು, ಡಿ.ಎಸ್.ರವಿ, ಧರ್ಮೇಂದ್ರ ಸಿಂಗ್, ಪಾಲಾಕ್ಷ, ಪ್ರೀತಿ ಮೋಹನ್, ಶೇಷಪ್ಪ ರೈ, ಡಾ. ಗುಡದಪ್ಪ ಕಸಬಿ, ಜಿ.ವಿಜಯ್‌ಕುಮಾರ್, ಆನಂದಮೂರ್ತಿ, ಮಂಜುನಾಥ ರಾವ್ ಕದಂ ಉಪಸ್ಥಿತರಿದ್ದರು. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.