ಶಿವಮೊಗ್ಗ, ಸೆಪ್ಟೆಂಬರ್- 25 : ಜಂತುಹುಳು ನಾಶಕವನ್ನು 1 ರಿಂದ 16 ವರ್ಷದ ಮಕ್ಕಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ನೀಡುವುದರಿಂದ ಮಕ್ಕಳಲ್ಲಿ ಜಂತುಹುಳುವಿನಿಂದ ಉಂಟಾಗುವ ಆರೋಗ್ಯ ತೊಂದರೆಗಳನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗೀಹಳ್ಳಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶ್ರೀ ಚನ್ನಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬೆಕ್ಕಿನಕಲ್ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಂತುಹುಳು ನಾಶಕ ಮಾತ್ರವಲ್ಲದೆ, ಶುದ್ಧ ಆಹಾರ, ನೀರು ಹಾಗೂ ಆಹಾರ ಸೇವನೆ ವೇಳೆ ಕೈಯನ್ನು ಶುಭ್ರವಾಗಿ ತೊಳೆಯುವುದು. ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಕಡ್ಡಾಯವಾಗಿ ಶೌಚಾಲಯ ಬಳಕೆ, ಬರಿಗಾಲಿನಲ್ಲಿ ನಡೆಯದಿರುವುದು. ಸುತ್ತಮುತ್ತಲಿನ ಪರಿಸರದ ಸ್ವಚ್ಚತೆ ಕಾಪಾಡಿಕೊಳ್ಳುವುದರಿಂದ ಜಂತುಹುಳುಗಳಿಂದ ಉಂಟಾಗುವ ಅನಾರೋಗ್ಯವನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದರು.
ಜಂತುಹುಳುಗಳ ಸಮಸ್ಯೆಯಿಂದ ಏಕಾಗ್ರತೆ ಕೊರತೆ, ರಕ್ತಹೀನತೆ, ಆಯಾಸ, ಕಣ್ಣು ಮಂಜಾಗುವುದು ಹಾಗೂ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಇದು ತಕ್ಷಣ ಅನಾರೋಗ್ಯವಾಗಿ ಕಾಡದಿದ್ದರು ದೀರ್ಘಕಾಲದ ನಂತರ ತೀವ್ರ ತರದ ಅನಾರೋಗ್ಯಕ್ಕೆ ಕಾರಣವಾಗಲಿದೆ ಎಂದು ಅವರು ಎಚ್ಚರಿಸಿದರು.
ಜಂತುಹುಳು ನಾಶಕ ಮಾತ್ರೆಯಿಂದ ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬೆಳವಣಿಗೆಯಾಗುತ್ತದೆ. ಮಾತ್ರೆಯನ್ನು ನೇರವಾಗಿ ನುಂಗದೇ ಅಗಿದು ನುಂಗಬೇಕು ಆಗ ಮಾತ್ರ ಪರಿಣಾಮ ನೀಡುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಆರೋಗ್ಯಾಧಿಕಾರಿ ಡಾ. ನಟರಾಜ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದಿನೇಶ್, ಡಾ. ವೈಜಯಂತಿಮಾಲಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!